HomeIndiaಲಿಫ್ಟ್ ಬಾಗಿಲು ಹಾಕುವ ಮುನ್ನವೇ ದಿಢೀರ್ ಕುಸಿತ; ಮಹಡಿ ನಡುವೆ ಸಿಲುಕಿ ಮಹಿಳೆ ಸಾವು |...

ಲಿಫ್ಟ್ ಬಾಗಿಲು ಹಾಕುವ ಮುನ್ನವೇ ದಿಢೀರ್ ಕುಸಿತ; ಮಹಡಿ ನಡುವೆ ಸಿಲುಕಿ ಮಹಿಳೆ ಸಾವು | Shocking Video

ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಾದ ತಾಂತ್ರಿಕ ದೋಷ ಹಾಗೂ ಸುರಕ್ಷತಾ ಲೋಪಕ್ಕೆ 50 ವರ್ಷದ ಮಹಿಳೆಯೊಬ್ಬರು ಭೀಕರವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲು ನಗರದಲ್ಲಿ ನಡೆದಿದೆ. ಲಿಫ್ಟ್‌ನಿಂದ ಹೊರಬರುತ್ತಿದ್ದ ವೇಳೆ ಬಾಗಿಲು ಮುಚ್ಚುವ ಮೊದಲೇ ಲಿಫ್ಟ್ ಕೆಳಕ್ಕೆ ಜಾರಿದ ಪರಿಣಾಮ, ಮಹಡಿ ಮತ್ತು ಲಿಫ್ಟ್‌ನ ನಡುವೆ ಸಿಲುಕಿ ವಿನೀತಾ (50) ಎಂಬುವರು ದುರ್ಮರಣಕ್ಕೀಡಾಗಿದ್ದಾರೆ.

ಒಂಗೋಲು ನಗರದ ಮಾರುಕಟ್ಟೆ ಕೇಂದ್ರ ಭಾಗದಲ್ಲಿರುವ ‘ಸಾಯಿ ಸೂರ್ಯ ಅಪಾರ್ಟ್‌ಮೆಂಟ್‌’ನಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿನೀತಾ ಅವರು ಮತ್ತೊಬ್ಬ ಮಹಿಳೆ ಹಾಗೂ ಕಂದಮ್ಮನೊಂದಿಗೆ ಲಿಫ್ಟ್‌ನಲ್ಲಿ ಆಗಮಿಸಿದ್ದರು. ನಿಗದಿತ ಮಹಡಿ ತಲುಪಿದಾಗ ಜೊತೆಯಲ್ಲಿದ್ದ ಮಹಿಳೆ ಮತ್ತು ಮಗು ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿ ಹೊರಗೆ ಕಾಲಿಟ್ಟಿದ್ದಾರೆ. ಆದರೆ, ಅವರ ಹಿಂದೆಯೇ ವಿನೀತಾ ಅವರು ಹೊರಬರಲು ಹೆಜ್ಜೆ ಇಡುತ್ತಿದ್ದಂತೆ, ಬಾಗಿಲು ಮುಚ್ಚಿಕೊಳ್ಳುವ ಮುನ್ನವೇ ಯಾವುದೇ ಮುನ್ಸೂಚನೆಯಿಲ್ಲದೆ ಲಿಫ್ಟ್ ವೇಗವಾಗಿ ಕೆಳಕ್ಕೆ ಚಲಿಸಿದೆ.

ಇದರಿಂದಾಗಿ ವಿನೀತಾ ಅವರು ನೆಲ ಮಹಡಿಯ ಮೇಲ್ಭಾಗ ಮತ್ತು ಕೆಳಗೆ ಜಾರುತ್ತಿದ್ದ ಲಿಫ್ಟ್‌ನ ನಡುವೆ ಅರ್ಧಕ್ಕೆ ಸಿಲುಕಿಕೊಂಡಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ಜೊತೆಯಲ್ಲಿದ್ದ ಮಹಿಳೆ ಕೂಡಲೇ ಲಿಫ್ಟ್ ಬಟನ್‌ಗಳನ್ನು ಒತ್ತಿ ಮೇಲಕ್ಕೆ ತರಲು ಹರಸಾಹಸ ಪಟ್ಟಿದ್ದಲ್ಲದೆ, ಕೂಗಾಡಿ ಸಹಾಯಕ್ಕಾಗಿ ಯಾಚಿಸಿದ್ದಾರೆ. ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಮೂವರು ಅಪಾರ್ಟ್‌ಮೆಂಟ್ ನಿವಾಸಿಗಳು ರಕ್ಷಣೆಗೆ ಮುಂದಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೀವ್ರ ಪರಿಶ್ರಮದ ನಂತರ ಗಂಭೀರವಾಗಿ ಗಾಯಗೊಂಡಿದ್ದ ವಿನೀತಾ ಅವರನ್ನು ಹೊರತೆಗೆದು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ರಕ್ತಸ್ರಾವ ಹಾಗೂ ಪೆಟ್ಟಿನ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅಪಾರ್ಟ್‌ಮೆಂಟ್‌ನ ಲಿಫ್ಟ್ ಸಮರ್ಪಕ ನಿರ್ವಹಣೆ ಇಲ್ಲದೆ ಅನಾಹುತಕ್ಕೆ ಕಾರಣವಾಯಿತೇ ಎಂಬ ಬಗ್ಗೆ ನಿವಾಸಿಗಳು ತೀವ್ರ ಆಕ್ರೋಶ ಹೊರಹಾಕಿದ್ದು, ಸುರಕ್ಷತಾ ತಪಾಸಣೆಯ ಲೋಪಗಳ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular