ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಜಗತ್ತಿನಾದ್ಯಂತ ತೈಲ ಪೂರೈಕೆ ವ್ಯತ್ಯಯಗೊಂಡಿದೆ. ಇದರ ನೇರ ಪರಿಣಾಮ ಈಗ ಪಾಕಿಸ್ತಾನದ ಜನರ ಮೇಲೆ ಭಾರಿ ಹೊಡೆತ ನೀಡಿದೆ. ಮುಖ್ಯವಾಗಿ ಪೆಟ್ರೋಲ್ ಮೇಲೆ ಶೇ. 43 ರಷ್ಟು ಮತ್ತು ಡೀಸೆಲ್ ಮೇಲೆ ಬರೋಬ್ಬರಿ ಶೇ. 55 ರಷ್ಟು ಬೆಲೆಯನ್ನು ಏರಿಕೆ ಮಾಡುವ ಮೂಲಕ ಇಸ್ಲಾಮಾಬಾದ್ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ನಿನ್ನೆಯವರೆಗೆ 321 ರೂ. ಇದ್ದ ಪೆಟ್ರೋಲ್ ಇಂದು 458 ರೂ. ದಾಟಿದೆ. ಹಾಗೆಯೇ ನಿನ್ನೆ ಮೊನ್ನೆಯವರೆಗೆ 335 ರೂ. ಇದ್ದ ಡೀಸೆಲ್ ಬೆಲೆ ಇಂದು 520 ರೂ. ಗೆ ತಲುಪಿದೆ.
ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಪಾಕಿಸ್ತಾನದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾದ ಇಂಧನ ಬೆಲೆಗಳು.ಪೆಟ್ರೋಲ್ ಮೇಲೆ ಶೇ. 43, ಡೀಸೆಲ್ ಮೇಲೆ ಶೇ. 55 ರಷ್ಟು ಬೆಲೆ ಏರಿಸಲು ಸರ್ಕಾರದ ನಿರ್ಧರಿಸಿದ್ದು, ಇದರಿಂದ ಲೀಟರ್ ಪೆಟ್ರೋಲ್ ಬೆಲೆ 458 ರೂ. ಹಾಗೂ ಡೀಸೆಲ್ ಬೆಲೆ 520 ರೂ.ಗೆ ಏರಿಕೆಯಾಗಿದೆ.
ಬೆಲೆ ಏರಿಕೆಯ ನಂತರ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಾಗಿದೆ?
ಶುಕ್ರವಾರದಿಂದ (ಏಪ್ರಿಲ್ 3, 2026) ಜಾರಿಗೆ ಬರಲಿರುವ ಪರಿಷ್ಕೃತ ದರಗಳ ಪ್ರಕಾರ, ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ಬೆಲೆ 458.40 ರೂಪಾಯಿಗಳಿಗೆ (1.64 ಡಾಲರ್) ತಲುಪಿದೆ. ಇನ್ನು ಸಾರಿಗೆ ಕ್ಷೇತ್ರಕ್ಕೆ ಅತ್ಯಂತ ಅಗತ್ಯವಾದ ಡೀಸೆಲ್ ಬೆಲೆ ಏಕಾಏಕಿ 520.35 ರೂಪಾಯಿಗಳಿಗೆ (1.86 ಡಾಲರ್) ತಲುಪಿರುವುದು ಅಲ್ಲಿನ ಜನರನ್ನು ದಿಗ್ಭ್ರಮೆಗೊಳಿಸಿದೆ. “ಸರ್ಕಾರದ ಸಂಪನ್ಮೂಲಗಳು ಸೀಮಿತವಾಗಿವೆ. ಈ ಯುದ್ಧ ಯಾವಾಗ ಮುಗಿಯುತ್ತದೆಯೋ ತಿಳಿಯದ ಸ್ಥಿತಿ ಇದೆ. ಹಾಗಾಗಿ ಈ ಭಾರವನ್ನು ಜನರ ಮೇಲೆ ಹಾಕದೆ ಅನ್ಯಮಾರ್ಗವಿಲ್ಲ” ಎಂದು ಪೆಟ್ರೋಲಿಯಂ ಸಚಿವ ಅಲಿ ಪರ್ವೈಜ್ ಮಲಿಕ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ವಾರಕ್ಕೆ ನಾಲ್ಕು ದಿನವಷ್ಟೇ ಕೆಲಸದ ದಿನಗಳು: ಬೆಲೆ ಏರಿಕೆಯ ಜೊತೆಗೆ ಪಾಕಿಸ್ತಾನ ಸರ್ಕಾರವು ಕೆಲವು ಕಠಿಣ ಉಳಿತಾಯ ಕ್ರಮಗಳನ್ನು ಘೋಷಿಸಿದೆ. ಇಂಧನ ಉಳಿಸಲು ಸರ್ಕಾರಿ ಕಚೇರಿಗಳಿಗೆ ವಾರಕ್ಕೆ ನಾಲ್ಕು ದಿನಗಳ ಕಾಲವಷ್ಟೇ ಕೆಲಸದ ದಿನಗಳನ್ನಾಗಿ ಬದಲಿಸಲಾಗಿದೆ. ಶಾಲೆಗಳಿಗೆ ರಜೆಯನ್ನು ವಿಸ್ತರಿಸಲಾಗಿದ್ದು, ಕೆಲವು ತರಗತಿಗಳನ್ನು ಆನ್ಲೈನ್ ಮೂಲಕ ನಡೆಸಲು ಸೂಚಿಸಲಾಗಿದೆ. 24 ಕೋಟಿ ಜನಸಂಖ್ಯೆಯಲ್ಲಿ ಶೇ. 25 ರಷ್ಟು ಜನರು ಬಡತನದಲ್ಲಿರುವ ಪಾಕಿಸ್ತಾನಕ್ಕೆ ಈ ಬೆಲೆ ಏರಿಕೆಯು ಆಹಾರ ಸಂಕ್ಷೋಭೆಯನ್ನು ತರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಎಚ್ಚರಿಸಿದೆ.
ಹಾರ್ಮುಜ್ ಜಲಸಂಧಿ ಬಂದ್: ಫೆಬ್ರವರಿ 28 ರಂದು ಆರಂಭವಾದ ಇರಾನ್ ಯುದ್ಧದ ಕಾರಣದಿಂದಾಗಿ, ವಿಶ್ವದ ಇಂಧನ ಪೂರೈಕೆಗೆ ಪ್ರಮುಖವಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು ಇರಾನ್ ಮುಚ್ಚಿದೆ. ಜಗತ್ತಿನ ಒಟ್ಟು ತೈಲ ಪೂರೈಕೆಯಲ್ಲಿ ಐದನೇ ಒಂದು ಭಾಗದಷ್ಟು ಈ ಮಾರ್ಗದ ಮೂಲಕವೇ ಸಾಗಬೇಕಿದೆ. ಇರಾನ್ ಹೇರಿರುವ ನಿರ್ಬಂಧಗಳಿಂದಾಗಿ ಕೇವಲ ಪಾಕಿಸ್ತಾನ ಮಾತ್ರವಲ್ಲದೆ, ಬಾಂಗ್ಲಾದೇಶವೂ ಸಹ ಅಡುಗೆ ಅನಿಲ (LPG) ಮತ್ತು ಸಿಎನ್ಜಿ (CNG) ಬೆಲೆಗಳನ್ನು ಶೇ. 29 ರಷ್ಟು ಹೆಚ್ಚಿಸಿ ಜನರ ಮೇಲೆ ಆರ್ಥಿಕ ಹೊರೆ ಹೊರಿಸಿದೆ.

