ಇದು ಕಣ್ಣಿಗೆ ಕಾಣದ ಶತ್ರು. ಸಿನಿಮಾಗಳಲ್ಲಿ ತೋರಿಸುವಂತೆ ಸೂಕ್ಷ್ಮಜೀವಿಗಳು ದಾಳಿ ಮಾಡಿದ ಕೆಲವೇ ಗಂಟೆಗಳಲ್ಲಿ ಮನುಷ್ಯ ಪ್ರಾಣ ಬಿಡುವ ಘಟನೆ ಈಗ ನಿಜ ಜೀವನದಲ್ಲೂ ಸಂಭವಿಸುತ್ತಿದೆ. ಆಸ್ಟ್ರೇಲಿಯಾದ ಪರ್ತ್ ಮೂಲದ ಅಲೆಕ್ಸಾಂಡರ್ ಫಿಲಾಜೀನ್ (21) ಎಂಬ ವಿದ್ಯಾರ್ಥಿ ಇತ್ತೀಚೆಗೆ ಈ ಬ್ಯಾಕ್ಟೀರಿಯಾಕ್ಕೆ ಬಲಿಯಾಗಿದ್ದಾನೆ.
ಯೆಸ್, ಸೋಂಕು ತಗುಲಿದ ಕೆಲವೇ ಗಂಟೆಗಳಲ್ಲಿ ಪ್ರಾಣಹರಣ ಮಾಡುವ ‘ಮೆನಿಂಗೋಕಾಕಲ್-ಬಿ’ ಎಂಬ ಭೀಕರ ಬ್ಯಾಕ್ಟೀರಿಯಾ ಈಗ ಜಗತ್ತನ್ನು ಬೆಚ್ಚಿಬೀಳಿಸಿದೆ. ಆಸ್ಟ್ರೇಲಿಯಾದ 21 ವರ್ಷದ ವಿದ್ಯಾರ್ಥಿ ಅಲೆಕ್ಸಾಂಡರ್ ಈ ಮರಣಾಂತಿಕ ಸೋಂಕಿಗೆ ಬಲಿಯಾಗಿದ್ದು, ಲಸಿಕೆ ಪಡೆದಿದ್ದರೂ ಸೋಂಕು ತಡೆಗಟ್ಟಲು ಸಾಧ್ಯವಾಗದಿರುವುದು ಆತಂಕ ಮೂಡಿಸಿದೆ.
ಏನಿದು ಘಟನೆ?
ಅಲೆಕ್ಸಾಂಡರ್ ಆಸ್ಟ್ರಿಯಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಇತ್ತೀಚೆಗೆ ಪೋರ್ಚುಗಲ್ನಿಂದ ವಿಯನ್ನಾಕ್ಕೆ ಪ್ರಯಾಣ ಬೆಳೆಸಿದ್ದ ಅವನಿಗೆ ದಿಢೀರನೆ ಅಸ್ವಸ್ಥತೆ ಕಾಣಿಸಿಕೊಂಡಿತು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ, ಕೇವಲ ಕೆಲವೇ ಗಂಟೆಗಳಲ್ಲಿ ಅವನು ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಅವನಿಗೆ ಮೆನಿಂಗೋಕಾಕಲ್ ಲಸಿಕೆ ನೀಡಲಾಗಿದ್ದರೂ, ಅತ್ಯಂತ ವೇಗವಾಗಿ ರೂಪಾಂತರಗೊಳ್ಳುವ ‘ಬಿ-ಸ್ಟ್ರೈನ್’ (B-strain) ಸೋಂಕು ತಗುಲಿದ್ದರಿಂದ ಲಸಿಕೆ ಫಲಕಾರಿಯಾಗಲಿಲ್ಲ ಎನ್ನಲಾಗಿದೆ.
ಮೆನಿಂಗೋಕಾಕಲ್–ಬಿ ಎಂದರೇನು?
ಇದು ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪದರಗಳಲ್ಲಿ (Meninges) ಉರಿಯೂತವನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಸೋಂಕು. ಇದರಲ್ಲಿ A, B, C, W, X, Y, Z ಎಂಬ ವಿವಿಧ ವಿಧಗಳಿದ್ದು, ‘ಬಿ’ ವಿಧವು ಅತ್ಯಂತ ಅಪಾಯಕಾರಿ ಮತ್ತು ಮಾರಕವಾಗಿದೆ. ಇದು ಹೆಚ್ಚಾಗಿ ಹದಿಹರೆಯದವರು ಮತ್ತು ಯುವಕರನ್ನು ಗುರಿಯಾಗಿಸುತ್ತದೆ.
ಪ್ರಮುಖ ಲಕ್ಷಣಗಳು
ಈ ಬ್ಯಾಕ್ಟೀರಿಯಾ ದೇಹಕ್ಕೆ ಸೇರಿದ 1 ರಿಂದ 10 ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:
- ತೀವ್ರ ತಲೆನೋವು ಮತ್ತು ಕುತ್ತಿಗೆ ಬಿಗಿಯಾದಂತಾಗುವುದು.
- ವಾಂತಿ ಮತ್ತು ವಾಕರಿಕೆ.
- ಬೆಳಕನ್ನು ನೋಡಲು ಕಷ್ಟವಾಗುವುದು (Photophobia).
- ಚರ್ಮದ ಮೇಲೆ ಕೆಂಪು ಅಥವಾ ನೇರಳೆ ಬಣ್ಣದ ದದ್ದುಗಳು.
- ಕಾಲು ಮತ್ತು ಕೈಗಳು ತಣ್ಣಗಾಗುವುದು.
- ತೀವ್ರ ಜ್ವರ ಮತ್ತು ಗೊಂದಲದ ಸ್ಥಿತಿ.
ಮುನ್ನೆಚ್ಚರಿಕೆ ಕ್ರಮಗಳು
- ಲಸಿಕೆ (Vaccination): 11-12 ವರ್ಷ ವಯಸ್ಸಿನಲ್ಲಿ ಮೆನಿಂಗೋಕಾಕಲ್ ಲಸಿಕೆ ಮತ್ತು 16ನೇ ವಯಸ್ಸಿನಲ್ಲಿ ಬೂಸ್ಟರ್ ಡೋಸ್ ಪಡೆಯುವುದು ಉತ್ತಮ.
- ಶುಚಿತ್ವ: ಸೋಪಿನಿಂದ ಆಗಾಗ ಕೈ ತೊಳೆಯುವುದು, ಬಳಸದ ಕೈಗಳಿಂದ ಕಣ್ಣು, ಮೂಗು ಮುಟ್ಟಿಕೊಳ್ಳದಿರುವುದು.
- ಹಂಚಿಕೊಳ್ಳಬೇಡಿ: ಆಹಾರ, ಪಾನೀಯ, ಲಿಪ್ಸ್ಟಿಕ್ ಅಥವಾ ಸಿಗರೇಟುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಈ ಬ್ಯಾಕ್ಟೀರಿಯಾ ಹರಡಲು ಕಾರಣವಾಗಬಹುದು.
- ತಕ್ಷಣದ ಚಿಕಿತ್ಸೆ: ಜ್ವರ ಅಥವಾ ಕುತ್ತಿಗೆ ನೋವಿನಂತಹ ಲಕ್ಷಣ ಕಂಡರೆ ವಿಳಂಬ ಮಾಡದೆ ವೈದ್ಯರನ್ನು ಸಂಪರ್ಕಿಸಿ.

