ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಫ್ಲೈ91 (Fly91) ವಿಮಾನವು ತಾಂತ್ರಿಕ ದೋಷದಿಂದಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತುವ ಮೂಲಕ ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಫ್ಲೈ91 ಏರ್‌ಲೈನ್ಸ್ ವಿಮಾನ IC3401 (ATR ಟರ್ಬೋಪ್ರೊಪ್).ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 3 ಗಂಟೆಗೆ ಹೊರಟು, ಸಂಜೆ 4:30ಕ್ಕೆ ಹುಬ್ಬಳ್ಳಿಯಲ್ಲಿ ಇಳಿಯಬೇಕಿತ್ತು.
ಏನಾಯಿತು? : ಹುಬ್ಬಳ್ಳಿ ತಲುಪುವ ವೇಳೆಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿಮಾನಕ್ಕೆ ಇಳಿಯಲು ಸಾಧ್ಯವಾಗಲಿಲ್ಲ.ಪರಿಸ್ಥಿತಿಯನ್ನು ನಿಭಾಯಿಸಲು ವಿಮಾನವು ಮುಂಡಗೋಡು, ದಾವಣಗೆರೆ ಮತ್ತು ಶಿವಮೊಗ್ಗ ಪ್ರದೇಶಗಳ ಮೇಲೆ ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತುತ್ತಿತ್ತು. ಅಂತಿಮವಾಗಿ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಿ, ರಾತ್ರಿ 7:30 ರ ಸುಮಾರಿಗೆ ಸುರಕ್ಷಿತವಾಗಿ ಇಳಿಸಲಾಯಿತು.
ಪ್ರಯಾಣಿಕರ ಆಕ್ರಂದನ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಪ್ರಯಾಣಿಕರು ಭಯದಿಂದ ದೈವ ಪ್ರಾರ್ಥನೆ ಮಾಡುತ್ತಿರುವುದು, ಜೋರಾಗಿ ಅಳುತ್ತಿರುವುದು ಮತ್ತು ಕಿರುಚಾಡುತ್ತಿರುವುದು ಕಂಡುಬಂದಿದೆ. ವಿಮಾನವು ತೀವ್ರವಾಗಿ ಅಲುಗಾಡುತ್ತಿದ್ದರಿಂದ (Turbulence) ಪ್ರಯಾಣಿಕರು ಪ್ರಾಣಭಯದಿಂದ ತತ್ತರಿಸಿದ್ದರು.

