ಬೀದರ್: ಸೂರ್ಯಶಿಕಾರಿಗೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ರಣ ಬಿಸಿಲ ಹೊಡೆತಕ್ಕೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ. ಬಿಸಿಲ ಜಳ ಮನುಷ್ಯರನ್ನು ಮಾತ್ರವಲ್ಲ ಮೂಕ ಪ್ರಾಣಿಗಳನ್ನೂ ಕಂಗೆಡಿಸಿದೆ. ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಉಸಿರಾಡುವುದೂ ಸಾಧ್ಯವಾಗದ ದ್ದುಸ್ಥಿತಿ ಎದುರಾಗಿದೆ. ಯುವಕನೊಬ್ಬ ತರಕಾರಿ ತರಲು ಮನೆಯಿಂದ ಹೊರ ಹೋದವನು ಸುಡುಬಿಸಿಲಿನಿಂದ ಸಾವನ್ನಪ್ಪಿರುವ ದಾರುಣ ಘಟನೆ ಬೀದರ್ ನಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಕಮಲನಗರ ಪಟ್ಟಣದ ಡಿಗ್ಗಿ ರೋಡ್ ಬಳಿ ಈ ದುರಂತ ಸಂಭವಿಸಿದೆ. ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್ ಅಹ್ಮದ್ (20) ಸಾವನ್ನಪ್ಪಿದ ಯುವಕ. ಬೀದರ್ ನಲ್ಲಿ ಕೆಲದಿನಗಳಿಂದ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ.
ಅಸಾಧ್ಯವಾದ ಬಿಸಿಲಿನ ಝಳಕ್ಕೆ ಮಗ ಸಾವನ್ನಪ್ಪಿದ್ದಾನೆ ಎಂದು ಮೊಹಮ್ಮದ್ ಸಮೀರ್ ತಂದೆ ಕಣ್ಣೀರಿಟ್ಟಿದ್ದಾರೆ. ಯುವಕ ತರಕಾರಿ ತರಲು ಹೋಗಿದ್ದ. ಬಳಿಕ ಮನೆಗೆ ವಾಪಸ್ಸಾಗುವಾಗ ತಲೆ ತಿರುಗಿದಂತಾಗಿದ್ದು, ಕೂಡಲೇ ಸಮೀಪದಲ್ಲಿಯೇ ಇದ್ದ ಮೆಕಾನಿಕ್ ಅಂಗಡಿಯಲ್ಲಿ ನೀರು ಕುಡಿದು ವಿಶ್ರಾಂತಿ ಪಡೆದಿದ್ದ. ಬಳಿಕ ಮನೆಯತ್ತ ಸಾಗಿದ್ದ ಯುವಕ ಏಕಾಏಕಿ ಡಿಗ್ಗಿ ಗ್ರಾಮದ ರಸ್ತೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ರಣ ಬಿಸಿಲಿನಿಂದಾಗಿ ಮಗ ಸಾವನ್ನಪ್ಪಿದ್ದಾನೆ ಎಂದು ತಂದೆ ಲಯಿಕ್ ಅಹ್ಮದ್ ಅಳಲು ತೋಡಿಕೊಂಡಿದ್ದಾರೆ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

