ದಿ. ಜಯಲಲಿತಾ ಆಪ್ತ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಡಿಎಂಕೆ ಪಕ್ಷ ಸೇರುವ ಮೂಲಕ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದ್ದರು. ಅವರಿಗೆ ಡಿಎಂಕೆ ಯಾವ ಹುದ್ದೆ ನೀಡಲಿದೆ? ಎಂಬುದು ಚರ್ಚೆಗೆ ಕಾರಣವಾಗಿತ್ತು.
ತಮಿಳುನಾಡು ವಿಧಾನಸಭಾ ಚುನಾವಣೆ 2026ಕ್ಕೂ ಮುನ್ನ ನಡೆದ ಈ ಮಹತ್ವದ ಬೆಳವಣಿಗೆ ರಾಜ್ಯ ರಾಜಕೀಯದ ಚಿತ್ರಣ ಬದಲಿಸಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ 234 ಸ್ಥಾನಗಳಿಗೆ ಮಾರ್ಚ್ 10ರ ಬಳಿಕ ಚುನಾವಣೆ ದಿನಾಂಕವನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.
ರಾಜ್ಯದ ಆಡಳಿತ ಪಕ್ಷ ಡಿಎಂಕೆ ಸೇರುವ ಮೂಲಕ ಓ. ಪನ್ನೀರ್ ಸೆಲ್ವಂ ಅಚ್ಚರಿ ಮೂಡಿಸಿದ್ದರು. ಈಗ ಓ. ಪನ್ನೀರ್ ಸೆಲ್ವಂ ಪುತ್ರ 2 ಕ್ಷೇತ್ರದಲ್ಲಿ ಟಿಕೆಟ್ ನೀಡುವಂತೆ ಡಿಎಂಕೆ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಯಾವ-ಯಾವ ಕ್ಷೇತ್ರಗಳು?; ಓ. ಪನ್ನೀರ್ ಸೆಲ್ವಂ ಪುತ್ರ ಪಿ.ರವೀಂದ್ರನಾಥ್ ಕುಮಾರ್ ಶುಕ್ರವಾರ ಡಿಎಂಕೆ ಪಕ್ಷಕ್ಕೆ ವಿಧಾನಸಭೆ ಚುನಾವಣೆ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರು ಆಂಡಿಪಟ್ಟಿ ಮತ್ತು ಬೋಡಿನಾಯಕನೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇವು ಥೇಣಿ ಜಿಲ್ಲೆಯ 2 ಪ್ರಮುಖ ವಿಧಾನಸಭಾ ಕ್ಷೇತ್ರಗಳಾಗಿವೆ. ಈಗ ವಿಧಾನಸಭಾ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳು ಸಾಕಷ್ಟು ರಾಜಕೀಯ ಕುತೂಹಲ ಮೂಡಿಸಿವೆ. ಈ ಕ್ಷೇತ್ರವು ಮಾಜಿ ಮುಖ್ಯಮಂತ್ರಿ ಓ. ಪನ್ನೀರ್ಸೆಲ್ವಂ ಭದ್ರಕೋಟೆಯೆಂದು ಖ್ಯಾತಿಗಳಿಸಿವೆ.
ಹಾಗಾದರೆ ಈ ಬಾರಿಯ ಚುನಾವಣೆಗೆ ಓ. ಪನ್ನೀರ್ ಸೆಲ್ವಂ ಕಣಕ್ಕಿಳಿಯುವುದಿಲ್ಲವೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪುತ್ರನಿಗಾಗಿ ಓ. ಪನ್ನೀರ್ ಸೆಲ್ವಂ ಕ್ಷೇತ್ರವನ್ನು ತ್ಯಾಗ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿಗಳಿವೆ.
ಥೇಣಿ ಕ್ಷೇತ್ರದ ಮಾಜಿ ಸಂಸದ ಪಿ.ರವೀಂದ್ರನಾಥ್ ಕುಮಾರ್ ಮಾಹಿತಿಗಳ ಪ್ರಕಾರ ಬೋಡಿನಾಯಕನೂರು ಕ್ಷೇತ್ರದ ಟಿಕೆಟ್ ಓ. ಪನ್ನೀರ್ ಸೆಲ್ವಂ ಅವರಿಗೆ ನೀಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ತಂದೆ, ಮಗ ಎರಡು ಕ್ಷೇತ್ರಕ್ಕಾಗಿ ಟಿಕೆಟ್ಗೆ ಅರ್ಜಿ ಹಾಕಿದ್ದಾರೆ.
“ಎರಡು ಕ್ಷೇತ್ರದ ಟಿಕೆಟ್ಗಾಗಿ ತಂದೆಯ ಪರವಾಗಿ ನಾನು ಅರ್ಜಿ ಸಲ್ಲಿಸಿದ್ದೇನೆ. ಡಿಎಂಕೆ ಟಿಕೆಟ್ ನೀಡಲಿದೆ ಎಂಬ ವಿಶ್ವಾಸವಿದೆ. ಟಿಕೆಟ್ ನೀಡುವ ಕುರಿತು ಎಂ.ಕೆ.ಸ್ಟಾಲಿನ್ ಭರವಸೆ ಕೊಟ್ಟಿದ್ದರು” ಎಂದು ಪಿ.ರವೀಂದ್ರನಾಥ್ ಕುಮಾರ್ ಹೇಳಿದ್ದಾರೆ.
ಹಲವು ಬಾರಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭೇಟಿಯಾಗಿದ್ದ ಓ. ಪನ್ನೀರ್ ಸೆಲ್ವಂ ಫೆಬ್ರವರಿ 27ರಂದು ಪುತ್ರ ಮತ್ತು ಅಪಾರ ಬೆಂಬಲಿಗರ ಜೊತೆ ಡಿಎಂಕೆ ಕಚೇರಿಯಲ್ಲಿ ಎಂ.ಕೆ.ಸ್ಟಾಲಿನ್ ಸಮ್ಮುಖದಲ್ಲಿ ಪಕ್ಷವನ್ನು ಸೇರಿದ್ದಾರೆ.
ಎಐಎಡಿಎಂಕೆ ಪಕ್ಷದಲ್ಲಿದ್ದ, ದಿ.ಜಯಲಲಿತಾ ಪರಮಾಪ್ತ ನಾಯಕರಾಗಿದ್ದ ಓ. ಪನ್ನೀರ್ ಸೆಲ್ವಂ ಈ ಡಿಎಂಕೆ ಸೇರ್ಪಡೆ ಚರ್ಚೆಯ ವಿಚಾರವಾಗಿದೆ. ಜಯಲಲಿತಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗ ಓ. ಪನ್ನೀರ್ ಸೆಲ್ವಂ ತಮಿಳುನಾಡು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಎಐಎಡಿಎಂಕೆ ಪಕ್ಷ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದು, ಎನ್ಡಿಎ ಮೈತ್ರಿಕೂಟ ಸೇರಿದೆ. ಇದನ್ನು ವಿರೋಧಿಸಿ ಓ. ಪನ್ನೀರ್ ಸೆಲ್ವಂ, ವಿ.ಕೆ.ಶಶಿಕಲಾ ಪಕ್ಷದಿಂದ ಹೊರ ಬಂದಿದ್ದಾರೆ. ವಿ.ಕೆ.ಶಶಿಕಲಾ ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ಸದ್ಯ ಎಐಎಡಿಎಂಕೆ ಪಕ್ಷವನ್ನು ತಮಿಳುನಾಡು ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಮುನ್ನಡೆಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಎಷ್ಟು ಸೀಟು ಗಳಿಸಲಿದೆ? ಎಂದು ಕಾದು ನೋಡಬೇಕಿದೆ. 2021ರ ಚುನಾವಣೆಯಲ್ಲಿ ಎಐಎಡಿಎಂಕೆ ಮೈತ್ರಿಕೂಟ 66 ಸೀಟುಗಳಲ್ಲಿ ಜಯಗಳಿಸಿತ್ತು.

