ಮೈಸೂರು ಮಹಾನಗರ ಪಾಲಿಕೆ ಇನ್ನು ಮುಂದೆ ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಲಿದೆ. ಈ ಕುರಿತು ರಾಜ್ಯಪತ್ರದ ಮೂಲಕ ಕರ್ನಾಟಕ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. ಬಿಬಿಎಂಪಿಯನ್ನು ಜಿಬಿಎ ಮಾಡಿದ್ದ ಸರ್ಕಾರ ಈಗ ಮೈಸೂರು ಪಾಲಿಕೆಯನ್ನು ಬದಲಾವಣೆ ಮಾಡಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ. ಮಂಜುನಾಥ, ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ.
ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಸೆಕ್ಷನ್-3 ಮತ್ತು 4ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಘನತೆವೆತ್ತ ಕರ್ನಾಟಕ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿದ್ದಾರೆ ಎಂದು ಆದೇಶ ಹೇಳಿದೆ.
* ಅಂಥ ಪ್ರದೇಶದ ಜನಸಂಖ್ಯೆ ಮೂರು ಲಕ್ಷಕ್ಕಿಂತ ಕಡಿಮೆಯಿಲ್ಲದ ಹೊರತು
* ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಮೂರು ಸಾವಿರ ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು
* ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಆರು ಕೋಟಿ ರೂಪಾಯಿಗಳು ಅಥವಾ ವಾರ್ಷಿಕ ತಲಾ ಒಬ್ಬನಿಗೆ ಎರಡು ನೂರು ರೂಪಾಯಿಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು
* ಅಂಥ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು
ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಪ್ರದೇಶಗಳನ್ನು ಮೈಸೂರು ಜಿಲ್ಲೆಯ ಹಾಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಆಡಳಿತಾತ್ಮಕ ದೃಷ್ಟಿಯಿಂದ ದೊಡ್ಡ ನಗರ ಪ್ರದೇಶ ಎಂದು ಉದ್ಘೋಷಿಸಿ, ಸದರಿ ಸಂಪೂರ್ಣ ದೊಡ್ಡ ನಗರ ಪ್ರದೇಶವನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆ ಎಂದು ಪದನಾಮೀಕರಿಸಲು ಹಾಗೂ ಸದರಿ ದೊಡ್ಡ ನಗರ ಪ್ರದೇಶಕ್ಕೆ ಮಹಾನಗರ ಪಾಲಿಕೆಯನ್ನು ಸ್ಥಾಪಿಸಲು ಉದ್ದೇಶಿಸಿರುತ್ತಾರೆ.
ಈ ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆ/ ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ಸದರಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 30 ದಿನಗಳೊಳಗಾಗಿ ಸಲ್ಲಿಸಬೇಕೆಂದು ತಿಳಿಸಲಾಗಿದೆ.
ಪರಿಗಣಿಸಲಾಗುವ ಸ್ಥಳೀಯ ಸಂಸ್ಥೆ ಹೆಸರು. ಮೈಸೂರು ಮಹಾನಗರ ಪಾಲಿಕೆ ಮತ್ತು ಸೇರ್ಪಡೆಗೊಳಿಸಲು ಉದ್ದೇಶಿಸಿರುವ ಪ್ರದೇಶಗಳ ವಿವರವನ್ನು ಆದೇಶದಲ್ಲಿ ನೀಡಲಾಗಿದೆ. ಮೈಸೂರು ಮಹಾನಗರ ಪಾಲಿಕೆ, ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಕಡಕೊಳ & ಬೋಗಾದಿ ಪಟ್ಟಣ ಪಂಚಾಯಿತಿಗಳು. ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ (ಪೂರ್ಣ), ಆಲನಹಳ್ಳಿ ಗ್ರಾಮ ಪಂಚಾಯಿತಿಯ ಆಲನಹಳ್ಳಿ & ಲಲಿತಾದ್ರಿಪುರ ಗ್ರಾಮಗಳು.
ಸಿದ್ದಲಿಂಗಪುರ ಗ್ರಾಮ ಪಂಚಾಯಿತಿಯ ಸಿದ್ದಲಿಂಗಪುರ, ಬೆಲವತ್ತ, ಕೆಸರೆ, ಮೇಟಗಳ್ಳಿ ಗ್ರಾಮಗಳು. ಇಲವಾಲ ಗ್ರಾಮ ಪಂಚಾಯಿತಿಯ ಇಲವಾಲ, ಕರಕನಹಳ್ಳಿ, ಮೈದನಹಳ್ಳಿ, ಮೇಗಳಾಪುರ ಗ್ರಾಮಗಳು.
ಧನಗಳ್ಳಿ ಗ್ರಾಮ ಪಂಚಾಯಿತಿಯ ಧನಗಳ್ಳಿ, ಯಡಹಳ್ಳಿ, ಕೆಂಚಲಗೂಡು, ಹಾಲಾಳು, ಚೌಡಹಳ್ಳಿ (ಕೋಟೆಹುಂಡಿ) ಗಾಮಗಳು. ಮಲ್ಲಹಳ್ಳಿ (ಬೀರಿಹುಂಡಿ) ಗ್ರಾಮ ಪಂಚಾಯಿತಿಯ ಮಲ್ಲಹಳ್ಳಿ-ನೀರಿಹುಂಡಿ, ಗೋಹಳ್ಳಿ, ಕುಮಾರಬೀಡು, ಎಲ್ಲಹಳ್ಳಿ ಗ್ರಾಮಗಳು. ನಾಗನಹಳ್ಳಿ ಗ್ರಾಮ ಪಂಚಾಯಿತಿಯ ಶ್ಯಾದನಹಳ್ಳಿ ಮತ್ತು ನಾಗವಾಲ ಗ್ರಾಮ ಪಂಚಾಯಿತಿಯ ನಾಗವಾಲ, ದೊಮ್ಮನಹಳ್ಳಿ, ಹುಯಿಬಾಳು ಗ್ರಾಮಗಳು.

