ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡುರಸ್ತೆಯಲ್ಲೇ ಮಹಿಳೆಗೆ ಕಿರುಕುಳ ನೀಡಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಪು ಬಣ್ಣದ ಎಂಜಿ ಹೆಕ್ಟರ್ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಪಕ್ಕದ ಕಾರಿನಲ್ಲಿದ್ದ ಮಹಿಳೆಗೆ ಪ್ಲೈಯಿಂಗ್ ಕಿಸ್ ನೀಡಿ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಆರೋಪಿಯು ತನ್ನ ಐಷಾರಾಮಿ ಕಾರಿನ ಕಿಟಕಿಯಿಂದ ಮಹಿಳೆಯ ಕಡೆಗೆ ಅಸಭ್ಯವಾಗಿ ಕೈ ಸನ್ನೆ ಮಾಡುವುದು ಮತ್ತು ಫ್ಲೈಯಿಂಗ್ ಕಿಸ್ ನೀಡುವುದನ್ನು ಕಾಣಬಹುದು. ಇನ್ನು ಕಾರಿನ ಹಿಂಬದಿಯ ಸೀಟಿನಲ್ಲಿದ್ದ ಮತ್ತೊಬ್ಬ ಯುವಕ ಇದನ್ನು ನೋಡಿ ನಗುತ್ತಾ ಕುಳಿತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆಯನ್ನು ಮಹಿಳೆಯ ಜೊತೆಗಿದ್ದ ಕುಟುಂಬದ ಸದಸ್ಯರು ಚಿತ್ರೀಕರಿಸಿದ್ದು, “ಈ ವ್ಯಕ್ತಿ ಕುಡಿದಿದ್ದಾನೆ, ನಾವು ಕುಟುಂಬದ ಜೊತೆ ಪ್ರಯಾಣಿಸುತ್ತಿದ್ದೇವೆ. ಆದರೂ ಇವನು ಈ ರೀತಿ ಅಸಭ್ಯವಾಗಿ ವರ್ತಿಸುತ್ತಿದ್ದಾನೆ” ಎಂದು ವಿಡಿಯೋದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಘಟನೆ ನಡೆದ ದಿನಾಂಕ ಇನ್ನೂ ಸ್ಪಷ್ಟವಾಗಿಲ್ಲವಾದರೂ, ವಿಡಿಯೋ ಆಧರಿಸಿ ತನಿಖೆ ನಡೆಸಿದ ಪೊಲೀಸರು ಅಮಿತ್ ಕುಮಾರ್ ಮತ್ತು ಅಭಿಷೇಕ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಸೆಕ್ಟರ್-135ರ ಜೆವಿಎಸ್ ಸೊಸೈಟಿಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಯುವಕರು ಕೇವಲ ಒಬ್ಬ ಮಹಿಳೆಯಲ್ಲದೆ, ರಸ್ತೆಯಲ್ಲಿ ಹೋಗುವ ಇತರ ಮಹಿಳಾ ವಾಹನ ಸವಾರರಿಗೂ ಇದೇ ರೀತಿ ಕಿರುಕುಳ ನೀಡುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕಂಡು ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ದುಬಾರಿ ಕಾರು ಹೊಂದಿದ ತಕ್ಷಣ ಕಾನೂನಿಗಿಂತ ಮಿಗಿಲು ಎಂಬ ಭ್ರಮೆ ಕೆಲವರಿಗಿದೆ ಎಂದು ಜನರು ಟೀಕಿಸಿದ್ದರು. ಸದ್ಯ ನೋಯ್ಡಾ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದು, ಅವರು ಬಳಸಿದ್ದ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಕೈಗೊಂಡಿರುವ ಈ ತ್ವರಿತ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
https://www.instagram.com/reel/DUOFV_8gUC7/?utm_source=ig_web_copy_link

