ತಮಿಳುನಾಡು ವಿಧಾನಸಭಾ ಚುನಾವಣೆ 2026ರ ತಯಾರಿ ಆರಂಭವಾಗಿದೆ. ರಾಜ್ಯದ 234 ಸ್ಥಾನಗಳಿಗೆ ಮಾರ್ಚ್ ಅಂತ್ಯ ಅಥವ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದ ಆಡಳಿತ ಪಕ್ಷವಾದ ಡಿಎಂಕೆ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ (ಎಸ್‌ಪಿಎ)ದೊಂದಿಗೆ ಸೀಟು ಹಂಚಿಕೆ ಚರ್ಚೆ ಪ್ರಾರಂಭಿಸಿದೆ.
ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಕುರಿತು ಚರ್ಚೆಗಳು ನಡೆದಿವೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಂಸದೆ ಕನ್ನಿಮೋಳಿ ಜೊತೆಗಿನ ಸಭೆ ಬಳಿಕ ಡಿಎಂಕೆ ಸೀಟು ಹಂಚಿಕೆ ಕುರಿತು ಕಾಂಗ್ರೆಸ್‌ಗೆ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದೆ.
ತಮಿಳುನಾಡು ರಾಜ್ಯ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಗಿರೀಶ್ ಚೋಡಂಕರ್ ಅವರೊಂದಿಗೆ ತಮ್ಮ ನಿವಾಸದಲ್ಲಿ ಸೀಟು ಹಂಚಿಕೆ ಕುರಿತು ಸ್ಟಾಲಿನ್ ಮತ್ತು ಕನ್ನಿಮೋಳಿ ಸಭೆ ನಡೆಸಿದ್ದಾರೆ. ಆದರೆ ಒಮ್ಮತ ಮೂಡದ ಕಾರಣ ಇನ್ನೂ ಅಧಿಕೃತವಾಗಿ ಸೀಟು ಹಂಚಿಕೆ ಘೋಷಣೆ ಮಾಡಿಲ್ಲ.
ಸೀಟು ಹಂಚಿಕೆ ಬಗ್ಗೆ ಯಾವುದೇ ನಾಯಕರು ಅಧಿಕೃತವಾಗಿ ಮಾತನಾಡಿಲ್ಲ. ಈ ಹಿಂದೆ ಭರವಸೆ ನೀಡಲಾಗಿದ್ದ 1 ರಾಜ್ಯಸಭಾ ಸ್ಥಾನದ ಬಗ್ಗೆ ಕಾಂಗ್ರೆಸ್-ಡಿಎಂಕೆ ನಡುವೆ ಮತ್ತೊಮ್ಮೆ ಚರ್ಚೆಯಾಗಿದೆ. ಡಿಎಂಕೆಯು ಈ ಬೇಡಿಕೆಗೆ ಒಪ್ಪಿಗೆ ನೀಡುವ ಸಾಧ್ಯತೆಯಿದೆ.
ಕಾಂಗ್ರೆಸ್ ಪಕ್ಷವು 2016 ರಲ್ಲಿ ಸ್ಪರ್ಧಿಸಿದ್ದ 41 ವಿಧಾನಸಭಾ ಸೀಟುಗಳನ್ನು ಕೇಳಿದೆ. ಆದರೆ ಡಿಎಂಕೆಯು 2021ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನೀಡಿದ್ದ 25 ಸ್ಥಾನಗಳನ್ನು ಮುಂದುವರೆಸುತ್ತೇವೆ ಎಂದು ಹೇಳಿದೆ.
ಕಾಂಗ್ರೆಸ್‌ಗೆ 2 ಅಥವಾ 3 ಹೆಚ್ಚುವರಿ ಸೀಟುಗಳಿಗಿಂತ ಹೆಚ್ಚು ನೀಡಲು ಡಿಎಂಕೆ ಒಪ್ಪಿಲ್ಲ. 26 ಅಥವ 27 ಸೀಟುಗಳನ್ನು ನೀಡಬಹುದು. ಆದರೆ ಅದಕ್ಕಿಂತ ಹೆಚ್ಚು ನೀಡಲು ನಮಗೆ ಸಾಧ್ಯವಿಲ್ಲ. ಅಧಿಕಾರ ಹಂಚಿಕೆ ಮಾತುಕತೆಯಂತೂ ಇಲ್ಲವೇ ಇಲ್ಲ ಎಂಬ ಸಂದೇಶವನ್ನು ಡಿಎಂಕೆ ನೀಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಬಳಿ ಬಲಿಷ್ಠ ಅಭ್ಯರ್ಥಿಗಳಿಲ್ಲ ಎಂದು ಡಿಎಂಕೆ ಹೇಳಿದೆ. ತೀವ್ರ ಪೈಪೋಟಿಯಿಂದ ಕೂಡಿರುವ ಈ ಬಾರಿಯ ಚುನಾವಣೆಯಲ್ಲಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಡಿಎಂಕೆ ಒಪ್ಪಿಗೆ ನೀಡಿಲ್ಲ.
2021ರಲ್ಲಿಯೂ ಸಹ ಡಿಎಂಕೆ ನಾಯಕರು ತಮ್ಮ ಸಂಪನ್ಮೂಲಗಳನ್ನು ಬಳಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರು. ಆದರೆ ಈ ಬಾರಿ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಕಾರಣ ಈ ಬಾರಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದಿಂದ ಸಹ ಡಿಎಂಕೆ ಸವಾಲು ಎದುರಿಸುತ್ತಿದೆ.
ಕಳೆದ ಚುನಾವಣೆಯಲ್ಲಿ ನಾವು ಉತ್ತಮ ಸಾಧನೆ ಮಾಡಿದ್ದೇವೆ ಎಂದು ಕಾಂಗ್ರೆಸ್ ವಾದ ಮಂಡಿಸಿದೆ. ಸ್ಪರ್ಧಿಸಿದ್ದ 25 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿರುವುದಾಗಿ ಅದು ತಿಳಿಸಿದೆ. ಆದರೆ, ಡಿಎಂಕೆಯು ತಾನು ಸ್ಪರ್ಧಿಸಿದ್ದ 188 ಸ್ಥಾನಗಳಲ್ಲಿ 55 ಸ್ಥಾನಗಳನ್ನು ಕಳೆದುಕೊಂಡಿತ್ತು.
ಈ ಬಾರಿ ಕಳೆದ ಸಲ ಡಿಎಂಕೆ ಸೋತಿದ್ದ ಸ್ಥಾನಗಳನ್ನು ತಮಗೆ ನೀಡುವಂತೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಆದರೆ ಡಿಎಂಕೆ ಇದನ್ನು ತಳ್ಳಿ ಹಾಕಿದೆ. ಈಗ ಮೈತ್ರಿಕೂಟದಲ್ಲಿ ಹೆಚ್ಚಿನ ಮಿತ್ರಪಕ್ಷಗಳು ಇರುವ ಕಾರಣಕ್ಕೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಡಿಎಂಕೆ ಹೇಳಿದೆ.
ಮೂಲಗಳ ಪ್ರಕಾರ, ಕಾಂಗ್ರೆಸ್‌ಗೆ ನೀಡುವ ಸೀಟುಗಳ ಸಂಖ್ಯೆಯನ್ನು 28ಕ್ಕಿಂತ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಡಿಎಂಕೆ ಹೇಳಿದೆ. ಇನ್ನು ಅಧಿಕಾರ ಹಂಚಿಕೆ ಸೂತ್ರವನ್ನು ಸಹ ಡಿಎಂಕೆ ತಳ್ಳಿ ಹಾಕಿದೆ.

