HomeLatest NewsBIG NEWS : 'ಮಿಸ್ಸಿಂಗ್' ಪ್ರಕರಣಗಳಲ್ಲಿ ಇನ್ಮುಂದೆ ನಿರ್ಲಕ್ಷ್ಯ ಸಲ್ಲದು ; ಪೊಲೀಸರಿಗೆ ಸುಪ್ರೀಂಕೋರ್ಟ್ ಖಡಕ್...

BIG NEWS : ‘ಮಿಸ್ಸಿಂಗ್’ ಪ್ರಕರಣಗಳಲ್ಲಿ ಇನ್ಮುಂದೆ ನಿರ್ಲಕ್ಷ್ಯ ಸಲ್ಲದು ; ಪೊಲೀಸರಿಗೆ ಸುಪ್ರೀಂಕೋರ್ಟ್ ಖಡಕ್ ಸೂಚನೆ

ಕಾಣೆಯಾದವರ ಪ್ರಕರಣಗಳನ್ನು ಪೊಲೀಸರು ಹಗುರವಾಗಿ ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ದೂರು ಬಂದ ಕೂಡಲೇ ಪ್ರಕರಣ ದಾಖಲಿಸಿಕೊಂಡು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ.

ಹೌದು. ಕಾಣೆಯಾದವರ ಪ್ರಕರಣಗಳನ್ನು ಇನ್ನು ಮುಂದೆ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಖಡಕ್‌ ಸೂಚನೆ ನೀಡಿದೆ. ವ್ಯಕ್ತಿಯ ವಯಸ್ಸು ಅಥವಾ ಲಿಂಗವನ್ನು ಪರಿಗಣಿಸದೆ, ದೂರು ಬಂದ ತಕ್ಷಣ ಪ್ರಕರಣ ದಾಖಲಿಸಿ ತ್ವರಿತ ತನಿಖೆ ಆರಂಭಿಸಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಮಿಸ್ಸಿಂಗ್‌ ಪ್ರಕರಣಗಳಲ್ಲಿ ಪೊಲೀಸರ ಆರಂಭಿಕ ಕ್ರಮವೇ ನಿರ್ಣಾಯಕವಾಗಿದ್ದು, ನಿರ್ಲಕ್ಷ್ಯ ತೋರಿದರೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಜಿಪಿಗಳು ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡಬೇಕಾಗಬಹುದು ಎಂದು ಎಚ್ಚರಿಸಿದೆ.

ಕಾಣೆಯಾದ ವ್ಯಕ್ತಿಯ ವಯಸ್ಸು ಅಥವಾ ಲಿಂಗವನ್ನು ಲೆಕ್ಕಿಸದೆ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಈ ಹಿಂದೆ ತಾನು ನೀಡಿದ್ದ ಆದೇಶಗಳಲ್ಲಿ ಬಳಸಿದ್ದ ‘ಪರ್ಸನ್‌’ (ವ್ಯಕ್ತಿ) ಎಂಬ ಪದವನ್ನು ಕೆಲವು ರಾಜ್ಯಗಳು ಕೇವಲ ಮಕ್ಕಳಿಗೆ ಮಾತ್ರ ಅನ್ವಯಿಸುವಂತೆ ಅರ್ಥೈಸಿಕೊಂಡಿರುವುದಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಪರ್ಸನ್‌’ ಎಂದರೆ ಮಕ್ಕಳು ಮಾತ್ರವಲ್ಲ..

‘ಪರ್ಸನ್‌’ ಎಂಬ ಪದವು ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ, ವಯಸ್ಕರಿಗೆ ಅನ್ವಯಿಸುವುದಿಲ್ಲ ಎಂದು ಕೆಲವು ರಾಜ್ಯಗಳು ಭಾವಿಸಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ನ್ಯಾಯಪೀಠ ಹೇಳಿದೆ. ಈ ವಿಚಾರ ತಿಳಿದು ತಮಗೆ ಆಶ್ಚರ್ಯವಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಗೊಂದಲದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಆದೇಶಗಳಲ್ಲಿನ ಅಂಶಗಳು ಸ್ಪಷ್ಟವಾಗಿಯೇ ಇವೆ ಎಂದು ನ್ಯಾಯಪೀಠ ತಿಳಿಸಿದೆ.

‘ವ್ಯಕ್ತಿ’ ಎಂಬ ಪದವು ವಯಸ್ಸು ಅಥವಾ ಲಿಂಗದ ಭೇದವಿಲ್ಲದೆ ಪ್ರತಿಯೊಬ್ಬರನ್ನೂ ಸೂಚಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ದೂರು ಬಂದ ಕೂಡಲೇ ಪ್ರಕರಣ ದಾಖಲು..

ಮಕ್ಕಳು ಮಾತ್ರವಲ್ಲದೆ ಯಾವುದೇ ವ್ಯಕ್ತಿ ಕಾಣೆಯಾದರೂ ಪೊಲೀಸರು ತಕ್ಷಣ ಸ್ಪಂದಿಸಬೇಕು ಎಂದು ನ್ಯಾಯಾಲಯ ಹೇಳಿದೆ. ದೂರು ಬಂದ ಕೂಡಲೇ ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡಗಳನ್ನು ಕಾರ್ಯಾಚರಣೆಗೆ ಇಳಿಸಬೇಕು ಎಂದು ಸೂಚಿಸಿದೆ. ಯಾರಾದರೂ ಕಾಣೆಯಾಗಿರುವ ಸಂದರ್ಭದಲ್ಲಿ ಮೊದಲ ಕೆಲವು ಗಂಟೆಗಳು ಅತ್ಯಂತ ನಿರ್ಣಾಯಕವಾಗಿರುತ್ತವೆ. ಆ ಸಮಯದಲ್ಲಿ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡರೆ ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚುವ ಸಾಧ್ಯತೆ ಗಣನೀಯವಾಗಿ ಹೆಚ್ಚುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ನಿರ್ಲಕ್ಷ್ಯ ಮಾಡಿದರೆ ಮುಖ್ಯ ಕಾರ್ಯದರ್ಶಿ, ಡಿಜಿಪಿಗಳು ಕೋರ್ಟ್‌ಗೆ!

ಕಾಣೆಯಾದ ವ್ಯಕ್ತಿ ಪತ್ತೆಯಾಗಿ, ಅವರನ್ನು ರಕ್ಷಿಸಿದ ಬಳಿಕ ಯಾವುದೇ ವಿಳಂಬವಿಲ್ಲದೆ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ. ಮಿಸ್ಸಿಂಗ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿರುವ ಆದೇಶಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ನ್ಯಾಯಪೀಠ ಎಚ್ಚರಿಸಿದೆ.

ಆದೇಶಗಳನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನ್ಯಾಯಾಂಗ ನಿಂದನೆ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಅಂತಹ ಸಂದರ್ಭಗಳಲ್ಲಿ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಜಿಪಿಗಳು ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular