“ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಗ್ಯಾಸ್ ಪೆಟ್ರೋಲ್ ಮತ್ತು ಡಿಸೇಲ್ ಕೊರತೆಯಾಗಲಿದೆ ಎಂಬ ವದಂತಿಗಳು ಹರಡುತ್ತಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು ಮತ್ತು ಅನಗತ್ಯವಾಗಿ ಬುಕ್ಕಿಂಗ್ ಮಾಡಬಾರದು, ಅಗತ್ಯವಿರುವಷ್ಟು ಗ್ಯಾಸ್ ಸಿಲಿಂಡರ್ ಲಭ್ಯವಿದೆ” ಎಂದು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 9,427 ಸಿಲಿಂಡರ್‌ಗಳು ವಿತರಣೆಯಾಗುತ್ತಿವೆ. ವಾರಕ್ಕೆ ಮೊದಲು ಬುಕ್ಕಿಂಗ್ ಸಂಖ್ಯೆ ಸಾಮಾನ್ಯವಾಗಿದ್ದರೂ, ವದಂತಿಗಳ ನಂತರ ಇದು ಐದು ಪಟ್ಟು ಹೆಚ್ಚಾಗಿ 46,355ಕ್ಕೆ ಏರಿದೆ. ಇದು ಕೇವಲ ಜನರ ಆತಂಕದಿಂದ ಸೃಷ್ಟಿಯಾಗಿರುವ ಸಮಸ್ಯೆಯೇ ಹೊರತು ಗ್ಯಾಸ್ ಕೊರತೆಯಿಂದಲ್ಲ” ಎಂದು ತಿಳಿಸಿದರು.
“ಮುಂದಿನ 4-5 ದಿನಗಳಲ್ಲಿ ಎಲ್ಲಾ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ಗಳನ್ನು ಸರಬರಾಜು ಮಾಡಲಾಗುವುದು ಮತ್ತು ಗ್ಯಾಸ್ ಏಜೆನ್ಸಿಗಳ ಮುಂದೆ ಅನಗತ್ಯವಾಗಿ ಸಾಲು ನಿಲ್ಲುವ ಅವಶ್ಯಕತೆಯಿಲ್ಲ, ಒಂದು ವೇಳೆ ಯಾರಾದರು ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲು ನಿಂತು ಜನರಲ್ಲಿ ಆತಂಕ ಸೃಷ್ಠಿಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಸುಳ್ಳು ಸುದ್ದಿ ಹಬ್ಬಿಸುವುದು ಮಾಡಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ತೊಂದರೆಯಿಲ್ಲ. ಬುಕ್ಕಿಂಗ್ ಮಾಡಿದ 6 ದಿನಗಳೊಳಗೆ ಸಿಲಿಂಡರ್ ಪೂರೈಕೆಯಾಗಲಿದೆ. ವಾಣಿಜ್ಯ ಸಿಲಿಂಡರ್ ಮೇಲಿದ್ದ ನಿರ್ಬಂಧವನ್ನೂ ಸರ್ಕಾರ ತೆಗೆದುಹಾಕಿದ್ದು, ಈಗ ಸುಲಭವಾಗಿ ಲಭ್ಯವಿದೆ ಎಂದು ಸ್ಪಷ್ಟಪಡಿಸಿದರು.
ಹೊಸ ಬುಕ್ಕಿಂಗ್ ನಿಯಮಗಳು: ಸರ್ಕಾರವು ಸಿಲಿಂಡರ್ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
- 14.2 ಕೆ.ಜಿ ಗೃಹ ಬಳಕೆ ಸಿಲಿಂಡರ್. ಒಂದು ಸಿಲಿಂಡರ್ ಹೊಂದಿರುವ ಗ್ರಾಹಕರು 25 ದಿನಕ್ಕೊಮ್ಮೆ ಬುಕ್ ಮಾಡಬಹುದು. ಎರಡು ಸಿಲಿಂಡರ್ ಹೊಂದಿರುವವರು 35 ದಿನಕ್ಕೊಮ್ಮೆ ಬುಕಿಂಗ್ ಮಾಡಲು ಅವಕಾಶವಿದೆ.
- 5 ಕೆಜಿ ಗೃಹ ಬಳಕೆ ಸಿಲಿಂಡರ್. ನಗರ ಪ್ರದೇಶದಲ್ಲಿ 9 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 16 ದಿನಕ್ಕೊಮ್ಮೆ ಅವಕಾಶ.
- 10 ಕೆಜಿ ಕಂಪೋಸಿಟ್ ಸಿಲಿಂಡರ್. ನಗರ ಪ್ರದೇಶದಲ್ಲಿ 18 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 32 ದಿನಕ್ಕೊಮ್ಮೆ ಬುಕ್ ಮಾಡಬಹುದು.
ಜಿಲ್ಲೆಯ 220ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ದಾಸ್ತಾನು ಪೂರಕವಾಗಿದೆ. ವದಂತಿಗಳಿಂದಾಗಿ ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲು ನಿಲ್ಲುತ್ತಿರುವುದು ಕಂಡುಬಂದಿದ್ದು, ಇಂಧನ ಖಾಲಿಯಾಗುವ ಯಾವುದೇ ಭೀತಿ ಇಲ್ಲ, ಇನ್ನು 5 ತಿಂಗಳಿಗೆ ಆಗುವಷ್ಟು ಇಂಧನ ದಾಸ್ತಾನು ಇದೆ ಎಂದು ತಿಳಿಸಲಾಗಿದೆ.

