ಹುಬ್ಬಳ್ಳಿ : ನಗರದ ಆಕಾಶದಲ್ಲಿ ಏಕಾಏಕಿ ಮೂರು ಯುದ್ಧ ವಿಮಾನಗಳು (Fighter Jets) ಅತಿ ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ಇರಾನ್-ಇಸ್ರೇಲ್ ಯುದ್ಧದ ವಾತಾವರಣ ಇರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದರಿಂದ ಜನರು ಭಯಭೀತರಾಗಿದ್ದರು.
ಹುಬ್ಬಳ್ಳಿಯ ಕೇಶ್ವಾಪುರ, ಬೆಂಡಿಗೇರಿ, ದೇಶಪಾಂಡೆ ನಗರ, ರಾಮನಗರ ಮತ್ತು ವಿಜಯನಗರದ ಮೇಲೆ ಈ ಫೈಟರ್ ಜೆಟ್‌ಗಳು ಕರ್ಕಶ ಸದ್ದು ಮಾಡುತ್ತಾ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿವೆ. ಏಕಾಏಕಿ ಕೇಳಿಬಂದ ಭೀಕರ ಶಬ್ದಕ್ಕೆ ಜನ ಮನೆಗಳಿಂದ ಹೊರಬಂದು ಆಕಾಶದತ್ತ ನೋಡುತ್ತಾ ಗಾಬರಿಗೊಂಡಿದ್ದರು.
ವಿಮಾನ ನಿಲ್ದಾಣದ ನಿರ್ದೇಶಕರ ಸ್ಪಷ್ಟನೆ: ಈ ಕುರಿತು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದು, “ಯಾವುದೇ ಆತಂಕಪಡುವ ಅಗತ್ಯವಿಲ್ಲ. ಗೋವಾ ಎಟಿಸಿಯಿಂದ (ATC) ಪ್ರಾಯೋಗಿಕವಾಗಿ ಮೂರು ಯುದ್ಧ ವಿಮಾನಗಳು ತರಬೇತಿಗಾಗಿ ಹುಬ್ಬಳ್ಳಿಗೆ ಬಂದಿವೆ. ಇದು ಕೇವಲ ನಿಯಮಿತ ತರಬೇತಿಯ ಭಾಗವಾಗಿದೆ,” ಎಂದು ತಿಳಿಸಿದ್ದಾರೆ.
ಈ ಹಾರಾಟಕ್ಕೂ ಕೊಲ್ಲಿ ರಾಷ್ಟ್ರಗಳ ಯುದ್ಧಕ್ಕೂ ಯಾವುದೇ ಸಂಬಂಧವಿಲ್ಲ.ವಾಯುಪಡೆಯು ಪ್ರತಿ ಎರಡು ತಿಂಗಳಿಗೊಮ್ಮೆ ಇಂತಹ ಪ್ರಾಯೋಗಿಕ ಹಾರಾಟಗಳನ್ನು ನಡೆಸುತ್ತದೆ. ಗೋವಾದಿಂದ ಹೊರಟಿದ್ದ ಈ ವಿಮಾನಗಳು ತರಬೇತಿ ಮುಗಿಸಿ ವಾಪಸ್ಸಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು, ಇದು ಭಾರತೀಯ ವಾಯುಪಡೆಯ ಸಾಮಾನ್ಯ ತರಬೇತಿ ಪ್ರಕ್ರಿಯೆಯಾಗಿದೆ ಎಂದು ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.

