ಬೆಂಗಳೂರು: ಶಿವಮೊಗ್ಗ ತುಂಗಾ ನದಿ ತೀರದಲ್ಲಿ ನಡೆಸಲಾದ ಪ್ರಾಯೋಗಿಕ ಬಾಂಬ್ ಸ್ಪೋಟ ಪ್ರಕರಣ ಮತ್ತು ಐಸಿಸ್ ಭಯೋತ್ಪಾದನಾ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಬಂಧಿಸಿದ್ದ ಹುಜೈರ್ ಫರ್ಹಾನ್ ಬೇಗ್ ಗೆ ಎನ್ಐಎ ವಿಶೇಷ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದ್ದು, ಆರು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 58,000 ರೂ. ದಂಡ ವಿಧಿಸಿದೆ.
ಪ್ರಕರಣದ ಇತರೆ ಆರೋಪಿ ಮಾಜ್ ಮುನೀರ್ ಅಹಮದ್, ಸೈಯದ್ ಯಾಸಿನ್ ಸೂಚನೆ ಮೇರೆಗೆ ಭಯೋತ್ಪಾದನಾ ಸಂಘಟನೆ ಸೇರಿದ ಹುಜೈರ್ ಫರ್ಹಾನ್ ಬೇಗ್ ಬೆಂಗಳೂರಿನಲ್ಲಿ ತಂಗಲು ಮನೆ ಬಾಡಿಗೆ ಪಡೆದಿದ್ದ. ಅಲ್ಲದೆ, ಮಾಜ್ ಮುನೀರ್ ಆನ್ಲೈನ್ ಹ್ಯಾಂಡ್ಲರ್ ಮೂಲಕ ಉಗ್ರ ಕೃತ್ಯಕ್ಕೆ ಕಳುಹಿಸುತ್ತಿದ್ದ ಹಣವನ್ನು ತನ್ನ ಸ್ನೇಹಿತರ ಖಾತೆಗೆ ಕ್ರಿಪ್ಟೋ ಕರೆನ್ಸಿ ಮೂಲಕ ಪಡೆದು ನಂತರ ಭಾರತೀಯ ಕರೆನ್ಸಿಗೆ ಬದಲಾಯಿಸಿಕೊಂಡು ಅದರಿಂದ ತಾನು ತಂಗಿದ್ದ ಮನೆ ಬಾಡಿಗೆ ಮತ್ತು ಇತರೆ ವೆಚ್ಚಗಳನ್ನು ಭರಿಸುತ್ತಿದ್ದ ಎನ್ನಲಾಗಿದೆ.
ಈಗಾಗಲೇ ಇದೇ ಪ್ರಕರಣದಲ್ಲಿ ಮೂವರು ಶಿಕ್ಷೆಗೆ ಗುರಿಯಾಗಿದ್ದಾರೆ. ಎನ್ಐಎ 12 ಆರೋಪಿಗಳ ವಿರುದ್ಧ 4 ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದ್ದು, ಈಗಾಗಲೇ ಮೂವರು ಶಿಕ್ಷೆಗೆ ಗುರಿಯಾಗಿದ್ದಾರೆ. ಅವರಿಗೆ ತಲಾ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.
ಮಾಡ್ಯೂಲ್ ಸ್ಥಾಪಿಸಲು ಯೋಜನೆ ಮತ್ತು ಸಂಚು ರೂಪಿಸಿದ್ದ ಆನ್‌ಲೈನ್ ಹ್ಯಾಂಡ್ಲರ್ ಮೊಹಮ್ಮದ್ ಶಾಹಿದ್ ಫೈಸಲ್ ಎಂಬಾತ ಕರ್ನಲ್ ಎಂಬ ಹೆಸರಿನಲ್ಲಿ ಆರೋಪಿಗಳಿಗೆ ಆನ್ ಲೈನ್ ಹ್ಯಾಂಡ್ಲರ್ ಮಾರ್ಗದರ್ಶನ ಮತ್ತು ನಿರ್ದೇಶನ ನೀಡುತ್ತಿದ್ದ. ಈತ ಕರ್ನಾಟಕ ಹಾಗೂ ದೇಶದ ವಿವಿಧೆಡೆಯ ಉಗ್ರ ಪ್ರಕರಣಗಳಲ್ಲಿ ಪ್ರಮುಖ ಆರೋಪಿ. ಸದ್ಯ ಈತ ನಾಪತ್ತೆಯಾಗಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಎನ್‌ಐಎ ತಿಳಿಸಿದೆ.
2022ರಲ್ಲಿ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಎನ್‌ಐಎ ವರ್ಗಾವಣೆ ಮಾಡಿ ಕೊಂಡು, ತನಿಖೆ ನಡೆಸಿದಾಗ ಐಸಿಸ್ ಮಾದರಿ ಹೊರಬಂದಿತ್ತು.
ಸೆ. 29 ಮತ್ತು 30 ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟ
ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ ವತಿಯಿಂದ 2026-27ನೇ ಸಾಲಿನ ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟವನ್ನು ಸೆಪ್ಟೆಂಬರ್ 29 ಮತ್ತು 30 ರಂದು ಶ್ರೀ ಕಂಠೀರವ ಕ್ರೀಡಾಂಗಣ ಹಾಗೂ ಇತರೆ ಮೈದಾನಗಳಲ್ಲಿ ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ, ಪದಕ ಮತ್ತು ಟ್ರೋಫಿ ನೀಡಲಾಗುವುದು ಹಾಗೂ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರನ್ನು ನಿಯೋಜಿಸಲಾಗುವುದು.
ಈ ಕ್ರೀಡಾಕೂಟವು ಯಾವುದೇ ವಯೋಮಿತಿ ನಿರ್ಬಂಧವಿಲ್ಲ. ಎಲ್ಲಾ ವಯೋಮಿತಿಯುಳ್ಳ ಪುರುಷ ಮತ್ತು ಮಹಿಳೆಯರು ಭಾಗವಹಿಸಬಹುದು. ಬೆಂಗಳೂರು ನಗರ ವಿಭಾಗ ಮಟ್ಟದಲ್ಲಿ ಭಾಗವಹಿಸಲು ಕ್ರೀಡಾ ಪಟುಗಳು ವೆಬ್ಸೈಟ್ ಪೋರ್ಟಲ್ https://dasaracmcup.in/ ರಲ್ಲಿ ಸೆಪ್ಟೆಂಬರ್ 25 ರ ಸಂಜೆ 5.30ರ ಒಳಗಾಗಿ ನೊಂದಾಯಿಸಿಕೊಳ್ಳಬಹುದು. ಸ್ಥಳದಲ್ಲಿಯೇ ನೊಂದಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ.
ಅಥ್ಲೆಟಿಕ್ಸ್, ಟೆನ್ನಿಸ್, ಕುಸ್ತಿ, ಟೇಬಲ್ಟೆನ್ನಿಸ್, ಬ್ಯಾಡ್ಮಿಂಟನ್, ಆರ್ಚರಿ (ಬಿಲ್ಲುಗಾರಿಕೆ), ಭಾರ ಎತ್ತುವಿಕೆ, ಟೆಕ್ವಾಂಡೋ, ಫೆನ್ಸಿಂಗ್, ಜೂಡೋ, ವುಷು, ಬಾಕ್ಸಿಂಗ್, ಕರಾಟೆ, ಯೋಗ, ವಾಲಿಬಾಲ್, ಬಾಸ್ಕೆಟ್ಬಾಲ್, ಹ್ಯಾಂಡ್ ಬಾಲ್, ನೆಟ್ ಬಾಲ್, ಥ್ರೋಬಾಲ್, ಕಬಡ್ಡಿ, ಫುಟ್ಬಾಲ್ ಕೀಡಾ ಕೂಟಗಳು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ, ಜಿಮ್ನಾಸ್ಟಿಕ್ – ಗೋಪಾಲನ್ ಸ್ಪೋಟ್ಸ್ ಸೇಂಟರ್, ವೈಟ್ ಫೀಲ್ಡ್, ಈಜು- ಕೆನ್ಸಿಂಗ್ ಟನ್ ಈಜುಕೊಳ, ಹಾಕಿ -ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣ, ಖೋ-ಖೋ, ಬಾಲ್ ಬ್ಯಾಡ್ಮಿಂಟನ್- ಸರ್ಕಾರಿ ಕಲಾ ಕಾಲೇಜು ಆಟದ ಮೈದಾನ ಡಾ: ಬಿ.ಆರ್.ಅಂಬೇಡ್ಕರ್ ಬೀದಿ, ಬೆಂಗಳೂರು ಹಾಗೂ ಶೂಟಿಂಗ್ -ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್, ಜ್ಞಾನಭಾರತಿ ಆವರಣದಲ್ಲಿ ನಡೆಯಲಿದೆ.
ಸೆಪ್ಟೆಂಬರ್ 29 ರಂದು ಬೆಳಗ್ಗೆ 10.30 ಗಂಟೆಗೆ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸುವವರು ಬೆಂಗಳೂರು ನಗರ ಜಿಲ್ಲೆಯ ಕ್ರೀಡಾಪಟುಗಳು ಮಾತ್ರ ನೊಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಶ್ರೀ ಕಂಠೀರವ ಕ್ರೀಡಾಂಗಣ ಇವರನ್ನು ಖುದ್ದಾಗಿ ಅಥವಾ ದೂರವಾಣಿ 080-22239771 ರಲ್ಲಿ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ, ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

