ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಬಹುನಿರೀಕ್ಷಿತ 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನವೇ ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ ಗಾಯದ ಗಂಭೀರ ಸಮಸ್ಯೆ ಎದುರಾಗಿದೆ. ತಂಡದ ಪ್ರಮುಖ ಆಟಗಾರರಾದ ಮಾರ್ಕ್ ಚ್ಯಾಪ್ಮನ್ ಹಾಗೂ ವೇಗಿ ಜ್ಯಾಕ್ ಫೌಲ್ಕ್ಸ್ ಗಾಯದ ಕಾರಣದಿಂದಾಗಿ ಮುಂಬರುವ ಭಾರತ ವಿರುದ್ಧದ ಟಿ20 ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.
ಅಕ್ಟೋಬರ್ 22 ರಿಂದ ಕ್ರೈಸ್ಟ್ಚರ್ಚ್ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಚುಟುಕು ಸಮರ ಆರಂಭವಾಗಲಿದ್ದು, ಸರಣಿಯ ಆರಂಭಕ್ಕೂ ಮುನ್ನವೇ ಇಬ್ಬರು ಆಟಗಾರರು ಸರಣಿಯಿಂದ ವಂಚಿತರಾಗಿರುವುದು ಕೀವಿಸ್ ಪಡೆಗೆ ದೊಡ್ಡ ಹಿನ್ನಡೆಯಾಗಿದೆ.
ಆಟಗಾರರ ಗಾಯದ ಸಮಸ್ಯೆ ಏನು?
ಕಳೆದ ತಿಂಗಳು ಯುರೋಪಿಯನ್ ಟಿ20 ಲೀಗ್ ವೇಳೆ ಎಡಗಾಲಿನ ತೊಡೆಸಂದಿ ನರಗಳ ಸೆಳೆತಕ್ಕೆ (Hamstring tear) ಒಳಗಾಗಿದ್ದ 32 ವರ್ಷದ ಎಡಗೈ ಬ್ಯಾಟರ್ ಮಾರ್ಕ್ ಚ್ಯಾಪ್ಮನ್ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. 113 ಟಿ20 ಪಂದ್ಯಗಳ ಅನುಭವ ಹೊಂದಿರುವ ಚ್ಯಾಪ್ಮನ್ ಮುಂದಿನ ಏಕದಿನ ಸರಣಿಯ ವೇಳೆಗೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಇನ್ನೊಂದೆಡೆ, ಕ್ಯಾಂಟರ್ಬರಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ವೇಳೆ ಯುವ ವೇಗಿ ಜ್ಯಾಕ್ ಫೌಲ್ಕ್ಸ್ ಇಂಟರ್ನಲ್ ಹಿಪ್ ಫ್ಲೆಕ್ಸರ್ ಗಾಯಕ್ಕೆ ಒಳಗಾಗಿದ್ದು, ಅವರು ಮೈದಾನಕ್ಕೆ ಮರಳಲು ಎಷ್ಟು ಸಮಯ ಬೇಕಾಗಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಬದಲೀ ಆಟಗಾರರಾಗಿ ಕ್ಲಾರ್ಕ್ಸನ್ ಹಾಗೂ ಟಿಕ್ನರ್ ಸೇರ್ಪಡೆ:
ಗಾಯಗೊಂಡಿರುವ ಚ್ಯಾಪ್ಮನ್ ಹಾಗೂ ಫೌಲ್ಕ್ಸ್ ಜಾಗಕ್ಕೆ ಆಲ್ರೌಂಡರ್ ಜೋಶ್ ಕ್ಲಾರ್ಕ್ಸನ್ ಮತ್ತು ವೇಗದ ಬೌಲರ್ ಬ್ಲೇರ್ ಟಿಕ್ನರ್ ಅವರನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಂಡಕ್ಕೆ ಸೇರಿಸಿಕೊಂಡಿದೆ. ಇಬ್ಬರು ಪ್ರಮುಖ ಆಟಗಾರರನ್ನು ಕಳೆದುಕೊಂಡಿರುವುದು ನಿರಾಶಾದಾಯಕ ಸಂಗತಿಯಾಗಿದ್ದರೂ, ಕ್ಲಾರ್ಕ್ಸನ್ ಹಾಗೂ ಟಿಕ್ನರ್ ಉಪಸ್ಥಿತಿ ತಂಡಕ್ಕೆ ಬಲ ನೀಡಲಿದೆ ಎಂದು ನ್ಯೂಜಿಲೆಂಡ್ ತಂಡದ ಮುಖ್ಯ ಕೋಚ್ ರಾಬ್ ವಾಲ್ಟರ್ ತಿಳಿಸಿದ್ದಾರೆ.
ನವೆಂಬರ್ 1 ರಂದು ಹ್ಯಾಮಿಲ್ಟನ್ನಲ್ಲಿ ಕೊನೆಯ ಟಿ20 ಪಂದ್ಯ ನಡೆಯಲಿದ್ದು, ಪ್ರಮುಖ ಆಟಗಾರರ ಗಾಯದ ನಡುವೆಯೂ ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ನ್ಯೂಜಿಲೆಂಡ್ ತಂಡ ಭಾರತಕ್ಕೆ ಸವಾಲೊಡ್ಡಲು ಸಜ್ಜಾಗಿದೆ.
ನ್ಯೂಜಿಲೆಂಡ್ ಪರಿಷ್ಕೃತ ಟಿ20 ತಂಡ:
ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಆಲನ್, ಮೈಕೆಲ್ ಬ್ರೇಸ್ವೆಲ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೇ, ಜೇಕಬ್ ಡಫ್ಫಿ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಬೆವನ್ ಜೇಕಬ್ಸ್, ಕೈಲ್ ಜೇಮಿಸನ್, ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್, ನಾಥನ್ ಸ್ಮಿತ್, ಬ್ಲೇರ್ ಟಿಕ್ನರ್.

