ಹೊಸ ವರ್ಷದ ಸಂಭ್ರಮ ಮನೆ ಮಾಡಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನ, ಗಣಪತಿ ದೇವಸ್ಥಾನ, ಕಾಮ ಕಾಮೇಶ್ವರಿ ದೇವಸ್ಥಾನ, ವಿಜಯನಗರದಲ್ಲಿರುವ ಯೋಗ ನರಸಿಂಹಸ್ವಾಮಿ ದೇವಸ್ಥಾನ, ಇಸ್ಕಾನ್ ದೇವಸ್ಥಾನ, ಗಣಪತಿ ಸಚ್ಚಿದಾನಂದ ಆಶ್ರಮ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ಭಕ್ತರು ತುಂಬಿ ತುಳುಕುತ್ತಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ತೆರಳುತ್ತಿರುವ ಭಕ್ತರು ದೇವರ ದರ್ಶನ ಪಡೆದು ಹೊಸ ವರ್ಷದಲ್ಲಿ ಒಳಿತಾಗುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರೆಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದು, ಎಲ್ಲರಿಗೂ ಈ ವರ್ಷ ಒಳಿತನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಲಡ್ಡು ವಿತರಣೆ: ನೂತನ ವರ್ಷವನ್ನು ಮೈಸೂರಿನ ವಿಜಯನಗರದಲ್ಲಿರುವ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಿಸುವ ಮೂಲಕ ಸ್ವಾಗತಿಸಲಾಯಿತು.
2026ನೇ ವರ್ಷದ ಮೊದಲ ದಿನವನ್ನ ಯೋಗನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು. ಇಂದು ಬೆಳಿಗ್ಗೆ 4 ಗಂಟೆಯಿಂದಲೇ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಣೆ ಮಾಡಲಾಗುತ್ತಿದೆ. ಮುಂಜಾನೆಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಯೋಗನರಸಿಂಹಸ್ವಾಮಿ ದರ್ಶನ ಪಡೆದರು.
ಚಾಮುಂಡಿ ಬೆಟ್ಟದಲ್ಲಿ ನೂರಾರು ಭಕ್ತರು: 2026ರ ಮೊದಲ ದಿನವಾದ ಇಂದು ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರವೇ ಹರಿದುಬಂದಿತ್ತು. ಹೊಸ ವರ್ಷದ ಅಂಗವಾಗಿ ಇಂದು ತಾಯಿ ಚಾಮುಂಡೇಶ್ವರಿಗೆ ಹಾಗೂ ಇಡೀ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು.
ಜನರ ದಟ್ಟಣೆಯನ್ನು ನಿಯಂತ್ರಿಸಲು ಆಡಳಿತ ಮಂಡಳಿಯು ಬ್ಯಾರಿಕೇಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಗರ್ಭಗುಡಿಗೆ ಹೋಗಲು ಸಾಧ್ಯವಾದ ಭಕ್ತರಗೆ ಹೊರಗಡೆ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದ್ದು, ನೇರ ಪ್ರಸಾರದಲ್ಲಿ ದೇವಿಯ ಪೂಜಾ ಕೈಂಕರ್ಯಗಳನ್ನು ವೀಕ್ಷಣೆ ಮಾಡಬಹುದಾಗಿದೆ.
ವಿಜಯಲಕ್ಷ್ಮೀ ಭೇಟಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಇಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಇಂದು ಬೆಳಿಗ್ಗೆ ಬೆಟ್ಟಕ್ಕೆ ಆಗಮಿಸಿದ ವಿಜಯಲಕ್ಷ್ಮೀ ಅವರು ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ಒಳಿತಾಗುವಂತೆ ಪ್ರಾರ್ಥನೆ ಸಲ್ಲಿಸಿದರು. ವಿಜಯಲಕ್ಷ್ಮೀ ಅವರನ್ನು ನೋಡಿ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ನಿರಾಶ್ರಿತರಿಗೆ ಹೊದಿಕೆ ವಿತರಣೆ: ಹೊಸ ವರ್ಷ ಎಂದು ಮೋಜು ಮಸ್ತಿ ಮಾಡದೇ ರಸ್ತೆ ಬದಿಯ ನಿರಾಶ್ರಿತರಿಗೆ ಹೂದಿಕೆಗಳನ್ನು ನೀಡುವ ಮೂಲಕ ಯುವಕರ ತಂಡ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ.
ಮೈಸೂರು ನಗರದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ನಿರಂತರವಾಗಿ ಕಳೆದ 30 ದಿನಗಳಿಂದ ರಸ್ತೆ ಬದಿಯಲ್ಲಿ ಮಲಗಿರುವ ನಿರಾಶ್ರಿತರು ಹಾಗೂ ಅಸಹಾಯಕರಿಗೆ ಹೊದಿಕೆ ವಿತರಣೆ ನೀಡುತ್ತಾ ಬಂದಿದ್ದು, ವರ್ಷದ ಕಡೆಯ ದಿವಸ ಮೋಜು ಮಸ್ತಿ ಮಾಡದೇ ಬಂಡಿಪಾಳ್ಯ ತರಕಾರಿ ಮಾರ್ಕೆಟ್ ಸುತ್ತಮುತ್ತ ಮಲಗಿರುವ ನಿರಾಶ್ರಿತರಿಗೆ ಹೊದಿಕೆಯನ್ನು ನೀಡಿ ವಿಶೇಷವಾಗಿ ವರ್ಷದ ಕೊನೆಯ ದಿವಸವನ್ನು ಆಚರಿಸಿದ್ದಾರೆ.
ಕೆಎಂಪಿಕೆ ಟ್ರಸ್ಟ್ ಗೆ ಯುವಕರು ಕೈಜೋಡಿಸಿ ಲಾರಿ ಕೆಳಗಡೆ ಜೀವನ ಸಾಗಿಸುತ್ತಿರುವ ನಿರಾಶ್ರಿತರ ಬಳಿಗೆ ತೆರಳಿ ಹೊದಿಕೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮುಳುಗಿ ಮೋಜು ಮಸ್ತಿ ಮಾಡಲು ಸ್ನೇಹಿತರೊಡನೆ ಪ್ರವಾಸಿ ಸ್ಥಳಕ್ಕೆ ತೆರಳಿ ಪಟಾಕಿ ಸಿಡಿಸಿ ಕೇಕ್ ಕಟ್ ಮಾಡಿ ಹಾಗೂ ಮೈಮರೆತು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸುವ ಇಂತಹ ಸಂದರ್ಭದಲ್ಲೂ 50ಕ್ಕೂ ಹೆಚ್ಚು ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಸಂದೇಶ ನೀಡಿದ್ದಾರೆ.

