ಬೆಂಗಳೂರು : ಮಂಗನ ಕಾಯಿಲೆಗೆ ಇದುವರೆಗೂ ನಿರ್ದಿಷ್ಟ ಔಷಧಿ ಇರದ್ದಿದ್ದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ICMR ಮೂಲಕ ಹೊಸ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಮುಂದಿನ ವರ್ಷದಲ್ಲಿ ಈ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಆತಂಕ ಮೂಡಿಸಿರುವ ಮಂಗನ ಕಾಯಿಲೆ (KFD) ನಿಯಂತ್ರಿಸಲು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಕುರಿತು ವಿಕಾಸಸೌಧದಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಅಕ್ಟೋಬರ್ನಿಂದ ಜೂನ್ವರೆಗೆ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ಹಾಗಾಗಿ ರೋಗ ಪತ್ತೆ ಹಚ್ಚುವಿಕೆ, ಚಿಕಿತ್ಸೆ ಮತ್ತು ಲಸಿಕೆ ಅಭಿವೃದ್ಧಿಯ ಕುರಿತು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಶಿರಸಿಯಲ್ಲಿ ಹೊಸ ಲ್ಯಾಬ್ ಸ್ಥಾಪನೆ:
ಪ್ರಸ್ತುತ ಶಿವಮೊಗ್ಗದಲ್ಲಿ ಮಾತ್ರ ಕೆ.ಎಫ್.ಡಿ ಪರೀಕ್ಷಾ ಕೇಂದ್ರವಿದ್ದು, ಅಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನೂತನ ಲ್ಯಾಬ್ ಪ್ರಾರಂಭಿಸಲಾಗುತ್ತಿದೆ. ಇದಕ್ಕೆ ಬೇಕಾದ ಎಲ್ಲಾ ಉಪಕರಣಗಳನ್ನು ಈಗಾಗಲೇ ಖರೀದಿಸಲಾಗಿದ್ದು, ಶೀಘ್ರದಲ್ಲೇ ಇದು ಕಾರ್ಯಾರಂಭ ಮಾಡಲಿದೆ. ಇದರಿಂದ ಶಿರಸಿ ಹಾಗೂ ಸಿದ್ದಾಪುರ ಭಾಗದ ಜನರಿಗೆ ತ್ವರಿತವಾಗಿ ಪರೀಕ್ಷಾ ವರದಿ ಲಭ್ಯವಾಗಲಿದೆ.
ಈಗಾಗಲೇ ಜಿಲ್ಲಾವಾರು ವ್ಯಾಪಕ ತಪಾಸಣೆ ನಡೆಸಿದ್ದು, ಶಿವಮೊಗ್ಗ 1163, ಉತ್ತರ ಕನ್ನಡ 368, ಚಿಕ್ಕಮಗಳೂರು 124 ಹಾಗೂ ಉಡುಪಿಯಲ್ಲಿ 12 ಜನರ ತಪಾಸಣೆಗೆ ಒಳಪಡಿಸಲಾಗಿತ್ತು. ಅದರಲ್ಲಿ, ಒಟ್ಟು 13 ಜನರಲ್ಲಿ ಕಾಯಿಲೆ ಪತ್ತೆಯಾಗಿದ್ದು, ಅವರೆಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ರೋಗ ಪತ್ತೆಯಾದವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ರೆಫೆರಲ್ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಮಣಿಪಾಲದ ಕೆಎಂಸಿ, ಶಿವಮೊಗ್ಗದ SIMS ಮತ್ತು ಕಾರವಾರದ KRIMS ಆಸ್ಪತ್ರೆಗಳನ್ನು ರೆಫೆರಲ್ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ.
ತಾಲ್ಲೂಕು ಮಟ್ಟದಲ್ಲಿ ತೀರ್ಥಹಳ್ಳಿ, ಸಾಗರ, ಸಿದ್ದಾಪುರ, ಹೊನ್ನಾವರ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕು ಆಸ್ಪತ್ರೆಗಳಲ್ಲಿ ಮಂಗನ ಕಾಯಿಲೆ ಪತ್ತೆಯಾದವರನ್ನು ಚಿಕಿತ್ಸೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಮಂಗನ ಕಾಯಿಲೆ (ಕೆ.ಎಫ್.ಡಿ) ಪೀಡಿತರಿಗೆ ಉಚಿತ ಅಂಬುಲೆನ್ಸ್ ಮತ್ತು ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು. ಗುಣಮುಖರಾದ ನಂತರವೂ 21 ದಿನಗಳ ಕಾಲ ಆರೋಗ್ಯ ಇಲಾಖೆ ಅವರ ಮೇಲೆ ನಿಗಾ ಇಡಲಿದೆ.
ಮಂಗನ ಕಾಯಿಲೆಗೆ ಇದುವರೆಗೂ ನಿರ್ದಿಷ್ಟ ಔಷಧಿ ಇರದ್ದಿದ್ದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ICMR ಮೂಲಕ ಹೊಸ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಮುಂದಿನ ವರ್ಷದಲ್ಲಿ ಈ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಆದರೆ, ಅದುವರೆಗೂ ಮುಂಜಾಗ್ರತೆ ವಹಿಸುವುದಷ್ಟೇ ಕಾಯಿಲೆ ನಿಯಂತ್ರಣಕ್ಕಿರುವ ಅಸ್ತ್ರ. ಈ ಬಾರಿ ಮಂಗನ ಕಾಯಿಲೆಯಿಂದ ಯಾವುದೇ ಸಾವು ಸಂಭವಿಸಬಾರದು ಎನ್ನುವುದು ನಮ್ಮ ಗುರಿ. ಇದಕ್ಕಾಗಿ ಔಷಧ ಮತ್ತು ವೈದ್ಯಕೀಯ ಸಿದ್ಧತೆಗಳನ್ನು ಈಗಲೇ ಮಾಡಿಕೊಳ್ಳಲಾಗಿದೆ. ರೋಗದ ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವಂತೆ ಈ ಮೂಲಕ ತಿಳಿಸುತ್ತಿದ್ದೇನೆ ಎಂದರು. ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ನಿರ್ದೇಶಕರು ಹಾಗೂ ಹಿರಿಯ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.

