ಚಿತ್ರದುರ್ಗ: ಕೇಂದ್ರದ ಜನಗಣತಿ ಪೂರ್ಣವಾಗುವವರೆಗೆ ರಾಜ್ಯದಲ್ಲಿ ಯಾವುದೇ ಹೊಸ ಜಿಲ್ಲೆ ಅಥವಾ ತಾಲೂಕುಗಳ ರಚನೆಯಾಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಜನಗಣತಿ ಪೂರ್ಣಗೊಳ್ಳದೆ ಯಾವುದೇ ಆಡಳಿತಾತ್ಮಕ ಗಡಿ ಗುರುತಿಗೆ ಕೇಂದ್ರದ ನಿರ್ಬಂಧವಿದೆ. ಹೀಗಾಗಿ ಗಣತಿ ಪ್ರಕ್ರಿಯೆ ಪೂರ್ಣವಾಗದೆ ರಾಜ್ಯದಲ್ಲಿ ಹೊಸ ಕಂದಾಯ ಘಟಕಗಳ ರಚನೆ ಇಲ್ಲ ಎಂದು ತಿಳಿಸಿದ್ದಾರೆ.
2017- 2020ರ ಅವಧಿಯಲ್ಲಿ ರಚನೆಯಾಗಿದ್ದ 63 ಹೊಸ ತಾಲೂಕುಗಳಲ್ಲಿ ತಹಶೀಲ್ದಾರ್ ಸಹಿತ ಮೂಲ ಸೌಕರ್ಯಗಳ ಕೊರತೆ ಇತ್ತು. ಇವುಗಳಲ್ಲಿ 14 ತಾಲ್ಲೂಕುಗಳಿಗೆ ಆಡಳಿತ ಭವನ ನಿರ್ಮಿಸಲಾಗಿದ್ದು, ಉಳಿದ 49 ತಾಲ್ಲೂಕುಗಳಿಗೆ ಪ್ರಜಾಸೌಧ ಹೆಸರಿನಲ್ಲಿ ತಾಲೂಕು ಕಚೇರಿ ಕಟ್ಟಡಗಳ ನಿರ್ಮಾಣ ಒಂದೂವರೆ ವರ್ಷದಲ್ಲಿ ಪೂರ್ಣವಾಗಲಿದೆ ಎಂದು ಹೇಳಿದ್ದಾರೆ.
ಪ್ರಗತಿ ಪರಿಶೀಲನೆ
ಮುಂಬರುವ ಮಾರ್ಚ್ ತಿಂಗಳ ಅಂತ್ಯದೊಳಗೆ ಪೌತಿ ಖಾತೆ ಅಭಿಯಾನ ಹಾಗೂ ದರ್ಖಾಸ್ತು ಪೋಡಿ ಪ್ರಕರಣಗಳನ್ನೂ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ವಿಷಯಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 1,89,435 ಪೌತಿ ಖಾತೆಗಳು ಇದ್ದು, ಇದುವರೆಗೂ ಕೇವಲ 19,839 ಪೌತೆ ಖಾತೆಗಳ ಬದಲಾವಣೆ ಕಾರ್ಯಪೂರ್ಣಗೊಂಡಿದೆ. 1,21,930 ಪೌತಿ ಖಾತೆಗಳ ಬಾಕಿಯಿವೆ. ವಾರಸುದಾರರ ಮಧ್ಯದ ವ್ಯಾಜ್ಯದ ಕಾರಣದಿಂದ ಪೌತಿ ಖಾತೆ ಬದಲಾವಣೆ ವಿಳಂಬವಾದರೆ, ಈ ಕುರಿತು ಸ್ಪಷ್ಟವಾಗಿ ತಹಶೀಲ್ದಾರರು ಮಾಹಿತಿ ನೀಡಬೇಕು. ಕಂದಾಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರೆತೆಯಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು ಆಸಕ್ತಿಯಿಂದ ಕೆಲಸ ನಿರ್ವಹಿಸಿದರೆ, ಶೇ.80 ಪೌತಿ ಖಾತೆಗಳ ಬದಲಾವಣೆ ಸುಲಭವಾಗಿ ಮುಗಿಯಲಿದೆ. ಜಿಲ್ಲೆಯಲ್ಲಿ ಮೊಳಕಾಲ್ಮೂರು ತಾಲ್ಲೂಕು ಹೊರತು ಪಡಿಸಿದರೆ ಬೇರೆ ತಾಲ್ಲೂಕುಗಳಲ್ಲಿ ಪೌತಿ ಖಾತೆ ಬದಲಾವಣೆ ಕಾರ್ಯ ಮಂದಗತಿಯಲ್ಲಿದೆ. ಸಂಬಂಧಪಟ್ಟ ತಹಶೀಲ್ದಾರರು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಬಗರ್ ಹುಕುಂ ಮಂಜೂರಾತಿಯಡಿ ಜಿಲ್ಲೆಯಲ್ಲಿ 76,893 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ ಸೆಕ್ಷನ್ 4 ಹಾಗೂ ಪರಿಭಾವಿತ(ಡೀಮ್ಡ್) ಅರಣ್ಯ ಎಂದು ಆರ್.ಟಿ.ಸಿ ಅಲ್ಲಿ ನಮೂದಾಗಿದ್ದು, ಫಲಾನುಭವಿಗಳು ಮೊದಲಿನಿಂದಲೂ ಉಳುಮೆ ಮಾಡುತ್ತಿದ್ದರೆ ಅಂತವರ ವಿವರವನ್ನು ಸಂಗ್ರಹಿಸಿ. ಮೂಲತಃ ಕಂದಾಯ ಭೂಮಿಯಾಗಿದ್ದು, ಅರಣ್ಯ ಇಲಾಖೆ ಡೀಮ್ಡ್ ಅರಣ್ಯ ಎಂದು ನಮೂದಿಸಿರುವ ಜಾಗಗಳನ್ನು ಅರಣ್ಯ ಇಲಾಖೆಯೊಂದಿಗೆ ಸರ್ವೇ ನಡೆಸಿ ಪುನರ್ ಪರಿಶೀಲನೆ ಮಾಡಬೇಕು. ಡೀಮ್ಡ್ ಅರಣ್ಯದ ನಿಯಮಗಳಡಿ ಬರದಿರುವ ಕಂದಾಯ ಇಲಾಖೆ ಜಾಗಗಳನ್ನು ಪುನಃ ಸುಪರ್ದಿ ಪಡೆದುಕೊಳ್ಳಲು ಕ್ರಮ ವಹಿಸುವಂತೆ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಬಾರಿ ಹಕ್ಕು ಪತ್ರ ವಿತರಣೆಯಲ್ಲಿ ಉತ್ತಮ ಸಾಧನೆ ತೋರಿದ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕು ಕಚೇರಿಯ ಶಿರಸ್ತೆದಾರರಾದ ಎಸ್.ನೇತ್ರಾವತಿ ಹಾಗೂ ವಿಷಯ ನಿರ್ವಾಹಕಿ ಬಿ.ಎನ್.ರಕ್ಷಿತಾ ಅವರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಗೌರವಿಸಿದರು.
ಸಭೆಯಲ್ಲಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಭೂ ದಾಖಲೆಗಳ ಉಪನಿರ್ದೇಶಕಿ ಭಾಗ್ಯಮ್ಮ ಸೇರಿದಂತೆ ಜಿಲ್ಲೆಯ ಆರು ತಾಲ್ಲೂಕಿನ ತಹಶೀಲ್ದಾರ್‌ಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

