HomeLatest News'ಅಪ್ಪ ಮನೆಗ್ ಬಂದ್ರು' ದಾರಿ ಬಿಡಿ; ಟಾಕ್ಸಿಕ್ ಟೀಸರ್‌ನಲ್ಲಿ ಅಬ್ಬರಿಸಿದ ಯಶ್; ಹಿಂದೆಂದೂ ಮಾಡಿರದ ವಿಭಿನ್ನ...

‘ಅಪ್ಪ ಮನೆಗ್ ಬಂದ್ರು’ ದಾರಿ ಬಿಡಿ; ಟಾಕ್ಸಿಕ್ ಟೀಸರ್‌ನಲ್ಲಿ ಅಬ್ಬರಿಸಿದ ಯಶ್; ಹಿಂದೆಂದೂ ಮಾಡಿರದ ವಿಭಿನ್ನ ಪ್ರಯತ್ನ

ಕೆಜಿಎಫ್ ಚಿತ್ರ ಸರಣಿಯ ಮೂಲಕ ಕನ್ನಡ ಚಿತ್ರರಂಗದ ಪಥ ಬದಲಿಸಿದ ಕೀರ್ತಿಯಲ್ಲಿ ದೊಡ್ಡ ಪಾಲುದಾರಿಕೆ ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ಬೆಳ್ಳಿ ತೆರೆಯನ್ನಾಳಲು ಸಜ್ಜಾಗಿದ್ದಾರೆ.

ಕನ್ನಡ ಚಿತ್ರವಾಗಿ ತಯಾರಾಗಲು ಮುಂದಾಗಿದ್ದ ಕೆಜಿಎಫ್ ಚಿತ್ರವನ್ನು ತನ್ನ ಮುಂದಾಲೋಚನೆಯಿಂದ ಪ್ಯಾನ್ ಇಂಡಿಯಾವನ್ನಾಗಿ ಪರಿವರ್ತಿಸಬೇಕೆಂದು ಪಟ್ಟುಹಿಡಿದು ಗೆದ್ದ ಯಶ್ ಇದೀಗ ಟಾಕ್ಸಿಕ್ ಚಿತ್ರದಲ್ಲಿ ನಟಿಸಿದ್ದಾರೆ. ನಟನೆ ಜತೆಗೆ ಸಹ ನಿರ್ಮಾಪಕ ಹಾಗೂ ಕಥೆಗೂ ಸಹ ಕೊಡುಗೆ ನೀಡಿರುವ ಯಶ್ ಮೇಲೆ ಸಿನಿ ರಸಿಕರಿಗೆ ನಿರೀಕ್ಷೆ ಜತೆಗೆ ಬೃಹತ್‌ ನಂಬಿಕೆ ಹುಟ್ಟುಕೊಂಡಿದೆ.

ಈ ಚಿತ್ರದಲ್ಲಿ ಸೌತ್ ಟು ನಾರ್ತ್ ನಟಿಯರ ದಂಡೇ ಇದ್ದು, ಇವರ ಪಾತ್ರಗಳ ಪರಿಚಯವನ್ನು ಪೋಸ್ಟರ್ ಮೂಲಕ ಚಿತ್ರತಂಡ ಘೋಷಣೆ ಮಾಡಿತ್ತು. ಇದೀಗ ಯಶ್ ಪಾತ್ರವನ್ನು ಇಂದು ( ಜನವರಿ 8 ) ಹುಟ್ಟುಹಬ್ಬದ ಅಂಗವಾಗಿ ಟೀಸರ್ ಬಿಡುಗಡೆ ಮಾಡುವ ಮೂಲಕ ಘೋಷಣೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದಲ್ಲಿ ಯಶ್ ರಾಯ ಎಂಬ ಪಾತ್ರವನ್ನು ನಿರ್ವಹಿಸಿದ್ದು, ಈ ಹಿಂದಿನ ಟೀಸರ್‌ನಲ್ಲಿ ಸಿಕ್ಕಾಪಟ್ಟೆ ಖಡಕ್ ಆಗಿ ಕಾಣಿಸಿಕೊಂಡಿದ್ದ ಯಶ್ ಇಂದಿನ ಟೀಸರ್‌ನಲ್ಲೂ ಅಷ್ಟೇ ಮಟ್ಟಕ್ಕೆ ಅಬ್ಬರಿಸಿದ್ದಾರೆ. ಕುಟುಂಬವೊಂದು ಅಗಲಿದ ಮಗನ ಅಂತ್ಯಸಂಸ್ಕಾರ ಮಾಡುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟವನ ತಂದೆ ‘ನನ್ನ ಮಗನಿಗೆ ನೆಮ್ಮದಿಯ ಅಂತ್ಯಸಂಸ್ಕಾರ ಸಿಗಬೇಕು. ಆತ ಇಲ್ಲಿಗೂ ಬರುತ್ತಾನಾ?’ ಎಂದು ಪ್ರಶ್ನೆ ಎತ್ತುತ್ತಿದ್ದಂತೆ ಅಲ್ಲಿಗೆ ವಿಂಟೇಜ್ ಕಾರೊಂದರ ಆಗಮನವಾಗಲಿದೆ.

ಕಾರಿಂದ ಕೆಳಗಿಳಿಯುವ ವಯಸ್ಕನನ್ನು ನೋಡಿ ಕಡೆಗಣಿಸುವ ಮಂದಿ ಆತ ಬಾಂಬ್ ಸಿದ್ಧಪಡಿಸುವುದನ್ನು ನೋಡಿ ಕಾರಿನಲ್ಲಿ ‘ರಾಯ’ ಇರುವುದನ್ನು ಅರಿತು ಕಂಗಾಲಾಗುತ್ತಾರೆ. ಹೀಗೆ ಬಾಂಬ್ ಸಿಡಿದ ಬೆನ್ನಲ್ಲೇ ಗನ್ ಹಿಡಿದು ಕಾರಿನಿಂದ ಕೆಳಗಿಳಿಯುವ ಯಶ್ ( ರಾಯ ) ಸ್ಮಶಾನಕ್ಕೆ ನುಗ್ಗಿ ನರಮೇಧ ಮಾಡುತ್ತಾರೆ. ಕೆಳಗೆ ಬಿದ್ದ ವ್ಯಕ್ತಿ ಕೈನಲ್ಲಿದ್ದ ಗನ್‌ನಿಂದಲೇ ಎದುರಾಳಿಗಳನ್ನು ಹೊಡೆದುರುಳಿಸುವ ಯಶ್ ‘ಡ್ಯಾಡಿ ಈಸ್ ಹೋಮ್’ ( ಅಪ್ಪ ಮನೆಗೆ ಬಂದಿದ್ದಾರೆ ) ಎಂದು ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.

ಇನ್ನು ಟಾಕ್ಸಿಕ್ ಚಿತ್ರದ ಈ ಟೀಸರ್‌ ಪಕ್ಕಾ ಹಾಲಿವುಡ್ ರೇಂಜ್‌ನಲ್ಲಿದೆ. ಎಡಿಟಿಂಗ್, ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಎಲ್ಲವೂ ಸೆರೆ ಹಿಡಿದಿರುವ ದೃಶ್ಯಗಳನ್ನು ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿವೆ. ಟೀಸರ್‌ನಲ್ಲಿ ಯಶ್ ಕಾರೊಳಗೆ ಯುವತಿ ಜತೆ ಇರುವ ದೃಶ್ಯ ವಯಸ್ಕರಿಗೆ ಮಾತ್ರ ಎನ್ನುವಂತಿದ್ದು, ಹಾಲಿವುಡ್ ಚಿತ್ರ ವೀಕ್ಷಿಸಿ ಅಭ್ಯಾಸವಿರುವ ಪ್ರೇಕ್ಷಕರಿಗೆ ಇದು ಹೊಸತೇನಲ್ಲ ಎನಿಸಲಿದೆ. ಸಂದೀಪ್ ರೆಡ್ಡಿ ವಾಂಗಾ ಚಿತ್ರಗಳ ಪ್ರೇಕ್ಷಕರಿಗೂ ಸಹ ಇದು ಸಾಮಾನ್ಯ. ಒಟ್ಟಿನಲ್ಲಿ ಕನ್ನಡ ಪ್ರೇಕ್ಷಕರ ಪಾಲಿಗೆ ಇದು ಹೊಸ ಹಾಗೂ ವಿಭಿನ್ನ ಪ್ರಯತ್ನವಾಗಿದ್ದು, ಪ್ರೇಕ್ಷಕರು ಯಾವ ರೀತಿ ಸ್ವೀಕರಿಸಲಿದ್ದಾರೆ ನೋಡಬೇಕಿದೆ.

ಚಿತ್ರಕ್ಕೆ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳಿದ್ದು, ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಿದೆ. ಚಿತ್ರದಲ್ಲಿ ನಾಯಕರಾಗಿ ರುಕ್ಮಿಣಿ ವಸಂತ್, ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ನಟಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular