ಸಾಮಾನ್ಯವಾಗಿ ನಾವು ಆರೋಗ್ಯವಾಗಿದ್ದೇವೆಯೇ ಎಂದು ಪರೀಕ್ಷಿಸಲು ತೂಕ (Weight) ಅಥವಾ ಬಿಎಂಐ (BMI) ಕಡೆಗೆ ಗಮನ ಹರಿಸುತ್ತೇವೆ. ಆದರೆ, ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯ ನರರೋಗ ತಜ್ಞ ಡಾ. ಸುಧೀರ್ ಕುಮಾರ್ ಅವರು ಆಯಸ್ಸನ್ನು ಅಳೆಯಲು ತೂಕಕ್ಕಿಂತ ಮುಖ್ಯವಾದ ಮತ್ತೊಂದು ಅಳತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅದುವೇ ನಿಮ್ಮ ಕಾಲಿನ ಕೆಳಭಾಗದ ಸ್ನಾಯುವಿನ ಸುತ್ತಳತೆ ಅಥವಾ ‘ಕಾಫ್ ಸರ್ಕಮ್ಫರೆನ್ಸ್’ (Calf Circumference).
ಕಾಲಿನ ಸ್ನಾಯು ಯಾಕೆ ಮುಖ್ಯ? ನಮ್ಮ ಕಾಲಿನ ಹಿಂಭಾಗದ ಸ್ನಾಯುಗಳು ಕೇವಲ ದೈಹಿಕ ಸೌಂದರ್ಯಕ್ಕೆ ಮಾತ್ರವಲ್ಲ, ನಮ್ಮ ದೇಹದ ಒಟ್ಟಾರೆ ಸ್ನಾಯುವಿನ ದ್ರವ್ಯರಾಶಿಯ (Muscle Mass) ಸೂಚಕವಾಗಿವೆ. ವಯಸ್ಸಾದಂತೆ ದೇಹದಲ್ಲಿ ಸ್ನಾಯುಗಳ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಸಾರ್ಕೊಪೀನಿಯಾ’ ಎಂದು ಕರೆಯಲಾಗುತ್ತದೆ. ಕಾಲಿನ ಸ್ನಾಯು ತೆಳ್ಳಗಿದ್ದರೆ ದೇಹದ ರೋಗನಿರೋಧಕ ಶಕ್ತಿ ಮತ್ತು ಚೇತರಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ ಎಂದು ಡಾ. ಸುಧೀರ್ ವಿವರಿಸಿದ್ದಾರೆ.
ಸಂಶೋಧನೆ ಏನು ಹೇಳುತ್ತದೆ? ಡಾ. ಸುಧೀರ್ ಕುಮಾರ್ ಅವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಕಾಲಿನ ಸ್ನಾಯುವಿನ ಸುತ್ತಳತೆ ಹೆಚ್ಚಾದಷ್ಟೂ ಸಾವಿನ ಅಪಾಯ ಕಡಿಮೆಯಾಗುತ್ತದೆ. ಪ್ರತಿ 1 ಸೆಂಟಿಮೀಟರ್ ಸುತ್ತಳತೆ ಹೆಚ್ಚಳವು ಅಕಾಲಿಕ ಮರಣದ ಅಪಾಯವನ್ನು ಸುಮಾರು ಶೇಕಡಾ 5 ರಷ್ಟು ಕಡಿಮೆ ಮಾಡುತ್ತದೆ. ತದ್ವಿರುದ್ಧವಾಗಿ, ಅತ್ಯಂತ ಕಡಿಮೆ ಸುತ್ತಳತೆ ಹೊಂದಿರುವವರಲ್ಲಿ ಸಾವಿನ ಅಪಾಯ ಎರಡು ಪಟ್ಟು ಹೆಚ್ಚು ಎಂದು ವಿವಿಧ ಅಧ್ಯಯನಗಳು ಸಾಬೀತುಪಡಿಸಿವೆ. ಬಿಎಂಐ ಮತ್ತು ತೂಕ ಸರಿಯಾಗಿದ್ದರೂ ಸ್ನಾಯುಗಳು ಬಲವಾಗಿಲ್ಲದಿದ್ದರೆ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಪರಿಹಾರವೇನು? ಈ ಸಮಸ್ಯೆಗೆ ‘ಸ್ಟ್ರೆಂತ್ ಟ್ರೈನಿಂಗ್’ ಅಥವಾ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳೇ ಏಕೈಕ ಮದ್ದು. ಇದು ಕೇವಲ ಬಾಡಿ ಬಿಲ್ಡರ್‌ಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಅವಶ್ಯಕ. ವಯಸ್ಸಾದ ಕಾಲದಲ್ಲಿ ಬೀಳುವುದನ್ನು ತಡೆಯಲು ಮತ್ತು ದೀರ್ಘಕಾಲ ಆರೋಗ್ಯವಾಗಿ ಬದುಕಲು ಕಾಲಿನ ಸ್ನಾಯುಗಳನ್ನು ಗಟ್ಟಿಗೊಳಿಸುವುದು ಅನಿವಾರ್ಯವಾಗಿದೆ. “ಸ್ನಾಯುವಿನ ಬಲವೇ ದೀರ್ಘಾಯುಷ್ಯದ ರಹಸ್ಯ” ಎಂದು ಡಾ. ಸುಧೀರ್ ಕುಮಾರ್ ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಇಂದೇ ನಿಮ್ಮ ತೂಕದ ಯಂತ್ರದ ಜೊತೆಗೆ ಅಳತೆ ಪಟ್ಟಿಯನ್ನೂ (Measuring Tape) ಬಳಸಿ ನಿಮ್ಮ ಕಾಲಿನ ಸ್ನಾಯುವಿನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ.

