ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ ಅವರ ಹೃದಯದಲ್ಲಿ ಬ್ಲಾಕೇಜ್ ಕಂಡು ಬಂದ ಹಿನ್ನೆಲೆಯಲ್ಲಿ ಸ್ಟೆಂಟ್ ಅಳವಡಿಸಲಾಗಿದೆ. ಚಿಕಿತ್ಸೆ ಯಶಸ್ವಿಯಾಗಿದೆ.
ಮಾರ್ಚ್ 24ರಂದು ಸಚಿವರು ಕುಟುಂಬದ ವೈದ್ಯರಿಂದ ತಪಾಸಣೆಗೆ ಒಳಗಾದ ಸಂದರ್ಭದಲ್ಲಿ ಹೃದಯದಲ್ಲಿ ಬ್ಲಾಕೇಜ್ ಇರುವುದು ಕಂಡುಬಂದಿದೆ. ಇಂದು ಬೆಳಗ್ಗೆ ಇಲಾಖೆಯ ಕಾರ್ಯಕ್ರಮ ಮುಗಿಸಿದ ಸಚಿವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಧ್ಯಾಹ್ನದ ವೇಳೆಗೆ ವೈದ್ಯರು ಸ್ಟೆಂಟ್ ಅಳವಡಿಸಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ. ಆರೋಗ್ಯವಾಗಿರುವ ಸಚಿವರು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಭಾನುವಾರ ಕೊಪ್ಪಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಸಚಿವ ಶಿವರಾಜ್ ತಂಗಡಗಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಕೋ ಸೇರಿ ಹಲವು ಪರೀಕ್ಷೆ ಮಾಡಿದಾಗ ಯಾವುದೇ ತೊಂದರೆ ಇಲ್ಲವೆಂದು ಗೊತ್ತಾಗಿದ್ದು, ಬೆಂಗಳೂರಿಗೆ ಪ್ರಯಾಣ ಮುಂದುವರೆಸಿದ್ದರು. ನಾನು ಆರೋಗ್ಯವಾಗಿದ್ದೇನೆ. ಯಾರೂ ಗಾಬರಿಪಡುವ ಅಗತ್ಯವಿಲ್ಲ ಎಂದಿದ್ದರು.

