ಇಂಡಿಯನ್ ಪ್ರೀಮಿಯರ್ ಲೀಗ್ 2026 ಯಶಸ್ವಿಯಾಗಿ ಮುಕ್ತಾಯವಾದ ಬಳಿಕ ಟೀಮ್ ಇಂಡಿಯಾ ಕಲಿಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಮುಖ ಮಾಡಿದ್ದು, ಟೀಮ್ ಇಂಡಿಯಾ ಮೊದಲಿಗೆ ಅಫ್ಘಾನಿಸ್ತಾನದ ವಿರುದ್ಧ ಒಂದು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ಜೂನ್ 6ರಂದು ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡರೆ, ಜೂನ್ 13, 17 ಹಾಗೂ 20ರಂದು ಏಕದಿನ ಪಂದ್ಯಗಳು ಜರುಗಲಿವೆ. ಇನ್ನು ಈ ಪಂದ್ಯಗಳಿಗೆ ಈಗಾಗಲೇ ಭಾರತ ತಂಡ ಪ್ರಕಟವಾಗಿದ್ದು, ಎಲ್ಲರೂ ವಿರಾಟ್ ಕೊಹ್ಲಿಯನ್ನು ಹಲವು ದಿನಗಳ ಬಳಿಕ ಭಾರತದ ಜೆರ್ಸಿಯಲ್ಲಿ ನೋಡಲು ಕಾತರರಾಗಿದ್ದರು.
ಆದರೆ ಪ್ರಕಟವಾದ ತಂಡ ಕಂಡು ಕೊಹ್ಲಿ ಅಭಿಮಾನಿಗಳು ಬೇಸರಕ್ಕೊಳಗಾಗಿದ್ದು, ಕೊಹ್ಲಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಇತ್ತೀಚೆಗಷ್ಟೆ ಚೆನ್ನಾಗಿ ಐಪಿಎಲ್ ಆಡಿ ಮುಗಿಸಿದ ಕೊಹ್ಲಿಗೆ ತಂಡದಲ್ಲಿ ಅವಕಾಶ ಏಕೆ ನೀಡಿಲ್ಲ ಎಂದು ನಿರಾಸೆಗೊಳಗಾಗಿದ್ದಾರೆ. ಇನ್ನು ಇದಕ್ಕೆ ಕಾರಣ ಬಹಿರಂಗವಾಗಿದ್ದು, ಕೊಹ್ಲಿ ಐಪಿಎಲ್ ಫೈನಲ್ ಪಂದ್ಯದಲ್ಲಿ ಗಾಯಕ್ಕೊಳಗಾಗಿದ್ದಾರೆ ಎನ್ನಲಾಗಿದೆ.
ಈ ಗಾಯದ ಸಮಸ್ಯೆಯಿಂದ ಕೊಹ್ಲಿ ಎರಡು ವಾರ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಹೀಗೆ ಎರಡು ವಾರ ವಿಶ್ರಾಂತಿ ಅಗತ್ಯವಿರುವ ಕೊಹ್ಲಿ 20ರಂದು ನಡೆಯಲಿರುವ ಕೊನೆಯ ಏಕದಿನ ಪಂದ್ಯದಷ್ಟರಲ್ಲಿ ಗಾಯದಿಂದ ಸುಧಾರಿಸಿಕೊಳ್ಳಲಿದ್ದಾರೆ ಎನ್ನಲಾದರೂ ಬಿಸಿಸಿಐ ಆಯ್ಕೆಗಾರರು ಆ ಪಂದ್ಯಕ್ಕೂ ಸಹ ಕೊಹ್ಲಿ ಬೇಡ, ಚೆನ್ನಾಗಿ ವಿಶ್ರಾಂತಿ ಪಡೆದು ಸುಧಾರಿಸಿಕೊಳ್ಳಲಿ ಎಂದು ಸಲಹೆ ನೀಡಿದೆ ಎಂದು ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ವರದಿ ಮಾಡಿದೆ.
ಈ ವರದಿ ವೈರಲ್ ಆಗುತ್ತಿದ್ದಂತೆ ಕೊಹ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದು, ಸಾಮಾನ್ಯ ಕ್ರಿಕೆಟ್ ಪ್ರೇಕ್ಷಕರು ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅನುಮಾನ ಹೊರಹಾಕಿದ್ದಾರೆ. ಹೌದು, ಕೊಹ್ಲಿ ಗಾಯದ ಕುರಿತು ಅನುಮಾನಗಳನ್ನು ಹೊರಹಾಕಿರುವ ಹಲವು ನೆಟ್ಟಿಗರು ಐಪಿಎಲ್ ಫೈನಲ್ ಪಂದ್ಯದ ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾದ ಕೊಹ್ಲಿ ಆರ್‌ಸಿಬಿ ಚಾಂಪಿಯನ್ ಆದ ಬಳಿಕ ಕುಣಿದು ಕುಪ್ಪಳಿಸಿದ್ದು ಹೇಗೆ ಎಂದು ಪ್ರಶ್ನೆ ಹೊರಹಾಕಿದ್ದಾರೆ.
ಇನ್ನು ಎರಡು ವಾರ ವಿಶ್ರಾಂತಿ ತೆಗೆದುಕೊಳ್ಳಬೇಕಾದ ಗಾಯವಾದರೂ ಕೊಹ್ಲಿ ಡಾನ್ಸ್ ಮಾಡುತ್ತಿದ್ದರು. ಇದೆಲ್ಲ ಹೇಗೆ ಸಾಧ್ಯ ಎಂದು ಅನುಮಾನ ಹೊರಹಾಕಿರುವ ನೆಟ್ಟಿಗರು ಗಾಯದ ಸಮಸ್ಯೆಯ ಸುಳ್ಳು ಹೇಳುತ್ತಿರುವುದು ಕೊಹ್ಲಿನಾ ಅಥವಾ ಬಿಸಿಸಿಐನಾ ಎಂದು ಪ್ರಶ್ನೆ ಹಾಕಿ ಪೋಸ್ಟ್ ಹಂಚಿಕೊಂಡಿದ್ದಾರೆ.

