ಅಮೆರಿಕದ ಸೌತ್ ಕೆರೊಲಿನಾದ ಪ್ರಸಿದ್ಧ ಚರ್ಚ್ ಪಾಸ್ಟರ್ ಒಬ್ಬರ 30 ವರ್ಷದ ಪತ್ನಿ ಮೈಕಾ ಮಿಲ್ಲರ್ (Mica Miller) ಅನುಮಾನಾಸ್ಪದ ಸಾವನ್ನಪ್ಪಿ ಎರಡು ವರ್ಷಗಳು ಕಳೆಯುತ್ತಾ ಬಂದಿದ್ದರೂ, ಈ ಪ್ರಕರಣದ ಬೆನ್ನುಬಿದ್ದಿರುವ ವಿವಾದಗಳು ಮಾತ್ರ ಶಮನಗೊಂಡಿಲ್ಲ. ಇತ್ತೀಚೆಗೆ ಬಿಡುಗಡೆಯಾದ ‘ಡೆತ್ ಆಫ್ ದಿ ಪಾಸ್ಟರ್ಸ್ ವೈಫ್’ (Death of the Pastor’s Wife) ಎಂಬ ಸಾಕ್ಷ್ಯಚಿತ್ರವು ಈಕೆಯ ದಾಂಪತ್ಯ ಜೀವನದಲ್ಲಿದ್ದ ಹಿಂಸೆ, ಪತಿಯಿಂದ ಎದುರಿಸಿದ ಕಿರುಕುಳ ಮತ್ತು ಸಾವಿಗೆ ಮುನ್ನ ನಡೆದ ಆಘಾತಕಾರಿ ಘಟನೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.
2024ರ ಏಪ್ರಿಲ್ 27ರಂದು ಉತ್ತರ ಕೆರೊಲಿನಾದ ಲಂಬರ್ ರಿವರ್ ಸ್ಟೇಟ್ ಪಾರ್ಕ್‌ನಲ್ಲಿ ಮೈಕಾ ಮಿಲ್ಲರ್ ಶವವಾಗಿ ಪತ್ತೆಯಾಗಿದ್ದರು. ತನಿಖಾಧಿಕಾರಿಗಳು ಆಕೆಯ ಸಾವು ಸ್ವಯಂಪ್ರೇರಿತ ಗುಂಡೇಟಿನಿಂದ (ಆತ್ಮಹತ್ಯೆ) ಸಂಭವಿಸಿದೆ ಎಂದು ಘೋಷಿಸಿದ್ದರು. ಆದರೆ ಸಾವಿಗೆ ಮುನ್ನ ಆಕೆ ನೀಡಿದ್ದ ಪೊಲೀಸ್ ದೂರುಗಳು ಹಾಗೂ ಪತಿಯ ಮೇಲೆ ಮಾಡಿದ್ದ ಗಂಭೀರ ಆರೋಪಗಳು ಇಡೀ ಪ್ರಕರಣವನ್ನು ಭಾರೀ ನಿಗೂಢತೆಯತ್ತ ದೂಡಿವೆ.
ಯಾರಿದು ಮೈಕಾ ಮಿಲ್ಲರ್ ?
ಮೈಕಾ ಮಿಲ್ಲರ್ ಹದಿಹರೆಯದಲ್ಲಿದ್ದಾಗಲೇ ಸೌತ್ ಕೆರೊಲಿನಾದ ಮರ್ಟಲ್ ಬೀಚ್‌ನಲ್ಲಿರುವ ‘ಸಾಲಿಡ್ ರಾಕ್ ಚರ್ಚ್’ ಸಂಪರ್ಕಕ್ಕೆ ಬಂದಿದ್ದರು. ಅಲ್ಲಿ ಜಾನ್-ಪಾಲ್ (ಜೆಪಿ) ಮಿಲ್ಲರ್ ಪ್ರಮುಖ ಪಾಸ್ಟರ್ ಆಗಿದ್ದರು. ಇಬ್ಬರೂ ತಮ್ಮ ಹಿಂದಿನ ದಾಂಪತ್ಯವನ್ನು ಮುರಿದುಕೊಂಡು, 2017ರ ನವೆಂಬರ್‌ನಲ್ಲಿ ಮದುವೆಯಾಗಿದ್ದರು. ಚರ್ಚ್‌ನ ವಿವಿಧ ಯುವ ಮತ್ತು ಮಹಿಳಾ ವಿಭಾಗಗಳಲ್ಲಿ ಮೈಕಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಆದರೆ ಕೆಲ ವರ್ಷಗಳಲ್ಲೇ ದಾಂಪತ್ಯದಲ್ಲಿ ಕಹಿ ಶುರುವಾಯಿತು. 2023ರಲ್ಲಿ ಚರ್ಚ್‌ಗೆ ಹೊಸದಾಗಿ ಸೇರಿದ ಮಹಿಳೆಯೊಂದಿಗೆ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಮೈಕಾ ಸಂಶಯ ವ್ಯಕ್ತಪಡಿಸಿದ್ದರು. ಇದರಿಂದ ಮನನೊಂದ ಆಕೆ ಪತಿಯ ಮನೆಯನ್ನು ತೊರೆದು ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು.
‘ನನ್ನ ಜೀವಕ್ಕೆ ಅಪಾಯವಿದೆ’ ಎಂದಿದ್ದ ಮೈಕಾ
ಪತಿಯನ್ನು ತೊರೆದ ನಂತರ ಮೈಕಾ ಅವರ ಮೇಲೆ ನಿರಂತರ ನಿಗಾ ಇಡಲಾಗಿತ್ತು. ಈ ಬಗ್ಗೆ ಆಕೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಅಪರಿಚಿತ ಕರೆಗಳು, ಯಾರೋ ಹಿಂಬಾಲಿಸುತ್ತಿರುವುದು ಹಾಗೂ ಆಕೆಯ ಕಾರಿನ ಟೈರ್‌ಗಳನ್ನು ಬ್ಲೇಡ್‌ನಿಂದ ಕೊಯ್ದು ಹಾನಿ ಮಾಡುತ್ತಿರುವುದು ಮುಂತಾದ ಘಟನೆಗಳು ನಡೆದಿದ್ದವು. ಮೆಕ್ಯಾನಿಕ್ ಒಬ್ಬರು ಪರಿಶೀಲಿಸಿದಾಗ ಆಕೆಯ ಕಾರಿಗೆ ಜಿಪಿಎಸ್ ಟ್ರ್ಯಾಕಿಂಗ್ ಡಿವೈಸ್ (Tracking Device) ಅಳವಡಿಸಿರುವುದು ಬಯಲಾಗಿತ್ತು!
ಸಾವಿಗೂ ಒಂದು ತಿಂಗಳ ಮೊದಲು, “ನನ್ನ ಜೀವಕ್ಕೆ ಅಪಾಯವಿದೆ, ನನಗೆ ಏನಾದರೂ ಕೆಟ್ಟದ್ದು ಸಂಭವಿಸಬಹುದು” ಎಂದು ಆಕೆ ಪೊಲೀಸರಿಗೆ ತಿಳಿಸಿದ್ದರು. ಏಪ್ರಿಲ್ 15, 2024 ರಂದು ಆಕೆ ಎರಡನೇ ಬಾರಿಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಈ ಲೀಗಲ್ ನೋಟಿಸ್ ಪತಿ ಜೆಪಿ ಮಿಲ್ಲರ್‌ಗೆ ತಲುಪಿದ ಎರಡೇ ದಿನಗಳಲ್ಲಿ (ಏಪ್ರಿಲ್ 27) ಮೈಕಾ ಹೆಣವಾಗಿ ಪತ್ತೆಯಾಗಿದ್ದರು.
ಕೊನೆಯ ಕರೆ ಹಾಗೂ ರಹಸ್ಯ ಸಾವು
ಏಪ್ರಿಲ್ 27ರಂದು ಗನ್ ಅಂಗಡಿಯಿಂದ ಬಂದೂಕು ಖರೀದಿಸಿದ ಮೈಕಾ, ಸುಮಾರು ಒಂದು ಗಂಟೆ ದೂರದಲ್ಲಿದ್ದ ಲಂಬರ್ ರಿವರ್ ಪಾರ್ಕ್‌ಗೆ ತೆರಳಿದ್ದರು. ಮಧ್ಯಾಹ್ನ 2:54ಕ್ಕೆ 911 ಪೊಲೀಸ್ ತುರ್ತು ಸಹಾಯವಾಣಿಗೆ ಕರೆ ಮಾಡಿದ ಆಕೆ, “ನನ್ನ ಫೋನ್ ಲೊಕೇಶನ್ ಟ್ರ್ಯಾಕ್ ಮಾಡಲು ಸಾಧ್ಯವೇ? ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಶವ ನನ್ನ ಕುಟುಂಬಕ್ಕೆ ಸಿಗಬೇಕು” ಎಂದು ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆಕೆ ಗುಂಡು ಹಾರಿಸಿಕೊಂಡು ಕೊನೆಯುಸಿರೆಳೆದಿದ್ದರು.
ಸ್ಥಳೀಯ ಪೊಲೀಸರ ಪ್ರಕಾರ, ಸಾವಿನ ಸಮಯದಲ್ಲಿ ಪತಿ ಜಾನ್-ಪಾಲ್ ಚಾರ್ಲ್ಸ್‌ಟನ್‌ನಲ್ಲಿ ಕ್ರೀಡಾಕೂಟವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ ಕಾರಣ, ನೇರವಾಗಿ ಆತನ ಕೈವಾಡವಿರುವುದಕ್ಕೆ ಸಾಕ್ಷ್ಯ ಸಿಕ್ಕಿಲ್ಲ ಎನ್ನಲಾಗಿತ್ತು.
ತಿರುವು ಪಡೆದ ಕೇಸ್: ಪತಿ ವಿರುದ್ಧ ಫೆಡರಲ್ ಚಾರ್ಜ್‌ಶೀಟ್
ಆದರೆ ಪ್ರಕರಣ ಇಲ್ಲಿಗೇ ಮುಗಿಯಲಿಲ್ಲ. ಡಿಸೆಂಬರ್ 2025 ರಲ್ಲಿ ಫೆಡರಲ್ ಗ್ರ್ಯಾಂಡ್ ಜ್ಯೂರಿಯು ಪಾಸ್ಟರ್ ಜಾನ್-ಪಾಲ್ ಮಿಲ್ಲರ್ ವಿರುದ್ಧ ಸೈಬರ್ ಕಿರುಕುಳ (Cyberstalking) ಹಾಗೂ ಫೆಡರಲ್ ತನಿಖಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ದೋಷಾರೋಪ ಪಟ್ಟಿ ಸಲ್ಲಿಸಿತು.
ಮೈಕಾ ಸಾವಿಗೂ ಮುನ್ನ ಆಕೆಗೆ ನಿರಂತರ ಸಂದೇಶ ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದು, ಆಕೆಯ ಖಾಸಗಿ ಫೋಟೋಗಳನ್ನು ಒಪ್ಪಿಗೆಯಿಲ್ಲದೆ ಹಂಚಿಕೊಂಡಿದ್ದು, ಆಕೆಯ ಮೇಲೆ ಕಣ್ಣಿಡಲು ಪ್ರೈವೇಟ್ ಡಿಟೆಕ್ಟಿವ್ ನೇಮಿಸಿದ್ದು ಹಾಗೂ ಕಾರಿನ ಟೈರ್ ಹಾನಿ ಮಾಡಿದ್ದರ ಬಗ್ಗೆ ತನಿಖಾಧಿಕಾರಿಗಳಿಗೆ ಸುಳ್ಳು ಹೇಳಿದ್ದನ್ನು ಫೆಡರಲ್ ಪ್ರಾಸಿಕ್ಯೂಟರ್‌ಗಳು ಸಾಬೀತುಪಡಿಸಿದ್ದಾರೆ.
ಸದ್ಯ ಜಾನ್-ಪಾಲ್ ಮಿಲ್ಲರ್ ಈ ಆರೋಪಗಳನ್ನು ನಿರಾಕರಿಸಿದ್ದು, 2026ರ ಅಕ್ಟೋಬರ್ ತಿಂಗಳಲ್ಲಿ ಫೆಡರಲ್ ನ್ಯಾಯಾಲಯದಲ್ಲಿ ಈ ಹೈಪ್ರೊಫೈಲ್ ಪ್ರಕರಣದ ಅಂತಿಮ ವಿಚಾರಣೆ ನಡೆಯಲಿದೆ.

