ಭಾರತ – ನೇಪಾಳ ಗಡಿಭಾಗದ ರಕ್ಸೌಲ್ ನ ಫೈನಾನ್ಸ್ ಕಂಪನಿ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ದರ್ಭಾಂಗ ಜಿಲ್ಲೆಯ ವ್ಯಕ್ತಿಯನ್ನು ಮದುವೆಯಾಗಲು ತನ್ನ ಗಂಡ ಹಾಗೂ ಮಕ್ಕಳನ್ನು ಬಿಟ್ಟಿದ್ದ ನೇಪಾಳಿ ಮಹಿಳೆಯೊಬ್ಬಳು ಈಗ ಕಂಗಾಲಾಗಿದ್ದಾಳೆ. ಎರಡು ವರ್ಷದ ಹಿಂದೆ ಇವರಿಬ್ಬರೂ ನೇಪಾಳದ ದೇವಾಲಯ ಒಂದರಲ್ಲಿ ಮದುವೆಯಾಗಿದ್ದು, ಪತಿಯನ್ನು ಈಗ ಹುಡುಕಿಕೊಂಡು ಭಾರತಕ್ಕೆ ಬಂದಾಗ ಶಾಕ್ ಎದುರಾಗಿದೆ.
ಪ್ರಕರಣದ ವಿವರ: ದರ್ಭಾಂಗದ ಗೋವಿಂದ ಕುಮಾರ್ ಎಂಬಾತನನ್ನು ನೇಪಾಳದ ಸಂಗೀತ ಕುಮಾರಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದಳು. ಇದಕ್ಕಾಗಿ ಆಕೆ ತನ್ನ ಪತಿ ಹಾಗೂ ಮಕ್ಕಳನ್ನು ತೊರೆದಿದ್ದು, ಆರಂಭದಲ್ಲಿ ಸಂಸಾರ ಸುಖವಾಗಿಯೇ ನಡೆದಿತ್ತು. ಇದರ ಮಧ್ಯೆ ಗೋವಿಂದ ಕುಮಾರ್ ಗೆ ಬಿಹಾರದ ಸಮಷ್ಠಿಪುರಕ್ಕೆ ವರ್ಗವಾಗಿದ್ದು, ಅಲ್ಲಿ ಹೋಗಿ ನೆಲೆಸಿದ ನಂತರ ಕರೆಸಿಕೊಳ್ಳುವುದಾಗಿ ತನ್ನ ನೇಪಾಳ ಪತ್ನಿಗೆ ಹೇಳಿ ಆತ ಬಂದಿದ್ದ. ಆದರೆ ಆ ಬಳಿಕ ಸಂಗೀತಕುಮಾರಿಯ ಕರೆಯನ್ನು ನಿರ್ಲಕ್ಷಿಸಲು ಆರಂಭಿಸಿದ.
ಇದರಿಂದ ಆತಂಕಗೊಂಡ ಆಕೆ ಗೋವಿಂದ ಕುಮಾರ್ ದರ್ಭಾಂಗದಲ್ಲಿ ನೆಲೆಸಿರುವುದನ್ನು ಪತ್ತೆ ಹಚ್ಚಿ ಹುಡುಕಿಕೊಂಡು ಬಂದಿದ್ದಾಳೆ. ಆದರೆ ಪ್ರೇರಣಾ ಕುಮಾರಿ ಎಂಬಾಕೆಯೊಂದಿಗೆ ಗೋವಿಂದ ಕುಮಾರ್ ಮದುವೆಯಾಗಿರುವುದು ಈ ವೇಳೆ ಗೊತ್ತಾಗಿದೆ. ಅಲ್ಲದೆ ದಂಪತಿಗೆ ಒಂದು ಮಗು ಸಹ ಇದೆ. ಇದೀಗ ತಾನು ಮೋಸ ಹೋಗಿರುವುದನ್ನು ಅರಿತ ಸಂಗೀತ ಕುಮಾರಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಗೋವಿಂದ ಕುಮಾರ್ ದ್ವಿತೀಯ ಪತ್ನಿ ಪ್ರೇರಣಾ ಕೂಡಾ ಪೊಲೀಸರ ಮೊರೆ ಹೋಗಿದ್ದು, ಇದರ ಮಧ್ಯೆ ಇಬ್ಬರು ಹೆಂಡಿರ ಮುದ್ದಿನ ಪತಿ ಗೋವಿಂದ ಕುಮಾರ್ ಪರಾರಿಯಾಗಿದ್ದಾನೆ.