ನವದೆಹಲಿ: ನೀಟ್ ಅಕ್ರಮದ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ(CJP) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯವಾಗಿದೆ. ದೆಹಲಿಯ ಜಂತರ್-ಮಂತರ್ ನಲ್ಲಿ 35 ದಿನಗಳಿಂದ ನಡೆಸುತ್ತಿದ್ದ ಸುದೀರ್ಘ ಪ್ರತಿಭಟನೆಯನ್ನು ಸಿಜೆಪಿ ಅಂತ್ಯಗೊಳಿಸಿದೆ.
ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿಜೆಪಿ ಮುಖಂಡರು ಹಾಗೂ ಕೇಂದ್ರ ಸರ್ಕಾರದ ನಡುವೆ ಮೂರನೇ ಸುತ್ತಿನ ಸಭೆ ನಡೆಯಿತು. ಸಭೆಯಲ್ಲಿ ಸಿಜೆಪಿ ಮುಖಂಡರು ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಿಂದ ನಮ್ಮ ಒಂದು ಬೇಡಿಕೆ ಈಡೇರಿದೆ. ಇನ್ನೂ ಎರಡು ಬೇಡಿಕೆಗಳಿದ್ದು, ಅವುಗಳನ್ನು ಈಡೇರಿಸುವವರೆಗೂ ಹೋರಾಟ ನಡೆಯಲಿದೆ ಎಂದರು. ಈ ವೇಳೆ ಕೇಂದ್ರ ಸಚಿವ ಜೆ.ಪಿ.ನಡ್ಡಾ ಹಾಗೂ ಜಿತೇಂದ್ರ ಸಿಂಗ್, ಉಳಿದ ಎರಡು ಬೇಡಿಕೆಗಳನ್ನು ಹಂತ ಹಂತವಾಗಿ ಸರ್ಕಾರ ಈಡೇರಿಸಲಿದೆ ಎಂದು ಭರವಸೆ ನೀಡಿದರು.
ಸಭೆ ಬಳಿಕ ಸಿಜೆಪಿ ಹಾಗೂ ಬಿಜೆಪಿ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, ನೀಟ್ ಅಕ್ರಮದ ವಿರುದ್ಧ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ನಮ್ಮ ಒಂದು ಬೇಡಿಕೆ ಈಡೇರಿದೆ. ಉಳಿದ ಎರಡು ಬೇಡಿಕೆಗಳನ್ನು ಸರ್ಕಾರ ಶೀಘ್ರವಾಗಿ ಈಡೇರಿಸುವುದಾಗಿ ತಿಳಿಸಿದೆ ಎಂದರು.
ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ಮೇಲಿನ ಎಫ್ಐಆರ್ ರದ್ದಾಗಲಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಇನ್ನು ನೀಟ್ ಅಕ್ರಮಕ್ಕೆ ನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಸಂತ್ರಸ್ತ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ವಿಚಾರವಾಗಿ ಒಂದು ಕೋಟಿ ರೂ ಸಾಧ್ಯವಿಲ್ಲದಿದ್ದರೂ, ಕೇಂದ್ರ ಸರ್ಕಾರ ಸಾಧ್ಯವಾದಷ್ಟು ಹೆಚ್ಚಿನ ಪರಿಹಾರವನ್ನು ನೀಡುವುದಾಗಿ ಹೇಳಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯಲಿದೆ. ಪರಿಹಾರ ನೀಡಲು ಸರ್ಕಾರ ಒಪ್ಪಿದೆ ಎಂದರು.
ಈ ಹಿನ್ನೆಲೆಯಲ್ಲಿ ಜಂತರ್-ಮಂತರ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುವುದು. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ವಿದ್ಯಾರ್ಥಿಗಳು ಮನೆಗಳಿಗೆ ತೆರಳುವಂತೆ ಮನವಿ ಮಾಡಿದರು.

