ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೇಶದಾದ್ಯಂತ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಪ್ರತಿಭಟನೆ ಬೃಹತ್ ಮಟ್ಟದಲ್ಲಿ ನಡೆದಿದೆ.
ಜಂತರ್ ಮಂತರ್‌ನಲ್ಲಿ ದೆಹಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ನಿಯಂತ್ರಣಕ್ಕೆ ತರಲು ಮುಂದಾಗಿದ್ದು, ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡು ವಿದ್ಯಾರ್ಥಿಗಳು ಪೊಲೀಸರ ವಿರುದ್ಧವೇ ತಿರುಗಿಬಿದ್ದಿದ್ದರು.
ಜಲಪಿರಂಗಿ, ಟಿಯರ್ ಗ್ಯಾಸ್, ಲಾಠಿ ಚಾರ್ಜ್ ಏನೇ ಮಾಡಿ ನಮ್ಮ ಹೋರಾಟ ನಿಲ್ಲಲ್ಲ ಎಂದು ಪಟ್ಟುಹಿಡಿದ ವಿದ್ಯಾರ್ಥಿಗಳ ನಡೆಯನ್ನು ಪ್ರತಿಭಟನೆಯ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹಾಡಿಹೊಗಳಿದರು.
ಇನ್ನು ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಸಿನಿಮಾ ಸೆಲೆಬ್ರಿಟಿಗಳು, ಕ್ರಿಕೆಟಿಗರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಬೆಂಬಲ ಸೂಚಿಸಿ ಪೋಸ್ಟ್ ಹಂಚಿಕೊಂಡಿದ್ದು, ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸೆಲೆಬ್ರಿಟಿಗಳು ಮಾತ್ರ ವಿದ್ಯಾರ್ಥಿಗಳ ಪರ ದನಿ ಎತ್ತಿದ್ದರು.
ಅವರಲ್ಲಿ ರಾಜ್‌ಕುಮಾರ್ ಮೊಮ್ಮಗ, ನಟ ವಿನಯ್ ರಾಜ್‌ಕುಮಾರ್ ಸಹ ಒಬ್ಬರು. ಸಂಸತ್ ಭವನದತ್ತ ಪ್ರತಿಭಟನೆ ಹೊರಟಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಹಾಗೂ ಟಿಯರ್ ಗ್ಯಾಸ್ ಪ್ರಹಾರ ಮಾಡಲಾಗಿದೆ ಎಂದು ಇನ್ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದ ವಿನಯ್ ರಾಜ್‌ಕುಮಾರ್ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಟ್ ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಘೋಷಿಸಿದ್ದು, ಮೋದಿಯವರ ಈ ಹೇಳಿಕೆ ಬೆನ್ನಲ್ಲೇ ವಿನಯ್ ರಾಜ್‌ಕುಮಾರ್ ದೇಶದ ಯುವ ಜನತೆಗೆ ನನ್ನ ಸಲಾಂ ಎಂದು ಸ್ಟೋರಿ ಬರೆದುಕೊಂಡು ಎಷ್ಟೇ ಕಠಿಣ ಪರಿಸ್ಥಿತಿ ಎದುರಾದರೂ ಹೋರಾಡಿದ ವಿದ್ಯಾರ್ಥಿಗಳನ್ನು ಹಾಡಿಹೊಗಳಿದ್ದಾರೆ.

