ಯುಜಿ ವೈದ್ಯಕೀಯ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕಾಗಿ ಮೇ 3 ರಂದು ದೇಶಾದ್ಯಂತ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET UG) 2026 ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.ಹೌದು. ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ (NEET UG) 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ವಾಟ್ಸಾಪ್ ಮತ್ತು ಟೆಲಿಗ್ರಾಮ್ನಲ್ಲಿ ಸಕ್ರಿಯವಾಗಿದ್ದ ‘Private Mafia’ ಎಂಬ ಗುಪ್ತ ಜಾಲದ ಮೂಲಕ ಪರೀಕ್ಷೆಗಿಂತ ಎರಡು ದಿನ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಸುಮಾರು 22.79 ಲಕ್ಷ ಅಭ್ಯರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಪರೀಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ.
ಮಹಾರಾಷ್ಟ್ರದ ನಾಸಿಕ್ನಲ್ಲಿ ಉದ್ಭವಿಸಿದ ಈ ಸೋರಿಕೆಯ ಜಾಲವು ಹರಿಯಾಣ, ರಾಜಸ್ಥಾನ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಕೋಚಿಂಗ್ ಸೆಂಟರ್ಗಳಿಗೆ ಹರಡಿದೆ. ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ತನಿಖೆಯನ್ನು ಸಿಬಿಐಗೆ (CBI) ಒಪ್ಪಿಸಿದೆ. ರಾಜಸ್ಥಾನ ಪೊಲೀಸರು ಈಗಾಗಲೇ ಈ ಜಾಲದ ಸೂತ್ರಧಾರರನ್ನು ಬಂಧಿಸಿದ್ದು, ತನಿಖೆ ಚುರುಕುಗೊಂಡಿದೆ.
ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿರುವುದಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮಂಗಳವಾರ ಪ್ರಕಟಿಸಿದೆ. ಸುಮಾರು 22.79 ಲಕ್ಷ ಅಭ್ಯರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ರಾಜಸ್ಥಾನದ ಸಿಕಾರ್ನಲ್ಲಿ ನಡೆದ ಪೇಪರ್ ಲೀಕ್ ಘಟನೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ (ಟೆಲಿಗ್ರಾಮ್ನಂತಹವು) ವೈರಲ್ ಆದ “ಗೆಸ್ ಪೇಪರ್” ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ತನಿಖೆಯಲ್ಲಿ ಬಯಲಾದ ಪ್ರಮುಖ ಅಂಶಗಳು:
• ಮಲ್ಟಿ-ಸ್ಟೇಟ್ ಪೇಪರ್ ಲೀಕ್: ವಾಟ್ಸಾಪ್ ಗ್ರೂಪ್ಗಳು, ಟೆಲಿಗ್ರಾಮ್ ಚಾನಲ್ಗಳು ಮತ್ತು ಕೋಚಿಂಗ್ ಸೆಂಟರ್ಗಳ ಜಾಲದ ಮೂಲಕ ಹಲವಾರು ರಾಜ್ಯಗಳಲ್ಲಿ ಪೇಪರ್ ಸೋರಿಕೆಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾದ ಕಾರಣ, ಕೇಂದ್ರ ಸರ್ಕಾರದ ಅನುಮತಿಯೊಂದಿಗೆ NTA ಪರೀಕ್ಷೆಯನ್ನು ರದ್ದುಗೊಳಿಸಿದೆ ಮತ್ತು ಪ್ರಕರಣವನ್ನು CBI ಗೆ ಒಪ್ಪಿಸಿದೆ.
• ಮೂಲ ಎಲ್ಲಿ?: ತನಿಖಾ ಸಂಸ್ಥೆಗಳ ಪ್ರಕಾರ, ಈ ಸೋರಿಕೆಯು ಮಹಾರಾಷ್ಟ್ರದ ನಾಸಿಕ್ನಲ್ಲಿ ಆರಂಭವಾಗಿದೆ. ಅಲ್ಲಿಂದ ಒಂದು ಪ್ರತಿಯನ್ನು ಹರಿಯಾಣಕ್ಕೆ ಕಳುಹಿಸಿ, ಅಲ್ಲಿ ಐದು ಬೇರೆ ಬೇರೆ ಸೆಟ್ಗಳನ್ನು (ಪ್ರತಿ ಸೆಟ್ನಲ್ಲಿ 10 ಪ್ರತಿಗಳು) ತಯಾರಿಸಲಾಯಿತು.
• ಜಾಲದ ವಿಸ್ತರಣೆ: ನಂತರ ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ಕೋಚಿಂಗ್ ಸೆಂಟರ್ಗಳ ಮೂಲಕ ಇದನ್ನು ಹಂಚಿಕೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ರಾಜ್ಯಗಳಲ್ಲಿ ಒಟ್ಟು 45 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
‘Private Mafia’ ವಾಟ್ಸಾಪ್ ಗ್ರೂಪ್:
ರಾಜಸ್ಥಾನ ಪೊಲೀಸರ ತನಿಖೆಯಲ್ಲಿ ‘Private Mafia’ ಹೆಸರಿನ ವಾಟ್ಸಾಪ್ ಗ್ರೂಪ್ ಪತ್ತೆಯಾಗಿದೆ. ಈ ಗ್ರೂಪ್ನಲ್ಲಿ ಸುಮಾರು 400 ಮಂದಿ ಸದಸ್ಯರಿದ್ದರು. “ಸೋರಿಕೆಯಾದ ಪೇಪರ್ಗಳನ್ನು ಯಾರಿಗೂ ಕಳುಹಿಸಬೇಡಿ” ಎಂಬ ಸೂಚನೆಯನ್ನು ಸ್ವತಃ ಗ್ರೂಪ್ ಡಿಸ್ಕ್ರಿಪ್ಶನ್ನಲ್ಲೇ ನೀಡಲಾಗಿತ್ತು ಎಂಬುದು ಗಮನಾರ್ಹ.
ಪೇಪರ್ ಮತ್ತು ಪ್ರಶ್ನೆಗಳ ಸಾಮ್ಯತೆ:
ಪೊಲೀಸರು ವಶಪಡಿಸಿಕೊಂಡ ಕೈಬರಹದ ‘ಗೆಸ್ ಪೇಪರ್’ನಲ್ಲಿ ದಿಗ್ಭ್ರಮೆಗೊಳಿಸುವ ವಿಷಯಗಳು ಬೆಳಕಿಗೆ ಬಂದಿವೆ. ಮೂಲ ಪರೀಕ್ಷಾ ಪತ್ರಿಕೆಯ 60 ಪ್ರಶ್ನೆಗಳು ಈ ಸೋರಿಕೆಯಾದ ಪೇಪರ್ನೊಂದಿಗೆ ಅಕ್ಷರಶಃ ಹೊಂದಿಕೆಯಾಗಿವೆ. ಈ ಪೇಪರ್ನಲ್ಲಿ ಜೀವಶಾಸ್ತ್ರ (Biology) ಮತ್ತು ರಸಾಯನಶಾಸ್ತ್ರ (Chemistry) ವಿಭಾಗಕ್ಕೆ ಸೇರಿದ 140 ಪ್ರಶ್ನೆಗಳಿದ್ದವು, ಇವುಗಳ ಒಟ್ಟು ಅಂಕಗಳು ಸುಮಾರು 600. ಪರೀಕ್ಷೆಗಿಂತ ಎರಡು ದಿನ ಮೊದಲೇ ಪೇಪರ್ ಹೊರಬಂದಿದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ.
ಹಣದ ವ್ಯವಹಾರ
ಪೇಪರ್ ಸೋರಿಕೆಗಾಗಿ ಅಭ್ಯರ್ಥಿಗಳಿಂದ ಭಾರಿ ಪ್ರಮಾಣದ ಹಣ ವಸೂಲಿ ಮಾಡಲಾಗಿದೆ. ಆರಂಭದಲ್ಲಿ ಒಬ್ಬ ಅಭ್ಯರ್ಥಿಯಿಂದ ರೂ. 5 ಲಕ್ಷದವರೆಗೆ ವಸೂಲಿ ಮಾಡಲಾಗಿದ್ದು, ಪರೀಕ್ಷೆಯ ಹಿಂದಿನ ರಾತ್ರಿ ಈ ಬೆಲೆ ರೂ. 30 ಸಾವಿರಕ್ಕೆ ಇಳಿದಿದೆ ಎಂದು ತಿಳಿದುಬಂದಿದೆ. ಈ ಸಂಚಿನ ಸೂತ್ರಧಾರ ಎನ್ನಲಾದ ಜೈಪುರದ ಮನೀಶ್ ಯಾದವ್ ಮತ್ತು ಪೇಪರ್ ವಿತರಕ ರಾಕೇಶ್ ಮಾಂಡವರಿಯಾರನ್ನು ಪೊಲೀಸರು ಬಂಧಿಸಿದ್ದಾರೆ.

