ಡಿಜಿಟಲ್ ಯುಗದಲ್ಲಿ ನೂರಲ್ಲ, ಸಾವಿರಾರು ವರ್ಷ ಬದುಕಬಹುದು, ಅಮರತ್ವವೂ ಸಾಧ್ಯ ಎಂದು ಸಾಮಾಜಿಕ ಜಾಲತಾಣಗಳ ಇನ್‌ಫ್ಲುವೆನ್ಸರ್‌ಗಳು ಹಾಗೂ ಬಯೋಹ್ಯಾಕರ್‌ಗಳು ಮಾಡುತ್ತಿರುವ ಪ್ರಚಾರಕ್ಕೆ ಅಂತರರಾಷ್ಟ್ರೀಯ ವಿಜ್ಞಾನಿಗಳು ತಣ್ಣೀರೆರಚಿದ್ದಾರೆ. ಮಾನವ ಜನ್ಯು ರಚನೆಯಲ್ಲಿರುವ ಪ್ರಕೃತಿಸಹಜ ಮಿತಿಗಳಿಂದಾಗಿ ಮನುಷ್ಯ ಎಷ್ಟೇ ಪ್ರಯತ್ನಿಸಿದರೂ ಗರಿಷ್ಠಆಯುಷ್ಯ 146 ರಿಂದ 190 ವರ್ಷಗಳಿಗಿಂತ ಹೆಚ್ಚಾಗುವುದಿಲ್ಲ ಎಂದು ಅಧ್ಯಯನ ತಿಳಿಸಿದೆ. ಈ ಸಂಶೋಧನೆಯ ವಿವರಗಳು ಪ್ರತಿಷ್ಠಿತ ವೈಜ್ಞಾನಿಕ ಜರ್ನಲ್ NPJ Agingನಲ್ಲಿ ಪ್ರಕಟಗೊಂಡಿವೆ.
ಮನುಷ್ಯ ವೃದ್ಧನಾಗಲು ಕಾರಣವೇನು?
ವೈಜ್ಞಾನಿಕ ದೃಷ್ಟಿಯಿಂದ ವೃದ್ಧಾಪ್ಯವು ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದೆ. 2023ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವೃದ್ಧಾಪ್ಯಕ್ಕೆ ಪ್ರಮುಖವಾಗಿ 12 ಜೈವಿಕ ಅಂಶಗಳು ಕಾರಣವಾಗುತ್ತವೆ. ಅವುಗಳಲ್ಲಿ ಪ್ರಮುಖವಾದವು:
- ಜೀವಕೋಶ ವಿಭಜನೆಯ ವೇಳೆ ಉಂಟಾಗುವ ಜನ್ಯು ಬದಲಾವಣೆಗಳು (Genetic Mutations)
- ಪ್ರೋಟೀನ್ ನಿರ್ವಹಣೆಯಲ್ಲಿನ ದೋಷಗಳು
- ಮೈಟೋಕಾಂಡ್ರಿಯಾದ ಕಾರ್ಯಕ್ಷಮತೆ ಕುಸಿತ
- ಡಿಎನ್‌ಎ ತುದಿಯಲ್ಲಿರುವ ಟೆಲೊಮಿಯರ್‌ಗಳ (Telomeres) ಕ್ಷೀಣತೆ
ಸಿದ್ಧಾಂತದ ಪ್ರಕಾರ ಟೆಲೊಮಿಯರ್‌ಗಳ ಕ್ಷೀಣತೆಯನ್ನು ತಡೆಯುವುದರಿಂದ ಆಯುಷ್ಯ ಹೆಚ್ಚಿಸುವ ಸಾಧ್ಯತೆ ಇದ್ದರೂ, ವೃದ್ಧಾಪ್ಯವನ್ನು ಶಾಶ್ವತವಾಗಿ ತಡೆಯುವ ಚಿಕಿತ್ಸೆಗಳು ಇನ್ನೂ ಲಭ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಆಯುಷ್ಯಕ್ಕೆ ಅಡ್ಡಿಯಾಗುತ್ತಿರುವ ‘ಸೋಮ್ಯಾಟಿಕ್ ಮ್ಯೂಟೇಷನ್‌ಗಳು’
ದೇಹದಲ್ಲಿನ ಸಂತಾನೋತ್ಪತ್ತಿ ಕೋಶಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕೋಶಗಳಲ್ಲಿ ಉಂಟಾಗುವ ಜನ್ಯು ಬದಲಾವಣೆಗಳನ್ನು ಸೋಮ್ಯಾಟಿಕ್ ಮ್ಯೂಟೇಷನ್‌ಗಳು ಎಂದು ಕರೆಯಲಾಗುತ್ತದೆ.
ಇವುಗಳಿಗೆ ಪ್ರಮುಖ ಕಾರಣಗಳು:
- ಧೂಮಪಾನ
- ಅಲ್ಟ್ರಾವಯೊಲೆಟ್ (UV) ಕಿರಣಗಳ ಪರಿಣಾಮ
- ಸಹಜ ಜೀವಕೋಶ ವಿಭಜನೆ
80 ವರ್ಷದ ವ್ಯಕ್ತಿಯ ಸಾಮಾನ್ಯ ಕೋಶದಲ್ಲೇ ಸಾವಿರಾರು ಸೋಮ್ಯಾಟಿಕ್ ಮ್ಯೂಟೇಷನ್‌ಗಳು ಸಂಗ್ರಹವಾಗಿರುತ್ತವೆ. ಒಮ್ಮೆ ಕೋಶದ ಜನ್ಯುವಿಗೆ ಹಾನಿಯಾದರೆ ಅದನ್ನು ಸಂಪೂರ್ಣವಾಗಿ ಸರಿಪಡಿಸುವ ವ್ಯವಸ್ಥೆ ದೇಹದಲ್ಲಿಲ್ಲ. ದಶಕಗಳ ಕಾಲ ಈ ಹಾನಿ ಹೆಚ್ಚುತ್ತಾ ಹೋಗಿ ಕೋಶಗಳ ಕಾರ್ಯಕ್ಷಮತೆ ಕುಗ್ಗಿಸಿ ಕ್ಯಾನ್ಸರ್ ಹಾಗೂ ವೃದ್ಧಾಪ್ಯಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಅಮರತ್ವ ಸಾಧ್ಯವೇ ? ಅಧ್ಯಯನ ಏನು ಹೇಳುತ್ತದೆ ?
ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡ ಸುಧಾರಿತ ಗಣಿತ ಮಾದರಿಯ ಮೂಲಕ ಈ ಅಧ್ಯಯನ ನಡೆಸಿದೆ.ಸೋಮ್ಯಾಟಿಕ್ ಮ್ಯೂಟೇಷನ್‌ಗಳನ್ನು ಮಾತ್ರ ಪರಿಗಣಿಸಿದರೆ:ಸರಾಸರಿ ಆಯುಷ್ಯ 1,759 ವರ್ಷಗಳು, ಗರಿಷ್ಠ ಆಯುಷ್ಯ 29,921 ವರ್ಷಗಳು ಇರಬಹುದೆಂದು ಸೈದ್ಧಾಂತಿಕ ಲೆಕ್ಕಾಚಾರ ತೋರಿಸಿತು. ಆದರೆ ವಾಸ್ತವದಲ್ಲಿ ಜೀವಕೋಶಗಳ ಹಾನಿಯನ್ನು ಸಂಪೂರ್ಣವಾಗಿ ತಡೆಯುವುದು ಅಸಾಧ್ಯ. ಆದ್ದರಿಂದ ವೃದ್ಧಾಪ್ಯಕ್ಕೆ ಕಾರಣವಾಗುವ ಇತರೆ ಅಂಶಗಳನ್ನು ತಡೆದರೂ ಮನುಷ್ಯನ ಗರಿಷ್ಠ ಆಯುಷ್ಯ 146 ರಿಂದ 194 ವರ್ಷಗಳ ನಡುವೆ ಮಾತ್ರ ಸೀಮಿತವಾಗಿರುತ್ತದೆ ಎಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.
ಹೃದಯ ಮತ್ತು ಮೆದುಳಿನ ಕೋಶಗಳೇ ಆಯುಷ್ಯದ ದೊಡ್ಡಮಿತಿ
ಅಧ್ಯಯನದ ಪ್ರಕಾರ, ಯಕೃತ್ತಿನ (ಲಿವರ್) ಕೋಶಗಳು ಸೋಮ್ಯಾಟಿಕ್ ಮ್ಯೂಟೇಷನ್‌ಗಳನ್ನು ದೀರ್ಘಕಾಲ ಸಹಿಸಿಕೊಳ್ಳಬಲ್ಲವು. ಆದರೆ ಹೃದಯದಕೋಶಗಳು ಹಾಗೂ ಮೆದುಳಿ ನನರಕೋಶಗಳು ಈ ಬದಲಾವಣೆಗಳಿಗೆ ಹೆಚ್ಚು ಬೇಗ ಹಾನಿಗೊಳಗಾಗುತ್ತವೆ. ಈ ಕೋಶಗಳು ಒಮ್ಮೆ ರೂಪುಗೊಂಡ ಬಳಿಕ ಮತ್ತೆ ವಿಭಜನೆಯಾಗುವುದಿಲ್ಲ. ಆದ್ದರಿಂದ ಅವು ಹಾನಿಗೊಳಗಾದರೆ ಹೃದಯ ಮತ್ತು ಮೆದುಳಿನ ಕಾರ್ಯಕ್ಷಮತೆ ಕುಸಿದು ಕೊನೆಗೆ ಸಾವಿಗೆ ಕಾರಣವಾಗುತ್ತದೆ. ಇದನ್ನೇ ವಿಜ್ಞಾನಿಗಳು “ಲೈಫ್‌ಸ್ಪಾನ್ಬಾಟಲ್‌ನೆಕ್” ಎಂದು ಕರೆಯುತ್ತಾರೆ.
ದೀರ್ಘಾಯುಷ್ಯಕ್ಕಾಗಿ ಪಾಲಿಸಬೇಕಾದ ಸರಳ ನಿಯಮಗಳು
ಅಮರತ್ವದ ಪ್ರಯೋಗಗಳು ಅಥವಾ ಹೈಟೆಕ್ ಔಷಧಿಗಳಿಗಿಂತ ಆರೋಗ್ಯಕರ ಜೀವನಶೈಲಿಯೇ ಆಯುಷ್ಯವನ್ನು 10ರಿಂದ 20 ವರ್ಷಗಳವರೆಗೆ ಹೆಚ್ಚಿಸಲು ನೆರವಾಗುತ್ತದೆ ಎಂದು ರೀಜೆನೆರೇಟಿವ್ ಮೆಡಿಸಿನ್ ತಜ್ಞೆ ಡಾ. ಎಗ್ಲೆ ಪವಿಡೆ ಹೇಳಿದ್ದಾರೆ.
ಅವರು ನೀಡಿರುವ ಸಲಹೆಗಳು:
- ಧೂಮಪಾನ ಸಂಪೂರ್ಣ ಬಿಡಿ
- ಪ್ರತಿದಿನ ನಿಯಮಿತ ವ್ಯಾಯಾಮ ಮಾಡಿ
- ಪೌಷ್ಟಿಕ ಮತ್ತು ಸಂಸ್ಕರಿಸದ ಆಹಾರ ಸೇವಿಸಿ
- ಸಾಕಷ್ಟು ಗುಣಮಟ್ಟದ ನಿದ್ರೆ ಪಡೆಯಿರಿ
- ಒತ್ತಡ ಕಡಿಮೆ ಮಾಡಿ, ಉತ್ತಮ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಿ
ತಜ್ಞರ ಅಭಿಪ್ರಾಯ
ವಿಜ್ಞಾನಿಗಳು ಹೊಸ ತಂತ್ರಜ್ಞಾನಗಳ ಮೂಲಕ ಆಯುಷ್ಯ ವಿಸ್ತರಿಸಲು ಪ್ರಯತ್ನಿಸುತ್ತಿದ್ದರೂ, ಆರೋಗ್ಯಕರ ಜೀವನಶೈಲಿಯನ್ನು ನಿರಂತರವಾಗಿ ಪಾಲಿಸುವುದೇ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯದ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

