ಕಳೆದ ವರ್ಷ ಬಿಡುಗಡೆಗೊಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಧುರಂಧರ್ ಚಿತ್ರದ ಮುಂದುವರಿದ ಭಾಗ ಧುರಂಧರ್ 2 ಅಥವಾ ಧುರಂಧರ್ ದ ರಿವೇಂಜ್ ಚಿತ್ರ ಇಂದು ( ಮಾರ್ಚ್ 19 ) ಬಿಡುಗಡೆಯಾಗಿದೆ.
ದೇಶದಾದ್ಯಂತ ದೊಡ್ಡ ಸಂಖ್ಯೆಯ ಪರದೆಗಳ ಮೇಲೆ ಧುರಂಧರ್ ದ ರಿವೇಂಜ್ ಚಿತ್ರ ನೋಡಿದ ಬಹುತೇಕರು ಚಿತ್ರವನ್ನು ಹಾಡಿ ಹೊಗಳಿದರೆ ಕೆಲವರು ಮೊದಲ ಚಿತ್ರದಲ್ಲಿ ಸತ್ಯಾಂಶ ಹೆಚ್ಚಿತ್ತು, ಆದರೆ ಈ ಚಿತ್ರದಲ್ಲಿ ಸತ್ಯಾಂಶ ಕಡಿಮೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಇನ್ನು ಚಿತ್ರ ಬಿಡುಗಡೆಯಾದ ಬಹುತೇಕ ಕಡೆ ಹೌಸ್‌ಫುಲ್ ಪ್ರದರ್ಶನವನ್ನು ಕಂಡಿದ್ದು, ಗಂಟೆಗೆ ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್‌ಮೈಶೋನಲ್ಲಿ ಮಾರಾಟವಾಗಿದೆ. ಯುಗಾದಿ ಹಬ್ಬದ ರಜೆ ಚಿತ್ರಕ್ಕೆ ವರದಾನವಾಗಿದ್ದು, ಮೊದಲ ದಿನವೇ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.
ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹಾಗೂ ಚಿತ್ರದಲ್ಲಿನ ವಿಶೇಷತೆಗಳ ಬಗ್ಗೆ ಪೋಸ್ಟ್‌ಗಳು ಹರಿದಾಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ ಎಂದು ವಿಡಿಯೊಗಳು ಹರಿದಾಡುತ್ತಿವೆ.
ಹೌದು, ಚಿತ್ರದಲ್ಲಿ ನರೇಂದ್ರ ಮೋದಿ 500 ಹಾಗೂ 1000 ರೂ ನೋಟುಗಳನ್ನು ಬ್ಯಾನ್ ಮಾಡಿ ಘೋಷಣೆ ಮಾಡಿದ್ದ ವಿಡಿಯೊವನ್ನು ಬಳಸಲಾಗಿದೆ. ಮೋದಿಯ ಈ ನಡೆಯಿಂದ ಉಗ್ರರಿಗೆ ಹೋಗುತ್ತಿದ್ದ ಅಕ್ರಮ ಹಣದ ಹರಿವು ಹೇಗೆ ನಿಂತಿತು ಎಂಬುದನ್ನು ತೋರಿಸಿದ್ದಾರೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ. ಇದನ್ನು ಮೋದಿಯ ಅತಿಥಿ ಪಾತ್ರ ಎಂದು ಹಲವರು ಬಣ್ಣಿಸಿದ್ದಾರೆ.

