ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಬಹುನಿರೀಕ್ಷಿತ ‘ದಿ ಪ್ಯಾರಡೈಸ್’ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಬಹುದು ಎಂಬ ವದಂತಿಗಳ ನಡುವೆಯೇ, ಚಿತ್ರದ ಮರ್ಚಂಡೈಸ್ ಪ್ರಚಾರ ಭಾರಿ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದ ಪ್ರಚಾರ ಸಾಮಗ್ರಿಗಳ ಬೆಲೆ ಬರೋಬ್ಬರಿ 25,000 ರೂಪಾಯಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಚಿತ್ರದ ಅಧಿಕೃತ ಮರ್ಚಂಡೈಸ್ ಪಾಲುದಾರ ಸಂಸ್ಥೆಯಾದ ಫಿಲ್ಮಿಡೈಸ್ ಬಹಿರಂಗ ಕ್ಷಮೆಯಾಚಿಸಿದೆ.
ಚಿತ್ರತಂಡದ ಯಾವುದೇ ಮುಂಚಿತ ಅನುಮತಿ ಇಲ್ಲದೆ ಪ್ರಚಾರದ ವಿಷಯಗಳನ್ನು ಹಂಚಿಕೊಂಡಿದ್ದಕ್ಕಾಗಿ ಫಿಲ್ಮಿಡೈಸ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ವಿಷಾದ ವ್ಯಕ್ತಪಡಿಸಿದೆ.
ಚಿತ್ರತಂಡಕ್ಕೂ ಇದಕ್ಕೂ ಸಂಬಂಧವಿಲ್ಲ
ಈ ಎಡವಟ್ಟಿನ ಸಂಪೂರ್ಣ ಹೊಣೆಯನ್ನು ತಾನೇ ವಹಿಸಿಕೊಂಡಿರುವ ಫಿಲ್ಮಿಡೈಸ್, ಈ ಚಟುವಟಿಕೆಯ ಕುರಿತು ‘ದಿ ಪ್ಯಾರಡೈಸ್’ ಚಿತ್ರತಂಡಕ್ಕೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಆಕ್ಷೇಪಾರ್ಹ ಪ್ರಚಾರದ ವಿಷಯಗಳನ್ನು ಈಗಾಗಲೇ ಜಾಲತಾಣಗಳಿಂದ ತೆಗೆದುಹಾಕಲಾಗಿದ್ದು, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಭರವಸೆ ನೀಡಿದೆ.
ಎಸ್‌ಎಲ್‌ವಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಾನಿ ಜೊತೆಗೆ ಕಾಯಾದು ಲೋಹರ್, ಮೋಹನ್ ಬಾಬು, ಸಂಪೂರ್ಣೇಶ್ ಬಾಬು ಮತ್ತು ತನಿಕೆಲ್ಲ ಭರಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದು, ಸಿನಿಮಾ ಸದ್ಯ ಸೆಪ್ಟೆಂಬರ್ 24, 2026 ರಂದು ತೆರೆಕಾಣಲು ದಿನಾಂಕ ನಿಗದಿಯಾಗಿದೆ.

