ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಇತ್ತೀಚೆಗೆ ರೈಲ್ವೆ ಟ್ರ್ಯಾಕ್ ಗೆ ಹಾರಿ ಆತ್ಮಹತ್ಯೆ ಯತ್ನ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಎರಡು ವರ್ಷಗಳಲ್ಲಿ 10 ಕ್ಕೂ ಹೆಚ್ಚು ಪ್ರಕರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣಗಳ್ಲಲಿ ಆತ್ಮಹತ್ಯೆ ಪ್ರಕರಣ ತಡೆಯಲು ಬಿಎಂಆರ್ ಸಿ ಎಲ್ ಮುಂದಾಗಿದೆ.
ಈ ನಿಟ್ಟಿನಲ್ಲಿ ಮೆಟ್ರೋ ಸ್ಟೇಷನ್ಗಳಿಗೆ ಪಿಎಸ್ಡಿ ಅಳವಡಿಸುವಂತೆ ಪ್ರಯಾಣಿಕರಿಂದಲೂ ಒತ್ತಾಯ ಕೇಳಿಬಂದಿತ್ತು. ಇದೀಗ ಬಿಎಂಆರ್ಸಿಎಲ್ ಸ್ಟೀಲ್ ಬ್ಯಾರಿಕೇಡ್ ಗಳನ್ನು ಅಳವಡಿಸಲು ನಿರ್ಧರಿಸಿದೆ.
ಮೆಜಸ್ಟಿಕ್ ಮೆಟ್ರೋ ಸ್ಟೇಷನ್, ಆರ್.ವಿ ರೋಡ್, ಕೆ.ಆರ್.ಪುರ, ಇಂದಿರಾ ನಗರ, ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಸ್ಟೀಲ್ ಬ್ಯಾರಿಕೇಡ್ಗಳನ್ನು ಅಳವಡಿಸಲಾಗುತ್ತಿದೆ.
ಸ್ಟೀಲ್ ಬ್ಯಾರಿಕೇಡ್ ಗಳು ಉಪಯುಕ್ತವಾಗಲಾರದು, ಪಿಎಸ್ ಡಿ ಡೋರ್ಗಳನ್ನು ಅಳವಡಿಸಿದರೆ ಮಾತ್ರ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವವರನ್ನು ತಡೆಗಟ್ಟಬಹುದು ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟು 83 ಮೆಟ್ರೋ ನಿಲ್ದಾಣಗಳ ಪೈಕಿ ಸದ್ಯ ನಾಲ್ಕು ನಿಲ್ದಾಣಗಳಲ್ಲಿ ಸ್ಟೀಲ್ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಉಳಿದ ಮೆಟ್ರೋ ಸ್ಟೇಷನ್ಗಳಲ್ಲಾದರೂ ಪಿಎಸ್ ಡಿ ಡೋರ್ ಅಥವಾ ಸ್ಟೀಲ್ ಗೇಟ್ಗಳನ್ನು ಅಳವಡಿಸಿ ಎಂಬುದು ಪ್ರಯಾಣಿಕರ ಮನವಿ.
ಈ ನಡುವೆ ಬಿಎಂ ಆರ್ ಸಿ ಎಲ್ ಮಾತ್ರ ಪಿಂಕ್ ಲೈನ್ ಕಾಳೇನ ಅಗ್ರಹಾರ – ನಾಗವಾರ ಮೆಟ್ರೋ ಮಾರ್ಗದ ಅಂಡರ್ ಗ್ರೌಂಡ್ ಮೆಟ್ರೋ ಮಾರ್ಗದಲ್ಲಿ ಪಿಎಸ್ ಡಿ ಡೋರ್ ಅಳವಡಿಸಲು ಸಿದ್ದತೆ ಮಾಡಿಕೊಂಡಿದ್ದು, ಈಗಾಗಲೇ ಟೆಂಡರ್ ಕೂಡ ನೀಡಿದೆ ಎಂಬುದು ವಿಶೇಷ.

