HomeKarnatakaGood News: ಬೆಂಗಳೂರಿಗೆ ಗುಡ್‌ನ್ಯೂಸ್, ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಪರೀಕ್ಷಾರ್ಥ ಸಂಚಾರ ಆರಂಭ

Good News: ಬೆಂಗಳೂರಿಗೆ ಗುಡ್‌ನ್ಯೂಸ್, ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಪರೀಕ್ಷಾರ್ಥ ಸಂಚಾರ ಆರಂಭ

ಬೆಂಗಳೂರು ನಗರದ ಜನರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ಕೊಟ್ಟಿದೆ. ಗುಲಾಬಿ ಮಾರ್ಗದಲ್ಲಿ ಭಾನುವಾರ ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ. ಈ ಮಾರ್ಗವನ್ನು ಏಪ್ರಿಲ್ 2026ರಲ್ಲಿ ಸಂಚಾರಕ್ಕೆ ಪೂರ್ಣಗೊಳಿಸುವ ಗುರಿ ಇದೆ.

ಕಾಳೇನ ಅಗ್ರಹಾರ-ತಾವರೆಕೆರೆ ತನಕದ ಗುಲಾಬಿ ಮಾರ್ಗದಲ್ಲಿ (ಸುಮಾರು 7.5 ಕಿಮೀ ಉದ್ದ) ರೋಲಿಂಗ್ ಸ್ಟಾಕ್ ಪರೀಕ್ಷೆಗಳನ್ನು ಭಾನುವಾರ ಆರಂಭವಾಗಲಿದೆ. ಏಪ್ರಿಲ್ 2026ರ ಮಧ್ಯಭಾಗದೊಳಗೆ ನಿಗಮವು ಇದನ್ನು ಪೂರ್ಣಗೊಳಿಸುವ ಯೋಜನೆ ಹೊಂದಿದೆ.

ಈ ಮುಖ್ಯ ಪರೀಕ್ಷೆಗಳು (Main Line Testing) ವಾಣಿಜ್ಯ ಸಂಚಾರ ಮಾಡುವ ಮೊದಲು ಕೈಗೊಳ್ಳಲಾಗುವ ಅತ್ಯಂತ ಮಹತ್ವದ ಚಟುವಟಿಕೆಯಾಗಿದ್ದು, ನೈಜ ಕ್ಷೇತ್ರ ಪರಿಸ್ಥಿತಿಗಳಲ್ಲಿ ರೈಲುಗಳ ಕಾರ್ಯಕ್ಷಮತೆ ಹಾಗೂ ವ್ಯವಸ್ಥೆಗಳ ಪರಸ್ಪರ ಸಂಯೋಜನೆಯ ಸಮಗ್ರ ಪರಿಶೀಲನೆಯನ್ನು ಒಳಗೊಂಡಿರುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖ್ಯ ಸಂಚಾರಕ್ಕೆ ಶಾಸನಬದ್ಧ ಅನುಮೋದನೆಗಳನ್ನು ಪಡೆಯಲು ಈ ಪರೀಕ್ಷೆಗಳು ಅಗತ್ಯವಾಗಿದೆ. ಮೇಲ್ಕಂಡ ಅವಧಿಯಲ್ಲಿ ಟ್ರಾಕ್ಷನ್ ಮತ್ತು ಬ್ರೇಕ್, ಆಸಿಲೇಷನ್ (Oscillation), ಸಿಗ್ನಲಿಂಗ್, ವಿದ್ಯುತ್ ಮತ್ತು ದೂರಸಂಪರ್ಕ ವ್ಯವಸ್ಥೆಗಳೊಂದಿಗೆ ಏಕೀಕರಣ (Integration) ಸೇರಿದಂತೆ ಹಲವು ಪರೀಕ್ಷೆಗಳು ನಡೆಸಲಾಗುತ್ತವೆ.

ಇದು ಗುಲಾಬಿ ಮಾರ್ಗದಲ್ಲಿನ ಯೋಜನೆಯ ಮಹತ್ವದ ಮೈಲಿಗಲ್ಲಿನತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ. ಸಾರ್ವಜನಿಕ ಸೇವೆಗೆ ಸದರಿ ಮಾರ್ಗ ತೆರೆಯುವ ಮೊದಲು ಅತ್ಯುನ್ನತ ಮಟ್ಟದ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಬಿಎಂಆರ್‌ಸಿಎಲ್ ಸದಾ ಬದ್ಧವಾಗಿದೆ ಎಂದು ತಿಳಿಸಿದೆ.

ಗುಲಾಬಿ ಮಾರ್ಗದ ವಿವರ: ಗುಲಾಬಿ ಮಾರ್ಗ ಕಾಳೇನ ಅಗ್ರಹಾರ-ನಾಗವಾರ ತನಕ ಸುಮಾರು 21.25 ಕಿ.ಮೀ. ಉದ್ದದ ಮೆಟ್ರೋ ಮಾರ್ಗವಾಗಿದೆ. ಇದು ದಕ್ಷಿಣ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸುತ್ತದೆ. ಈ ಮಾರ್ಗವನ್ನು ಎರಡು ಹಂತದಲ್ಲಿ ಉದ್ಘಾಟಿಸಲು ಬಿಎಂಆರ್‌ಸಿಎಲ್ ತಯಾರಿ ನಡೆಸಿದೆ.

ಗುಲಾಬಿ ಮಾರ್ಗದಲ್ಲಿ ಸುರಂಗ ಮತ್ತು ಎತ್ತರಿಸಿದ ಮಾರ್ಗವಿದೆ. ಮೊದಲ ಹಂತದಲ್ಲಿ ಕಾಳೇನ ಅಗ್ರಹಾರ-ತಾವರೆಕೆರೆ ಎತ್ತರಿಸಿದ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಇದರಲ್ಲಿ ಪರೀಕ್ಷೆಗಳು ಇಂದು ಆರಂಭವಾಗುತ್ತಿವೆ.

ಗುಲಾಬಿ ಮಾರ್ಗ ಒಟ್ಟು 18 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ ಸುರಂಗ ಮಾರ್ಗದಲ್ಲಿ 12 ಮತ್ತು ಎತ್ತರಿಸಿದ ಮಾರ್ಗದಲ್ಲಿ 6 ನಿಲ್ದಾಣಗಳಿವೆ. 2026ರ ಡಿಸೆಂಬರ್ ವೇಳೆಗೆ  ಸಂಪೂರ್ಣ ಗುಲಾಬಿ ಮಾರ್ಗವನ್ನು ಕಾರ್ಯಾಚರಣೆಗೆ ಮುಕ್ತವಾಗಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ.

ಗುಲಾಬಿ ಮಾರ್ಗದ ವಿಶೇಷತೆ ಎಂದರೆ ಬೆಂಗಳೂರು ನಗರದ ಅತಿ ಉದ್ದದ ಸುರಂಗ ಮಾರ್ಗ ಇಲ್ಲಿದೆ. ಸುಮಾರು 13.76 ಕಿ.ಮೀ. ರೈಲು ಮಾರ್ಗ ಭೂಗತವಾಗಿದೆ. ಬಿಇಎಂಎಲ್‌ ಗುಲಾಬಿ ಮಾರ್ಗಕ್ಕೆ ಅಗತ್ಯವಿರುವ ಮೆಟ್ರೋ ರೈಲುಗಳನ್ನು ಪೂರೈಸುತ್ತದೆ.

ಈ ಚಾಲಕ ರಹಿತ ರೈಲಿನ ಮೊದಲ ವಿನ್ಯಾಸವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈಗ ಆ ರೈಲಿನ ಮೂಲಕವೇ ಪರೀಕ್ಷಾರ್ಥ ಸಂಚಾರವನ್ನು ಆರಂಭಿಸಲಾಗಿದೆ. ಗುಲಾಬಿ ಮಾರ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ನೀಲಿ ಮಾರ್ಗ ಮತ್ತು ಈಗಾಗಲೇ ಸಂಚಾರ ಆರಂಭವಾಗಿರುವ ಹಳದಿ ಮಾರ್ಗಕ್ಕೆ ಸಹ ಸಂಪರ್ಕವನ್ನು ಕಲ್ಪಿಸುತ್ತದೆ.

ಗುಲಾಬಿ ಮಾರ್ಗದ ನಿಲ್ದಾಣಗಳು

  • ಕಾಳೇನ ಅಗ್ರಹಾರ (ಉತ್ತರ ಬೆಂಗಳೂರು)
  • ಹುಳಿಮಾವು
  • ಐಐಎಂಬಿ    
  • ಜೆಪಿ ನಗರ 4ನೇ ಹಂತ
  • ಡೈರಿ ವೃತ್ತ
  • ಲಕ್ಕಸಂದ್ರ
  • ಲ್ಯಾಂಗ್ಫೋರ್ಡ್ ಟೌನ್
  • ರಾಷ್ಟ್ರೀಯ ಸೈನಿಕ ಶಾಲೆ
  • ಮಹಾತ್ಮ ಗಾಂಧಿ ರಸ್ತೆ
  • ಶಿವಾಜಿ ನಗರ
  • ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ    
  • ಪಾಟರಿ ಟೌನ್‌
  • ಟ್ಯಾನರಿ ರಸ್ತೆ
  • ವೆಂಕಟೇಶಪುರ
  • ಕಾಡುಗುಂಡನಹಳ್ಳಿ
  • ನಾಗವಾರ (ದಕ್ಷಿಣ ಬೆಂಗಳೂರು)

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular