ಮಹಾರಾಷ್ಟ್ರದ ನಾಗಪುರ ದೀಕ್ಷಾಭೂಮಿಯಲ್ಲಿ 2026ರ ಅಕ್ಟೋಬರ್ 20 ರಂದು (ವಿಜಯದಶಮಿ ದಿನ) ನಡೆಯಲಿರುವ ಧಮ್ಮ ಚಕ್ರ ಪ್ರವರ್ತನಾ ದಿನದ ಅಂಗವಾಗಿ ಆಯೋಜಿಸಲಾಗುತ್ತಿರುವ ‘ದೀಕ್ಷಾಭೂಮಿ ಯಾತ್ರೆ’ಗೆ ತೆರಳಲು ಅರ್ಹ ಯಾತ್ರಾರ್ಥಿಗಳಿಂದ ಸಮಾಜ ಕಲ್ಯಾಣ ಇಲಾಖೆಯು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
2026-27ನೇ ಸಾಲಿನ ಈ ಯಾತ್ರೆಗಾಗಿ ಅಕ್ಟೋಬರ್ 18 ರಿಂದ 20 ರವರೆಗೆ ಕೆ.ಎಸ್.ಆರ್.ಟಿ.ಸಿ. ಮತ್ತು ಇತರ ಸಾರಿಗೆ ಬಸ್ಸು ಹಾಗೂ ರೈಲಿನ ಮೂಲಕ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗುತ್ತದೆ. ಯಾತ್ರೆಗೆ ಹೋಗಬಯಸುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳು ಹಾಗೂ ಅರ್ಹ ಯಾತ್ರಾರ್ಥಿಗಳು ಸೆಪ್ಟೆಂಬರ್ 30-09-2026 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ https://swd.karnataka.gov.in/ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ, ಅರ್ಜಿಯ ಪ್ರತಿಯೊಂದಿಗೆ ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ಗಳ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಸಂಬಂಧಪಟ್ಟ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕಾಗಿದೆ ಎಂದು ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
7 ಮಕ್ಕಳ ಪಾಲನಾ ಸಂಸ್ಥೆಗಳ ಜೆ.ಜೆ. ಕಾಯ್ದೆ ನೋಂದಣಿ ರದ್ದು
ಬಳ್ಳಾರಿ : ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ 7 ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳ ಜುವೆನೈಲ್ ಜಸ್ಟೀಸ್ (ಜೆ.ಜೆ.) ಕಾಯ್ದೆಯಡಿಯ ನೋಂದಣಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಕೈಬಿಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂಸ್ಥೆಗಳು ಕೇವಲ ವಸತಿಯುತ ಶಿಕ್ಷಣ ಒದಗಿಸುತ್ತಿದ್ದು, ಅಲ್ಲಿ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮಾತ್ರ ದಾಖಲಾಗಿದ್ದಾರೆ. ಜೆ.ಜೆ. ಕಾಯ್ದೆಯಡಿ ಬರುವ ‘ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳು’ ಈ ಸಂಸ್ಥೆಗಳಲ್ಲಿ ಇಲ್ಲದಿರುವುದರಿಂದ, ಜೆ.ಜೆ. ಕಾಯ್ದೆಯಿಂದ ತಮ್ಮ ಸಂಸ್ಥೆಗಳನ್ನು ಕೈಬಿಡುವಂತೆ ಸಂಸ್ಥೆಯ ಮುಖ್ಯಸ್ಥರೇ ಪತ್ರ ಮುಖೇನ ಕೋರಿದ್ದರು. ಇದರ ಅನ್ವಯ ಕೇಂದ್ರ ಕಚೇರಿಯ ಆದೇಶದಂತೆ 7 ಸಂಸ್ಥೆಗಳನ್ನು ಜೆ.ಜೆ. ಕಾಯ್ದೆಯ ವ್ಯಾಪ್ತಿಯಿಂದ ರದ್ದುಗೊಳಿಸಲಾಗಿದೆ.
*ನೋಂದಣಿ ರದ್ದುಗೊಂಡ ಸಂಸ್ಥೆಗಳು
ಡಾ. ಭೀಮ ವಿದ್ಯಾ ಸಂಸ್ಥೆ, ಜ್ಞಾನೋದಯ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ, ಸಿಂಧನೂರು ರಸ್ತೆ, ಸಿರುಗುಪ್ಪ.
ಸಿ.ಎಸ್.ಐ. ಗರ್ಲ್ಸ್ ಹೋಮ್, ಎಸ್.ಎನ್. ಪೇಟೆ, ಬಳ್ಳಾರಿ.
ವಿಜಯಲಕ್ಷ್ಮಿ ಯುವತಿ ಮಂಡಳಿ, ಕಪ್ಪಗಲ್ ರಸ್ತೆ, ಬಳ್ಳಾರಿ.
ನವಜೀವನ ಅಂಗವಿಕಲರ ಪುನಶ್ಚೇತನ ಕೇಂದ್ರ, ಇಂದಿರಾನಗರ, ಬಳ್ಳಾರಿ.
ಚೆಂಗಾರೆಡ್ಡಿ ಬುದ್ಧಿಮಾಂದ್ಯ ವಸತಿ ಶಾಲೆ, ಬೆಳಗಲ್ಲು ರಸ್ತೆ, ಬಳ್ಳಾರಿ.
ಬಿ.ಡಿ.ಡಿ.ಎಸ್. ಸಂಸ್ಥೆ, ಸುಧಾ ಕ್ರಾಸ್, ಬಳ್ಳಾರಿ.
ರೆಹಬೂತ್ ಮಕ್ಕಳ ವಸತಿ ನಿಲಯ, ತಾರಾನಾಥ ಆಸ್ಪತ್ರೆ ಹತ್ತಿರ, ಬಳ್ಳಾರಿ.
ಈ ಮೇಲ್ಕಂಡ ಸಂಸ್ಥೆಗಳು ಇನ್ನು ಮುಂದೆ ಜೆ.ಜೆ. ಕಾಯ್ದೆಯಡಿ ಮಕ್ಕಳ ಪಾಲನಾ ಸಂಸ್ಥೆಗಳಾಗಿ ಮುಂದುವರಿಯುವುದಿಲ್ಲವಾದ್ದರಿಂದ, ಸಾರ್ವಜನಿಕರು ಪಾಲನೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳನ್ನು ಈ ಸಂಸ್ಥೆಗಳಿಗೆ ದಾಖಲಿಸಬಾರದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

