ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಯೊಬ್ಬರಿಗೆ ಲಾಠಿಯಿಂದ ಬಡಿದು, ಆಕೆಯ ಕೂದಲು ಹಿಡಿದು ಎಳೆದೊಯ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ದೌರ್ಜನ್ಯದ ದೃಶ್ಯಾವಳಿಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಹಫೀಜ್ಪೇಟ್ ರೈಲು ನಿಲ್ದಾಣದ ಹೊರಭಾಗದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿರುವ ವಿಡಿಯೋದಲ್ಲಿ, ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರು ಮಹಿಳೆಗೆ ಲಾಠಿಯಿಂದ ಹೊಡೆಯುವುದು ಮತ್ತು ನಂತರ ಆಕೆಯ ತಲೆಗೂದಲು ಹಿಡಿದು ಬಲವಂತವಾಗಿ ಎಳೆದುಕೊಂಡು ಹೋಗುವುದು ಕಂಡುಬಂದಿದೆ. ಸ್ಥಳೀಯರ ಮಾಹಿತಿಯ ಪ್ರಕಾರ, ಈ ಘಟನೆಗೂ ಮುನ್ನ ಆ ಮಹಿಳೆ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು ಎನ್ನಲಾಗಿದೆ.
ಆದರೆ ಮಹಿಳೆ ಯಾವುದೇ ತಪ್ಪು ಮಾಡಿದ್ದರೂ ಒಬ್ಬ ಸಮವಸ್ತ್ರಧಾರಿ ಆಕೆಯ ಮೇಲೆ ಇಷ್ಟೊಂದು ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಹಾಗೂ ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸಿದ್ದಾರೆ. ಈ ಘಟನೆಗೆ ಕಾರಣವಾದ ಸಂಪೂರ್ಣ ಸನ್ನಿವೇಶದ ಬಗ್ಗೆ ಸಮಗ್ರ ತನಿಖೆ ನಡೆಸಿ, ಹಲ್ಲೆ ನಡೆಸಿದ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.
ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ರೈಲ್ವೆ ಭದ್ರತಾ ಪಡೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಘಟನೆಯ ಕುರಿತು ತಕ್ಷಣವೇ ಪರಿಶೀಲನೆ ನಡೆಸಲಾಗಿದ್ದು, ವಿಡಿಯೋದಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಹಫೀಜ್ಪೇಟ್ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆಯ ಗೃಹರಕ್ಷಕ ಸಿಬ್ಬಂದಿ ಎಂದು ಗುರುತಿಸಲಾಗಿದೆ.
ರೈಲ್ವೆ ಭದ್ರತಾ ಪಡೆಯು ಆತನನ್ನು ರೈಲ್ವೆ ಕರ್ತವ್ಯದಿಂದ ತಕ್ಷಣವೇ ಬಿಡುಗಡೆ ಮಾಡಿದ್ದು, ಮುಂದಿನ ಸೂಕ್ತ ಶಿಸ್ತುಕ್ರಮಕ್ಕಾಗಿ ಆತನನ್ನು ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆಗೆ ಮರಳಿ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಸದ್ಯ ಈ ಅಮಾನವೀಯ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ಮುಂದುವರಿದಿದೆ.

