ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೊಂಡಿದೆ. ಚಾಮುಂಡಿ ಬೆಟ್ಟದಲ್ಲಿ ನಾಡ ಅದಿದೇವತೆ ಚಾಮುಂಡಿ ತಾಯಿಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಚಾಮುಂಡಿ ತಾಯಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಚಾಲನೆ ನೀಡಿದರು.
ಬೆಳಗ್ಗೆ 11.50ರಿಂದ 12.13ರ ನಡುವಿನ ಶುಭ ಧನುರ್ ಲಗ್ನದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್, ಡಿಸಿಎಂ ಪರಮೇಶ್ವರ್, ಸಚಿವ ಯತೀಂದ್ರ ಸಿದ್ದರಾಮಯ್ಯ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ನೂರಾರು ಮಠಾಧೀಶರು ಹಾಗೂ ಧರ್ಮಗುರುಗಳು ಭಾಗವಹಿಸಿದ್ದರು.
ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪಾಸ್ ಇದ್ದವರಿಗೆ ಮಾತ್ರ ಉದ್ಘಾಟನಾ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ.
ಮೈಸೂರು ದಸರಾ ಉದ್ಘಾಟನೆಗೂ ಮುನ್ನವೇ ಅವಘಡ: ಮುರಿದು ಬಿದ್ದ ನಂದಿಧ್ವಜ
ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಆರಂಭವಾಗಲಿದ್ದು, ದಸರಾ ಉದ್ಘಾಟನೆಗೂ ಮುನ್ನ ಚಾಮುಂಡಿ ಬೆಟ್ಟದಲ್ಲಿ ಅವಘಡವೊಂದು ಸಂಭವಿಸಿದೆ.
ನಂದಿಧ್ವಜ ಮುರಿದು ಬಿದ್ದು ಅವಘಡ ಸಂಭವಿಸಿದೆ. ಚಾಮುಂಡಿ ಬೆಟ್ಟದ ಮಹಿಷ ಪ್ರತಿಮೆ ಬಳಿ ನಂದಿಧ್ವಜದ ಕಂಬ ಮುರಿದು ಬಿದ್ದಿದೆ. ಸಧ್ಯ ಸಂಭವಿಸಲಿದ್ದ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದಂತಾಗಿದೆ.
ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದು, ಅವರ ಸ್ವಾಗತಕ್ಕೆಂದು ನಂದಿಧ್ವಜ ತಂದಿದ್ದ ವೇಳೆ ಏಕಾಏಕಿ ಮುರಿದು ಬಿದ್ದಿದೆ.
ನಂದಿ ಧ್ವಜ ಹಿಡಿದು ಕುಣಿಯುತ್ತಿದ್ದ ವೇಳೆ ನಂದಿಧ್ವಜದ ಕಂಬ ಮುರಿದು ಬಿದ್ದಿದೆ. ತಕ್ಷಣ ಕಲಾವಿದರು ನಂದಿಧ್ವಜವನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಆದರೆ ದಸರಾ ಉದ್ಘಾಟನೆಗೂ ಮುನ್ನ ನಡೆದ ಈ ಅವಘಡ ನೆರೆದಿದ್ದ ಜನರಲ್ಲಿ ತೀವ್ರ ಕಳವಳವುಂಟುಮಾಡಿದೆ.

