ಮೈಸೂರು: ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬನನ್ನು ಕಿಡ್ನ್ಯಾಪ್ ಮಾಡಿ ಮಂಗಳಮುಖಿ ವೇಷ ಹಾಕಿಸಿ ಭಿಕ್ಷಾಟನೆ ಮಾಡಿಸಿದ್ದೂ ಅಲ್ಲದೇ ಆತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಸೆಕ್ಸ್ ವರ್ಕ್ ಗೆ ಬಳಸಿಕೊಂಡು ಲಿಂಗ ಬದಲಾವಣೆಗೂ ಸಂಚು ರೂಪಿಸಿರುವ ಘಟನೆ ನಡೆದಿದೆ.
ಮೈಸೂರಿನಲ್ಲಿ ಬಸ್ ನಿಲ್ದಾಣದಿಂದ ಬಸ್ ಗಾಗಿ ಕಾಯುತ್ತಿದ್ದ ಯುವಕನೋರ್ವನನ್ನು ಅಪಹರಿಸಿ, ಆತನಿಗೆ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ, ‘ಅಕ್ಷತಾ’ ಎಂದು ಹೆಸರಿಟ್ಟು ಭಿಕ್ಷಾಟನೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.
ಅಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಲಿಂಗ ಬದಲಾವಣೆಗೂ ಯತ್ನಿಸಲಾಗಿತ್ತು. ತಪ್ಪಿಸಿಕೊಂಡ ಬಳಿಕವೂ ಬೆದರಿಕೆ ಹಾಕಲಾಗಿದ್ದು, ಸಂತ್ರಸ್ತ ಯುವಕ ನ್ಯಾಯಕ್ಕಾಗಿ ಲಷ್ಕರ್ ಠಾಣೆ ಮೆಟ್ಟಿಲೇರಿದ್ದಾನೆ.
ನಂಜನಗೂಡಿನ ತ್ಯಾಗರಾಜ ಕಾಲೋನಿಯ ಅನಿಲ್ ಕುಮಾರ್ ಎಂಬ ಯುವಕನಿಗೆ ಕೆಲ ಮಂಗಳಮುಖಿಯರು ಈ ರೀತಿ ದುಷ್ಕೃತ್ಯವೆಸಗಿದ್ದು, ಆತ ತಪ್ಪಿಸಿಕೊಂಡು ಬಂದು ಬಚಾವ್ ಆಗಿದ್ದಾನೆ. ಈ ಕರಾಳ ದಂಧೆಗೆ ಬಲಿಪಶುವಾಗಿರುವ ಅನಿಲ್ ಕುಮಾರ್ ತನಗೆ ರಕ್ಷಣೆ ನೀಡುವಂತೆ ಹಾಗೂ ನ್ಯಾಅಯ ಕೊಡಿಸುವಂತೆ ಲಷ್ಕರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಅನಿಲ್ ಕುಮಾರ್‌ಗೆ ಮಂಗಳಮುಖಿ ಅನಿತಾ ಮತ್ತು ತಂಡ ಪರಿಚಯವಾಗಿತ್ತು. ನಂತರ ಆತನನ್ನು ಬಲವಂತವಾಗಿ ಅಪಹರಿಸಿದ ತಂಡ ಮಂಗಳೂರಿಗೆ ಕರೆದೊಯ್ದಿತ್ತು. ಅಲ್ಲಿ ಆತನಿಗೆ ಬಲವಂತವಾಗಿ ಸೀರೆ, ನೈಟಿ ತೊಡಿಸಿ, ಕಿವಿ ಓಲೆ, ಮೂಗುಬಟ್ಟು ಹಾಕಿಸಿ ‘ಅಕ್ಷತಾ’ ಎಂದು ಹೆಸರಿಟ್ಟು ಮಂಗಳಮುಖಿಯಾಗಿ ವೇಷ ಬದಲಿಸಿದ್ದರು.
ಅನಿಲ್‌ನನ್ನು ಬೀದಿಗಳಲ್ಲಿ ಅಂಗಡಿಗಳ ಮುಂದೆ ನಿಲ್ಲಿಸಿ ಪ್ರತಿದಿನ 2 ರಿಂದ 3 ಸಾವಿರ ರೂಪಾಯಿ ಕಲೆಕ್ಷನ್ ಮಾಡಿಸುತ್ತಿದ್ದರು. ಅಷ್ಟೇ ಅಲ್ಲದೆ, ಮಂಗಳೂರು ಮತ್ತು ಕೇರಳದ ವಿವಿಧ ಭಾಗಗಳಿಗೆ ಕಳುಹಿಸಿ ಸೆಕ್ಸ್ ವರ್ಕ್ಗೆ ಬಳಸಿಕೊಂಡಿದ್ದಾರೆ ಎಂದು ಅನಿಲ್ ದೂರಿನಲ್ಲಿ ಆರೋಪಿಸಿದ್ದಾರೆ. ಆತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳಮುಖಿ ಎಂದು ಸರ್ಟಿಫಿಕೇಟ್ ಕೊಡಿಸಲಾಗಿದೆ. ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಲಿಂಗ ಬದಲಾವಣೆ ಮಾಡಲು ಈ ತಂಡ ಸ್ಕೆಚ್ ಹಾಕಿತ್ತಂತೆ.
ಈ ದಂಧೆಕೋರರ ಕಪಿಮುಷ್ಠಿಯಿಂದ ಹೊರಬರಲು ನಿರ್ಧರಿಸಿದ ಅನಿಲ್, ತಾನು ದುಡಿದ 3 ಲಕ್ಷ ರೂಪಾಯಿ ಕೇಳಿದಾಗ ಅನಿತಾ ಉಲ್ಟಾ ಹೊಡೆದಿದ್ದಾಳೆ. ತನ್ನ ಮನೆಯಿಂದ 5 ಲಕ್ಷ ರೂಪಾಯಿ ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದಾನೆ ಎಂದು ಸುಳ್ಳು ಕೇಸ್ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ನಂಜನಗೂಡು ಸೇರಿದರೆ, ಅಲ್ಲಿಗೂ ಮಂಗಳಮುಖಿಯರನ್ನು ಕಳಿಸಿ ದಂಧೆಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಅನಿಲ್ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು ಶೇ. 90ರಷ್ಟು ದೃಷ್ಟಿ ದೋಷ ಹೊಂದಿರುವ ಅನಿಲ್ ಕುಮಾರ್, ನಂಜನಗೂಡು ಪೊಲೀಸರು ಸ್ಪಂದಿಸದ ಹಿನ್ನೆಲೆಯಲ್ಲಿ ಮೈಸೂರಿನ ಲಷ್ಕರ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

