ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದ ರಾಜ್ಯದ ರೈಲು ಯೋಜನೆಯೊಂದನ್ನು ರೈಲ್ವೆ ಮಂಡಳಿ ರದ್ದುಗೊಳಿಸಿದೆ. ಮೈಸೂರು-ಬೆಳಗೊಳ-ಕುಶಾಲನಗರ ನೂತನ ರೈಲು ಯೋಜನೆ ರದ್ದಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಒಪ್ಪಿಗೆ ನೀಡಿತ್ತು. ಕೊಡಗು ಜಿಲ್ಲೆಗೆ ರೈಲು ಸಂಪರ್ಕ ಕಲ್ಪಿಸುವ ಪ್ರಮುಖವಾದ ಯೋಜನೆ ಇದಾಗಿತ್ತು.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಅಧಿಕಾರಿಗಳು ಮೈಸೂರು-ಕುಶಾಲನಗರ ನಡುವಿನ 87.2 ಕಿ.ಮೀ. ನೂತನ ರೈಲು ಮಾರ್ಗ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ವಿವಿಧ ಕಾರಣಕ್ಕೆ ಈ ರೈಲು ಮಾರ್ಗ ಕಾರ್ಯಸಾಧುವಲ್ಲ ಎಂದು ರೈಲ್ವೆ ಮಂಡಳಿ ಹೇಳಿದೆ.
ಮೈಸೂರು-ಬೆಳಗೊಳ-ಕುಶಾಲನಗರ ನೂತನ ರೈಲು ಮಾರ್ಗ ಯೋಜನೆಗೆ ಫೆಬ್ರವರಿ 27, 2019ರಲ್ಲಿ ಒಪ್ಪಿಗೆ ನೀಡಲಾಗಿತ್ತು. ಯೋಜನೆಯ ವೆಚ್ಚ ಸುಮಾರು 1,854 ಕೋಟಿ ರೂ. ಆಗಿತ್ತು. ಆದರೆ ಈ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
ರೈಲು ಮಾರ್ಗ ನಿರ್ಮಾಣಕ್ಕೆ ಅರಣ್ಯ ನಾಶ ಮಾಡಲಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಅರಣ್ಯ ನಾಶದಿಂದ ಭೂ ಕುಸಿತ ಉಂಟಾಗಬಹುದು ಎಂದು ಪರಿಸರ ಹೋರಾಟಗಾರರು ಯೋಜನೆ ವಿರೋಧಿಸಿದ್ದರು. ಈಗ ಅಂತಿಮವಾಗಿ ರೈಲ್ವೆ ಮಂಡಳಿಯೇ ಯೋಜನೆ ರದ್ದುಗೊಳಿಸಿದೆ.
ರೈಲು ಮಾರ್ಗ ಏಕೆ ಬೇಡ?: ಮೈಸೂರು-ಬೆಳಗೊಳ-ಕುಶಾಲನಗರ ನೂತನ ರೈಲು ಮಾರ್ಗ ಆರ್ಥಿಕವಾಗಿ ಕಾರ್ಯ ಸಾಧುವಲ್ಲ. ಪ್ರಯಾಣಿಕರ ಸಂಖ್ಯೆ, ಆರ್ಥಿಕ ಅಂಶಗಳ ಆಧಾರದ ಮೇಲೆ ಈ ಯೋಜನೆ ರದ್ದುಗೊಳಿಸಲಾಗುತ್ತಿದೆ ಎಂದು ರೈಲ್ವೆ ಮಂಡಳಿ ಹೇಳಿದೆ.
ಮೈಸೂರು-ಕೊಡಗು ಸಂಸದರಾಗಿದ್ದ ಪ್ರತಾಪ್ ಸಿಂಹ ಈ ಯೋಜನೆ ಜಾರಿಗೊಳಿಸುವ ಮೂಲಕ ಕೊಡಗು ಜಿಲ್ಲೆಗೆ ರೈಲು ಸಂಪರ್ಕ ಕಲ್ಪಿಸಿಯೇ ಸಿದ್ಧ ಎಂದು ಹೇಳಿದ್ದರು. 2022-23ರ ಕೇಂದ್ರ ಬಜೆಟ್‌ನಲ್ಲಿ ಯೋಜನೆಗಾಗಿ 1,000 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಲಾಗಿತ್ತು.
2019ರಲ್ಲಿ ಯೋಜನೆಗೆ ಒಪ್ಪಿಗೆ ಸಿಕ್ಕ ಬಳಿಕ 2020ರ ಅಕ್ಟೋಬರ್‌ನಲ್ಲಿ ನೈಋತ್ಯ ರೈಲ್ವೆ ಮುಖ್ಯ ಆಡಳಿತ ಅಧಿಕಾರಿ (ನಿರ್ಮಾಣ) ಮೈಸೂರು-ಬೆಳಗೊಳ-ಕುಶಾಲನಗರ ನೂತನ ಪ್ರಸ್ತಾವಿತ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಟೆಂಡರ್ ಕರೆದಿದ್ದರು.
2021ರ ಆಗಸ್ಟ್‌ನಲ್ಲಿ ಟೆಂಡರ್ ಅಂತಿಮಗೊಳಿಸಲಾಗಿತ್ತು. ಬೆಂಗಳೂರು ಮೂಲದ ಕಂಪನಿಯೊಂದು 1.26 ಕೋಟಿ ರೂ. ವೆಚ್ಚದಲ್ಲಿ ಮೈಸೂರು-ಬೆಳಗೊಳ-ಕುಶಾಲನಗರ ನೂತನ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಯನ್ನು ಮಾಡಿತ್ತು.
ಭೂ ಸ್ವಾಧೀನ, ರೈಲು ಮಾರ್ಗದ ವಿನ್ಯಾಸ, ಅಗತ್ಯ ಇರುವ ಸರ್ಕಾರಿ ಮತ್ತು ಖಾಸಗಿ ಭೂಮಿ ಮುಂತಾದ ವಿಚಾರಗಳ ಕುರಿತು ಸಮೀಕ್ಷೆಯನ್ನು ಮಾಡಿತ್ತು. ಶ್ರೀರಂಗಪಟ್ಟಣ ಸಮೀಪದ ಬೆಳಗೊಳದಿಂದ ಮಾರ್ಗ ಆರಂಭವಾಗಿ ಕುಶಾಲನಗರ ಕೊಪ್ಪ ಬಳಿ ಅಂತ್ಯಗೊಳಿಸುವುದು ಪ್ರಸ್ತಾವಿತ ಯೋಜನೆಯಾಗಿತ್ತು.
ಯೋಜನೆಯಿಂದ ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಆಗುತ್ತದೆ, ಜೀವನದಿ ಕಾವೇರಿಯ ನೈಸರ್ಗಿಕ ಹರಿವಿಗೆ ತಡೆ ಉಂಟಾಗಲಿದೆ ಎಂದು ಪರಿಸರ ಹೋರಾಟಗಾರರು ವಾದ ಮಂಡಿಸಿ, ಯೋಜನೆ ವಿರೋಧಿಸಿದ್ದರು. ಈಗ ಆರ್ಥಿಕ ಕಾರಣಕ್ಕೆ ಯೋಜನೆ ರದ್ದುಗೊಳಿಸಲಾಗುತ್ತಿದೆ.
ಈ ಹಿಂದೆಯೂ ಮೈಸೂರು-ಬೆಳಗೊಳ-ಕುಶಾಲನಗರ ರೈಲು ಯೋಜನೆ ಪ್ರಸ್ತಾಪ ಕೇಳಿ ಬಂದಾಗ ರೈಲ್ವೆ ಇಲಾಖೆ ಅಧಿಕಾರಿಗಳು ಯೋಜನೆ ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ಹೇಳಿದ್ದರು. ಈಗಲೂ ಸಹ ಅದೇ ಕಾರಣಕ್ಕೆ ಯೋಜನೆ ರದ್ದುಗೊಳಿಸಲಾಗುತ್ತಿದೆ.
ಈ ರೈಲು ಯೋಜನೆ ಕುರಿತು ಪ್ರಾಥಮಿಕ ಸಮೀಕ್ಷೆ ನಡೆಸಿದಾಗ ಯೋಜನೆಗೆ ಪ್ರತಿ ಕಿಲೋಮೀಟರ್ ಮಾರ್ಗ ನಿರ್ಮಾಣಕ್ಕೆ 21.27 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿತ್ತು.
274.65 ಹೆಕ್ಟೇರ್ ಒಣಭೂಮಿ ಮತ್ತು 275.15 ಹೆಕ್ಟೇರ್ ನೀರಾವರಿ ಜಮೀನು ಅಗತ್ಯವಿದೆ ಎಂದು ಸಮೀಕ್ಷೆ ಹೇಳಿತ್ತು. ಕೊಡಗು ಜಿಲ್ಲೆಗೆ ರೈಲು ಸಂಪರ್ಕ ಬೇಕು ಎಂಬುದು ಬಹಳ ವರ್ಷಗಳ ಬೇಡಿಕೆಯಾಗಿದೆ. ಆದ್ದರಿಂದ ಈ ಯೋಜನೆ ಜಾರಿಗೊಳಿಸಲಾಗುತ್ತದೆ ಎಂಬ ನಿರೀಕ್ಷೆ ಇತ್ತು.
ಸಮೀಕ್ಷೆಯ ವರದಿಯಂತೆ ಮೈಸೂರು-ಕುಶಾಲನಗರ ವಯಾ ಬೆಳಗೊಳ ರೈಲು ಮಾರ್ಗ ಇಲವಾಲ, ಬಿಳಿಕೆರೆ, ಉದ್ದೂರು, ಹುಣಸೂರು, ಸತ್ತೇಗಾಲ, ಪಿರಿಯಾಪಟ್ಟಣ, ದೊಡ್ಡ ಹೊನ್ನೂರು ಮಾರ್ಗವಾಗಿ ಸಾಗಬೇಕಿತ್ತು.

