ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾತ್ರಿಯ ದಸರಾ ಹಬ್ಬಕ್ಕಾಗಿ ಸಿದ್ಧತೆಗಳು ಶುರುವಾಅಗಿವೆ. ಈ ಬಾರಿ ನಾಡ ಹಬ್ಬ ದಸರಾದಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳ ಆಯೋಜಿಸುವ ಕುರಿತು ಪರ-ವಿರೋಧ ಚರ್ಚೆಗಳು ಹೆಚ್ಚುತ್ತಿವೆ.
ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಕಂಬಳ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ. ಆದರೆ ಮೈಸೂರು ರಾಜಮನೆತನದ ಸಂಸದ ಯದುವೀರ್ ಒಡೆಯರ್ ಕಂಬಳ ಆಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯದಿವೀರ್ ಹೆಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 26ರಂದು ಗಜಪಯಣ ಆರಂಭವಾಗಲಿದ್ದು ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಟೂರ್ನಿಯ ಉದ್ಘಾಟಕರನ್ನು ನಿರ್ಣಯಿಸುವ ಅಧಿಕಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ. ಅಕ್ಟೋಬರ್ 21ರ ವಿಜಯದಶಮಿಯಂದು ಮಧ್ಯಾಹ್ನ 4:10ಕ್ಕೆ ಮೀನಾ ಲಗ್ನದಲ್ಲಿ ಜಂಬೂ ಸವಾರಿ ಜರುಗಲಿದೆ.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕಂಬಳದ ಬಗ್ಗೆಯೂ ಚರ್ಚೆಗಳು ನಡೆಯಿತು. ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳೋಣ ಎಂದು ಹೇಳಿದ್ದಾರೆ.
ಈ ನಡುವೆ ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಂಬಳ ಆಯೋಜಿಸಿದ್ದ ಪುತ್ತೂರು ಶಾಸಕ ಅಶೋಕ್ ರೈ ಈ ಬಾರಿ ನಾಡ ಹಬ್ಬ ದಸರಾದಲ್ಲಿ ಕಂಬಳ ಆಯೋಜಿಸಲು ಮುಂದಾಗಿದ್ದಾರೆ. ದಸರಾದಲ್ಲಿ ಕಂಬಳ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಸುಮಾರು 5 ರಿಂದ 6 ಕೋಟಿ ರೂ. ಅನುದಾನದ ಅಗತ್ಯವಿದ್ದು, ಜುಲೈ 15ರಿಂದಲೇ ನಾವು ಸಿದ್ಧತೆ ಆರಂಭಿಸಲಿದ್ದೇವೆ ಎಂದು ಅಶೋಕ್ ರೈ ಹೇಳಿದ್ದಾರೆ.
ರಾಜಮನೆತನಕ್ಕೂ ಹಾಗೂ ಕೋಣಗಳಿಗೂ ಐತಿಹಾಸಿಕ ಸಂಬಂಧವಿದೆ. ಮೈಸೂರಿನಲ್ಲಿ ಕೋಣಗಳನ್ನು ಬಿಟ್ಟು ಹೋಗುತ್ತಾರೆ, ದೊಡ್ಡ ಗುಂಡಿಗಳನ್ನು ತೋಡುತ್ತಾರೆ ಎಂಬಿತ್ಯಾದಿ ಅಪನಂಬಿಕೆಗಳಿದ್ದವು, ಅವುಗಳನ್ನೆಲ್ಲ ಸರಿಪಡಿಸುತ್ತೇವೆ. ಈಗಾಗಲೇ ಜಾಗ ವೀಕ್ಷಣೆ ಮಾಡಲಾಗಿದ್ದು, ಒಂದು ತಿಂಗಳು ಮುಂಚಿತವಾಗಿಯೇ ಕೋಣಗಳನ್ನು ತಂದು ಟ್ರಯಲ್ ರನ್ ಮಾಡಲಾಗುವುದು ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.
ದಸರಾ ಉನ್ನತ ಮಟ್ಟದ ಸಭೆಯಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದಸರಾದಲ್ಲಿ ಕಂಬಳ ಬೇಡ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲೂ ಕೇಳಿಬರುತ್ತಿದೆ. ಕಂಬಳವನ್ನು ಕರಾವಳಿ ಭಾಗವಾದ ಮಂಗಳೂರಿನಲ್ಲೇ ಅತ್ಯಂತ ಅದ್ಧೂರಿಯಾಗಿ ಆಚರಿಸೋಣ ಎಂದು ಅವರು ಸಲಹೆ ನೀಡಿದ್ದಾರೆ.
ಅಲ್ಲದೇ ದಸರಾದಲ್ಲಿ ಕಂಬಳ ಆಯೋಜನೆ ಅನವಶ್ಯಕವಾದ ಬೆಳವಣಿಗೆ. ದಸರಾ ಪರಂಪರೆ, ಸಂಪ್ರದಾಯವೇ ಬೇರೆ ಆಚರಣೆ. ದಸರಾದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಸೇರಿಸುತ್ತಾ ಹೋದರೆ ಹಲವಾರು ಸಮರ್ಪಕವಾಗಿ ನಡೆಸಲು ಆಗುವುದಿಲ್ಲ. ಈಗಾಗಲೇ ದಸರಾ ಟಿಕೆಟ್ ಸಮಸ್ಯೆ, ಹಲವು ಕಾರ್ಯಕ್ರಮಗಳು ಸರಿಯಾಗಿ ನಡೆಯುತ್ತಿ;ಲ್ಲ ಎಂಬ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಪ್ರತಿ ಬಾರಿ ದಸರಾದಲ್ಲಿಯೂ ಇಂತದ್ದೊಂದು ಸಮಸ್ಯೆ ಎದುರಾಗುತ್ತಿದೆ. ಹಾಗಾಗಿ ಮೊದಲು ಟಿಕೆಟ್ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆ ಪರಿಹರಿಸಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಮಾಡಬೇಕು. ಈಗ ಹೊಸದಾಗಿ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡ. ಅದನ್ನು ಕರಾವಳಿ ಭಾಗದಲ್ಲಿಯೇ ಅಲ್ಲಿನ ಸಂಸ್ಕೃತಿಯಾಗಿ ಯಶ್ವಿಯಾಗಿ ಆಚರಿಸೋಣ. ಅಲ್ಲಿ ಮಾಡುವುದಕ್ಕೆ ನಾವು ಕೂಡ ಬೆಂಬಲ ಕೊಡುತ್ತೇವೆ ಎಂದಿದ್ದಾರೆ.
ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿಚಾರವಾಗಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ನಮ್ಮ ದಸರಾ ಆಚರಣೆಯ ನಡುವೆ ಬೇರೆಯದನ್ನು ಯಾಕೆ ತರುತ್ತೀರಾ?. ರಾಜ್ಯದಲ್ಲಿ ಸವದತ್ತಿ ಎಲ್ಲಮ್ಮನ ಜಾತ್ರೆ, ಕರಾವಳಿಯ ಕಂಬಳ ಹಾಗೂ ಮೈಸೂರು ದಸರಾಗೆ ತನ್ನದೇ ಆದ ವಿಶಿಷ್ಟ ಪರಂಪರೆ ಮತ್ತು ಮಹತ್ವವಿದೆ. ನಮಗೆ ಕಂಬಳದ ಮೇಲೆ ಯಾವುದೇ ವಿರೋಧವಿಲ್ಲ. ಆದರೆ, ದಸರಾದ ಪರಂಪರೆಯೇ ಬೇರೆ. ಅದರ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ದಸರಾ ನಡೆಯಬೇಕು. ದಸರಾ ಒಳಗೆ ಬೇರೆ ಬೇರೆ ಆಚರಣೆಗಳನ್ನು ಬಲವಂತವಾಗಿ ತುರುಕುವ ಅಗತ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಾಳಿಯ ಕಂಬಳ ಕ್ರೀಡೆ ನಡೆಸುವ ವಿಚಾರವಾಗಿ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಕಾದುನೊಡಬೇಕಿದೆ.

