ಮೈಸೂರು: ಇಂದು ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಮಳೆಯ ಪ್ರಮಾಣ ಬಹಳ ಕಡಿಮೆಯಾಗಿ ಇಡೀ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ನೂರಾರು ಹಳ್ಳಿಗಳಿಗೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಜಾನುವಾರುಗಳಿಗೆ ಕೇವಲ 30 ವಾರಗಳಿಗೆ ಸಾಕಾಗುವಷ್ಟು ಮೇವು ಇದೆ. ಇಂತಹ ಪರಿಸ್ಥಿತಿಯಲ್ಲಿ ನಾವು ರಾಜ್ಯದ ಪ್ರವಾಸ ಮಾಡಿ ಎಲ್ಲೆಲ್ಲಿ ಬರ ಇದೆ ಎಂದು ಪರಿಶೀಲನೆ ಮಾಡಿ, ಈಗಾಗಲೇ 101 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದೇವೆ.
ಹೀಗೆಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಅವರು ಇಂದು ಮೈಸೂರು ಜಿಲ್ಲಾ ಪ್ರವಾಸದ ವೇಳೆ ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿ, ಜನರನ್ನುದ್ದೇಶಿಸಿ ಮಾತನಾಡಿದರು.
ಇನ್ನೊಂದು ವಾರದಲ್ಲಿ ಇನ್ನೂ 50 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬಹುದು. ಇಂದು ಮೈಸೂರು ಜಿಲ್ಲೆಯಲ್ಲಿ ನಾಳೆ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಬರಗಾಲ ಪೀಡಿತ ತಾಲ್ಲೂಕುಗಳಿಗೆ ಭೇಟಿ ನೀಡುತ್ತಿದ್ದೇನೆ. ಪರಿಸ್ಥಿತಿಯನ್ನು ಅವಲೋಕನ ಮಾಡಿ ಮುಂದಿನ ದಿನಗಳಲ್ಲಿ ಸಾಮಾನ್ಯ ಜನರ ಪರವಾಗಿ, ರೈತರ ಪರವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಹೀಗಾಗಿ ವಸ್ತುಸ್ಥಿತಿಯನ್ನು ನಾನೇ ಕಣ್ಣಾರೆ ನೋಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಕ್ಷೇತ್ರಕ್ಕೆ ಬಂದಿದ್ದೇನೆ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಗದಗ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಈಗಾಗಲೇ ನಾನು ಮತ್ತು ಮುಖ್ಯಮಂತ್ರಿಗಳು ಕಲಬುರಗಿ, ಬೆಳಗಾವಿ, ಬೆಂಗಳೂರು ವಿಭಾಗಗಳಲ್ಲಿ ಬರ ಪರಿಶೀಲನೆಯನ್ನು ಮಾಡಿದ್ದೇವೆ. ಪರಿಸ್ಥಿತಿ ಬಹಳ ಗಂಭೀರವಾಗಿದೆ. ಇಂದು ಕೆ.ಆರ್ ಪೇಟೆ, ಕೆ. ಆರ್ ನಗರ ಮತ್ತು ಹುಣಸೂರಿಗೆ ಭೇಟಿ ನೀಡಿದ್ದೇನೆ. ಬರ ಪರಿಸ್ಥಿತಿಯ ಬಗ್ಗೆ ರೈತರಿಂದ, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದರು.
ಕೇಂದ್ರ ಸರ್ಕಾರದ ನಿಯಮಗಳಡಿಯಲ್ಲೇ ಬರ ಘೋಷಿಸಬೇಕು: ರಾಜ್ಯದ ಕಾನೂನಿನಡಿಯಲ್ಲಿ ಬರ ಘೋಷಣೆ ಮಾಡಿದರೆ ಪರಿಹಾರ ಸಿಗುವುದಿಲ್ಲ. ಕೇಂದ್ರ ಸರ್ಕಾರದ ನಿಯಮಗಳಡಿಯಲ್ಲೇ ಮಾಡಬೇಕು. ಹಾಗಾಗಿ 101 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದೇವೆ. ಇನ್ನೊಂದು ವಾರ ಬಿಟ್ಟು ಪರಿಶೀಲನೆ ನಡೆಸಿ, ಆಗ ಈ ವರ್ಗಕ್ಕೆ ಸೇರುವ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದರು.
ಇನ್ನೆರಡು ವಾರದೊಳಗೆ ಕೇಂದ್ರಕ್ಕೆ ಸಮಗ್ರ ಬರ ವರದಿಯನ್ನು ಸಲ್ಲಿಸುತ್ತೇವೆ. ಆ ಬಳಿಕ ಕೇಂದ್ರದ ತಂಡಗಳು ಬಂದು ಪರಿಶೀಲನೆ ನಡೆಸಿ, ನಂತರವಷ್ಟೇ ಪರಿಹಾರ ಬಿಡುಗಡೆಯಾಗುತ್ತದೆ. ಅದರ ಮೊದಲು ನಮಗೆ ಯಾವುದೇ ಪರಿಹಾರ ಹಣವನ್ನು ನಮಗೆ ಕೊಡುವುದಿಲ್ಲ ಎಂದರು.
ಮುಖ್ಯಮಂತ್ರಿಗಳು ಇಂದು ಗದಗದಲ್ಲಿ ಬರವೀಕ್ಷಣೆ ಮಾಡುತ್ತಿದ್ದಾರೆ. ನಾನು ಇಲ್ಲಿ ವೀಕ್ಷಣೆ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳ ಆದೇಶದಂತೆ ಎಲ್ಲ ಸಚಿವರು ತಮಗೆ ನಿಯೋಜಿಸಿರುವ ಜಿಲ್ಲೆಗಳ ಬರ ವೀಕ್ಷಣೆ ನಡೆಸುತ್ತಿದ್ದಾರೆ. ಆನಂತರ ಎಲ್ಲವನ್ನೂ ಒಟ್ಟಾಗಿ ಪರಿಶೀಲಿಸಿ, ರೈತರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು, ಇನ್ಶೂರೆನ್ಸ್ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದರು.
ಜೋಳಕ್ಕೆ ಬಿಳಿಸುಳಿ ರೋಗ ಬಂದಿದೆ. ಈ ರೋಗ ಇನ್ಶೂರೆನ್ಸ್‌ನಲ್ಲಿ ಕವರ್ ಆಗಲ್ಲ. ಹಾಗಾಗಿ ಇನ್ಶೂರೆನ್ಸ್ ಕಂಪನಿಯವರೊಂದಿಗೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಯತ್ನ ಮಾಡಲಾಗುವುದು. ಇದನೆಲ್ಲ ತಿಳಿದುಕೊಳ್ಳಲೆಂದೇ ಇಂದು ನಾನು ಬರವೀಕ್ಷಣೆಗೆ ಬಂದಿದ್ದೇನೆ ಎಂದರು.
ಅಂತಾರಾಷ್ಟ್ರೀಯ ಹವಾಮಾನ ವರದಿಯ ಪ್ರಕಾರ, ಸೆಪ್ಟೆಂಬರ್ ನಲ್ಲಿ ಒಂದನೇ ವಾರ ಅಥವಾ ಎರಡನೇ ವಾರದಲ್ಲಿ ಮಳೆ ಕಂಪ್ಲೀಟ್ ಆಗಿ ನಿಂತು ಹೋಗುತ್ತದೆ ಎಂಬ ಮಾಹಿತಿ ಇದೆ. ಎಲ್ ನಿನೋದಿಂದಾಗಿ 123 ವರ್ಷಗಳ ಬಳಿಕ ಈ ಪರಿಸ್ಥಿತಿ ಇದೆ. ಮಳೆ ಬರುತ್ತದೆ ಎಂದು ಹೇಳಲು ಆಗವುದಿಲ್ಲ. ಹೀಗಾಗಿ ರೈತರಿಗೆ ಮುಂದೆ ಯಾವ ರೀತಿ ಸಹಾಯ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದರು.
ಮೋಡ ಬಿತ್ತನೆ ಮಾಡಲು ಆದೇಶ ಕೊಟ್ಟಿದ್ದಾರೆ. ಈ ಬಗ್ಗೆ ನಮ್ಮ ಟೆಕ್ನಿಕಲ್ ತಂಡದವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಎಷ್ಟರ ಮಟ್ಟಿಗೆ ಸಹಾಯ ಆಗುತ್ತದೆ ಎಂಬುದನ್ನು ನೋಡಬೇಕು. ಟೆಕ್ನಿಕಲ್ ವರದಿಯ ಪ್ರಕಾರ ಹೆಚ್ಚು ಮಳೆ ಬರುವುದಿಲ್ಲ. ಅದು ತುಂತುರು ಮಳೆ ಬಂದ ಹಾಗೆ ಬರುತ್ತದೆ. ಜೊತೆಗೆ ಅದು ಬೆಳೆಗಳಿಗೆ ಸಾಕಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಇದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ ಎಂದರು.
ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ ತಂಬಾಕು ಸಸ್ಯ ಬೆಳೆಯುತ್ತಾರೆ. ಆದರೆ ಈ ಬಾರಿ ಹುಣಸೂರು ತಾಲ್ಲೂಕಿನಲ್ಲೇ 16 ಸಾವಿರಕ್ಕೂ ಹೆಚ್ಚು ಹೇಕ್ಟರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ. ಆದರೆ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ, ವಾಣಿಜ್ಯ ಬೆಳೆಗಳಿಗೆ ಪರಿಹಾರ ಇಲ್ಲ. ರಾಜ್ಯ ಸರ್ಕಾರದಿಂದ ಪರಿಹಾರ ನೀಡುವ ಕುರಿತು ಇಂದು ನಾನು ಬರವೀಕ್ಷಣೆ ಮಾಡಿದ ಬಳಿಕ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಂಪುಟದಲ್ಲಿ ಚರ್ಚೆ ಮಾಡಿ ರೈತರಿಗೆ ಏನು ಸಹಾಯ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಒಂದು ತಾಲ್ಲೂಕಿನಲ್ಲಿ 16 ಸಾವಿರ ಹೆಕ್ಟೇರ್ ನಷ್ಟ ಆಗಿದೆ ಎಂದರೆ, ಪಕ್ಕದ 6 ತಾಲ್ಲೂಕುಗಳಲ್ಲಿಯೂ ಇದುವೇ ಪರಿಸ್ಥಿತಿ ಇದೆ. ಹೀಗಾಗಿ ಈ ಕುರಿತು ಚರ್ಚೆ ಮಾಡುತ್ತೇವೆ.
ನೂತನ ಕಂದಾಯ ಕಟ್ಟಡ ನಿರ್ಮಾಣ: ಹುಣಸೂರು ತಾಲ್ಲೂಕಿನ ಕಂದಾಯ ಇಲಾಖೆಯ ಕಟ್ಟಡಗಳು ಸೋರುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಈ ಕುರಿತು ಪ್ರಸ್ತಾವನೆ ಬಂದಿದ್ದರೆ ಅದನ್ನು ಪರಿಶೀಲನೆ ಮಾಡಿ ಮುಂದೆ ನೂತನ ಕಟ್ಟಡವನ್ನು ನಿರ್ಮಿಸಲು ತೀರ್ಮಾನ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ, ಸ್ಥಳೀಯ ಮುಖಂಡರು ಜೊತೆಗಿದ್ದರು.

