ಬೆಂಗಳೂರು: ಮೈಸೂರು ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರಿದ್ದು, ಬರೋಬ್ಬರಿ 12 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಮೈಸೂರಿನ ಹುಣಸೂರು ತಾಲೂಕಿನಲ್ಲಿ ದಾಸನಪುರ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 12 ಕೋಟಿ ಮೌಲ್ಯದ ಡ್ರಗ್ಸ್ ದಾಸ್ತಾನು ಪತ್ತೆಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಮೈಸೂರು ಸಿದ್ಧಿಖಿ ಮೊಹಲ್ಲಾ ನಿವಾಸಿ ಮೊಹಮ್ಮದ್ ಇರ್ಫಾನ್ ಮತ್ತು ಹುಣಸೂರಿನ ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿಗಳು. ಇವರ ಜಮೀನಿನಲ್ಲಿ ಸಿಂಥೆಟಿಕ್ ಡ್ರಗ್ ತಯಾರಿಕೆ ಮತ್ತು ಸಂಗ್ರಹಣೆ ಮಾಡಲಾಗುತ್ತಿತ್ತು. ದಾಸನಪುರ ಗ್ರಾಮದಲ್ಲಿ ಇರುವ ಪಕ್ಕದ ಆಸ್ಪತ್ರೆ ಕಾವಲ್‌ನಲ್ಲಿ ಇದ್ದ ಒಂಟಿ ಮನೆಯಲ್ಲಿ ಈ ಚಟುವಟಿಕೆ ನಡೆಯುತ್ತಿತ್ತು. ಹುಣಸೂರು ಟೌನ್ ರೆಹಮತ್ ಮೊಹಲ್ಲಾ ನಿವಾಸಿಯ ಶೆಡ್‌ನಲ್ಲಿ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ತಿಳಿದುಬಂದಿದೆ.
ಪೊಲೀಸರು 7.35 ಕೆ.ಜಿ ತೂಕದ ಮೆಫೆಡ್ರೋನ್ ಮತ್ತು 41 ಕೆ.ಜಿ ತೂಕದ ಡ್ರಗ್ಸ್ ಪ್ರಿಕರ್ಸರ್ ವಸ್ತುಗಳನ್ನು ವಶಪಡಸಿಕೊಂಡಿದ್ದು, ಒಟ್ಟು 48 ಕೆ.ಜಿ ತೂಕದ ಡ್ರಗ್ಸ್ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

