ಮೈಸೂರು: ಮೈಸೂರಿನಲ್ಲಿ ಹೈಟೆಕ್ ಡ್ರಗ್ಸ್ ಲ್ಯಾಬ್ ಭೇದಿಸಿರುವುದಾಗಿ ದೆಹಲಿಯ ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಜೈಲಿನಿಂದ ಬಿಡುಗಡೆಯಾದ ಮಾಸ್ಟರ್ ಮೈಂಡ್ ಡ್ರಗ್ಸ್ ತಯಾರಿಕೆ ಕಲಿತು ಮೈಸೂರಿನಲ್ಲಿ ರಹಸ್ಯ ಲ್ಯಾಬ್ ಆರಂಭಿಸಿದ್ದ ಎಂದು ಎನ್ಸಿಬಿ ಸ್ಪಷ್ಟಪಡಿಸಿದೆ.
ಮೈಸೂರಿನಲ್ಲಿ ಪತ್ತೆಯಾಗಿದ್ದು ಫಿನಾಯಿಲ್ ಫ್ಯಾಕ್ಟರಿ ಎಂಬ ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆಗೆ ಹಿನ್ನಡೆಯಾಗಿದೆ. ಮೈಸೂರಿನಲ್ಲಿ ದಾಳಿ ನಡೆಸಿದ್ದ ದೆಹಲಿಯ ಎನ್ ಸಿಬಿ, ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದು, ಮೈಸೂರಿನಲಿ ಹೈಟೆಕ್ ಡ್ರಗ್ಸ್ ಲ್ಯಾಬ್ ಪತ್ತೆಯಾಗಿದೆ. ಗುಜರಾತ್ ಮತ್ತು ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ಮಾದಕ ದ್ರವ್ಯ ಜಾಲವನ್ನು ಭೇದಿಸಲಾಗಿದೆ. ಸುಮಾರು 10 ಕೋಟಿ ರೂಪಾಯಿ ಮೌಲ್ಯದ 35 ಕೆಜಿ ಮೆಫೆಡ್ರೋನ್ (MD), 1.8 ಕೆಜಿ ಅಫೀಮು ಮತ್ತು 25.6 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಪ್ರಕರಣದಲ್ಲಿ ರಾಜಸ್ಥಾನದ ಜಾಲೋರ್ ಜಿಲ್ಲೆಯ ಮಹೇಂದ್ರ ಕುಮಾರ್ ವಿಷ್ಣೋಯ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಎನ್ಸಿಬಿ ತಿಳಿಸಿದೆ.
ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಫಿನಾಯಿಲ್ ಫ್ಯಾಕ್ಟರಿ ಹೆಸರಲ್ಲಿ ಡ್ರಗ್ಸ್ ಘಟಕ ಕಾರ್ಯನಿರ್ವಹಿಸುತ್ತಿತ್ತು. ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಅತ್ಯಾಧುನಿಕ ಉಪಕರಣಗಳು ಮತ್ತು ಡ್ರಗ್ಸ್ ತಯಾರಿಕೆಗೆ ಬಳಸುವ ವಸ್ತುಗಳು ಪತ್ತೆಯಾಗಿವೆ. ಜೈಲಿನಲ್ಲಿದ್ದಾಗ ಡ್ರಗ್ಸ್ ತಯಾರಿಕೆಯನ್ನು ಕಲಿತಿದ್ದ ಮಾಸ್ಟರ್ ಮೈಂಡ್ ಮಹೇಂದ್ರ ಕುಮಾರ್, ಜಾಮೀನಿನ ಮೇಲೆ ಹೊರಬಂದ ಬಳಿಕ ಮೈಸೂರಿನಲ್ಲಿ ರಹಸ್ಯ ಪ್ರಯೋಗಾಲಯ ಸ್ಥಾಪಿಸಿದ್ದ ಎಂದು ಹೇಳಿದೆ.
ಬಂಧಿತ ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಲಾಗಿದೆ. ಮೈಸೂರಿನ ಈ ಘಟಕಕ್ಕೆ ರಾಸಾಯನಿಕ ಪೂರೈಸುತ್ತಿದ್ದ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ.

