HomeLatest Newsಇರಾನ್ ಪರಮಾಣು ಕೇಂದ್ರಗಳಲ್ಲಿ ಭಾರಿ ಚಟುವಟಿಕೆ : ಸ್ಯಾಟಲೈಟ್ ಚಿತ್ರಗಳಲ್ಲಿ ನಿಗೂಢ ದೃಶ್ಯ ಸೆರೆ...

ಇರಾನ್ ಪರಮಾಣು ಕೇಂದ್ರಗಳಲ್ಲಿ ಭಾರಿ ಚಟುವಟಿಕೆ : ಸ್ಯಾಟಲೈಟ್ ಚಿತ್ರಗಳಲ್ಲಿ ನಿಗೂಢ ದೃಶ್ಯ ಸೆರೆ ! ಏನನ್ನು ಮುಚ್ಚಿಡುತ್ತಿದೆ ಇರಾನ್?

ತೆಹ್ರಾನ್: ಕಳೆದ ವರ್ಷ ಇಸ್ರೇಲ್ ಮತ್ತು ಅಮೆರಿಕದ ಭೀಕರ ಬಾಂಬ್ ದಾಳಿಗೆ ಗುರಿಯಾಗಿದ್ದ ಇರಾನ್‌ನ ಎರಡು ಪ್ರಮುಖ ಪರಮಾಣು ಕೇಂದ್ರಗಳಲ್ಲಿ (Nuclear Sites) ಈಗ ಹೊಸದಾಗಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಪ್ಲಾನೆಟ್ ಲ್ಯಾಬ್ಸ್ PBC ಬಿಡುಗಡೆ ಮಾಡಿದ ಸ್ಯಾಟಲೈಟ್ ಚಿತ್ರಗಳು ಈ ರಹಸ್ಯವನ್ನು ಬಯಲು ಮಾಡಿದ್ದು, ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಮತ್ತೆ ಆರಂಭಿಸಿರುವ ಆತಂಕ ಮೂಡಿಸಿದೆ.

ಸ್ಯಾಟಲೈಟ್ ಕಣ್ಣಿಗೆ ಮಣ್ಣೆರಚುವ ತಂತ್ರ?

ವರದಿಗಳ ಪ್ರಕಾರ, ಇರಾನ್‌ನ ಇಸ್ಫಹಾನ್ ಮತ್ತು ನತಾನ್ಸ್ ಪರಮಾಣು ಕೇಂದ್ರಗಳ ಕಟ್ಟಡಗಳ ಮೇಲೆ ಹೊಸ ಛಾವಣಿಗಳನ್ನು ನಿರ್ಮಿಸಲಾಗಿದೆ. ಇದು ಕೇವಲ ನಿರ್ಮಾಣವಲ್ಲ, ಬದಲಿಗೆ ಸ್ಯಾಟಲೈಟ್ ಅಥವಾ ಉಪಗ್ರಹಗಳ ಕಣ್ಣಿನಿಂದ ನೆಲದ ಮೇಲೆ ಏನು ನಡೆಯುತ್ತಿದೆ ಎಂಬುದನ್ನು ಮರೆಮಾಚುವ ರಹಸ್ಯ ಹೊದಿಕೆಯಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಇರಾನ್ ಈಗಾಗಲೇ ಅಂತರಾಷ್ಟ್ರೀಯ ಪರಮಾಣು ಸಂಸ್ಥೆಯ (IAEA) ಅಧಿಕಾರಿಗಳಿಗೆ ತನಿಖೆ ನಡೆಸಲು ಅವಕಾಶ ನಿರಾಕರಿಸಿರುವುದರಿಂದ ಈ ಅನುಮಾನ ಮತ್ತಷ್ಟು ಬಲಗೊಂಡಿದೆ.

ಟ್ರಂಪ್ ಎಚ್ಚರಿಕೆ ಮತ್ತು ಅಮೆರಿಕ ನೌಕಾಪಡೆ ಜಮಾವಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ. “ಒಂದೋ ಪರಮಾಣು ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ದಾಳಿಯನ್ನು ಎದುರಿಸಲು ಸಿದ್ಧರಾಗಿ” ಎಂದು ಗುಡುಗಿದ್ದಾರೆ. ಇದಕ್ಕಾಗಿ ಅಮೆರಿಕವು USS ಅಬ್ರಹಾಂ ಲಿಂಕನ್ ಎಂಬ ಬೃಹತ್ ವಿಮಾನವಾಹಕ ನೌಕೆ ಮತ್ತು ಮಿಸೈಲ್ ವಿಧ್ವಂಸಕ ನೌಕೆಗಳನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇರಾನ್ನ ಹೊಸ ನಿರ್ಮಾಣದ ಬಗ್ಗೆ ತಜ್ಞರು ಏನ್ನುತ್ತಾರೆ?
ಇರಾನ್ನ ಪರಮಾಣು ಕೇಂದ್ರಗಳಲ್ಲಿ ಕಂಡುಬರುತ್ತಿರುವ ಹೊಸ ಮೂಲಸೌಕರ್ಯವು ಕೇವಲ ಪುನರ್ನಿರ್ಮಾಣದ ಕೆಲಸವಲ್ಲ, ಬದಲಿಗೆ ಅಲ್ಲಿ ನಡೆಯುತ್ತಿರುವ ರಕ್ಷಣಾತ್ಮಕ ಕಾರ್ಯಗಳನ್ನು ಮರೆಮಾಚುವ ಪ್ರಯತ್ನವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಾಷಿಂಗ್ಟನ್ ಮೂಲದ ‘ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮೋಕ್ರಸಿಸ್’ನ ಆಂಡ್ರಿಯಾ ಸ್ಟ್ರೈಕರ್ ಈ ಬಗ್ಗೆ ವಿವರಿಸುತ್ತಾ, “ಇರಾನ್ ತನ್ನ ಬಳಿಯಿರುವ ಯಾವುದೇ ಬೆಲೆಬಾಳುವ ಪರಮಾಣು ಆಸ್ತಿಗಳನ್ನು ಅಥವಾ ದಾಳಿಯಿಂದ ಪಾರಾದ ಸಾಮಗ್ರಿಗಳನ್ನು ಇಸ್ರೇಲ್ ಅಥವಾ ಅಮೆರಿಕದ ಕಣ್ಣಿಗೆ ಬೀಳದಂತೆ ರಕ್ಷಿಸಿಕೊಳ್ಳಲು ಮತ್ತು ವಶಪಡಿಸಿಕೊಳ್ಳಲು ಈ ರೀತಿ ಪ್ರಯತ್ನಿಸುತ್ತಿದೆ” ಎಂದು ತಿಳಿಸಿದ್ದಾರೆ.


ಹಿನ್ನೆಲೆ: ಜೂನ್ ತಿಂಗಳ ಭೀಕರ ದಾಳಿ

ಕಳೆದ ವರ್ಷ ಜೂನ್‌ನಲ್ಲಿ ನಡೆದ 12 ದಿನಗಳ ಯುದ್ಧದ ವೇಳೆ ಇಸ್ರೇಲ್ ಮತ್ತು ಅಮೆರಿಕ ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಿದ್ದವು. ವೈಟ್ ಹೌಸ್ ಈ ಹಿಂದೆ ಈ ದಾಳಿಗಳಿಂದ ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಹೇಳಿತ್ತು. ಆದರೆ ಈಗಿನ ಚಟುವಟಿಕೆಗಳು ಇರಾನ್ ಮತ್ತೆ ಪುಟಿದೇಳಲು ಯತ್ನಿಸುತ್ತಿರುವುದನ್ನು ಸೂಚಿಸುತ್ತಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular