ಮೈಸೂರು: ಕನ್ನಡ ನೆಲದ ಕವಿಗಳು, ಸಂತರು ಧರ್ಮಕ್ಕೆ ಸರಳವಾದ ಪರಿಭಾಷೆ ಕೊಟ್ಟಿದ್ದಾರೆ. ಧರ್ಮ ಮನುಷ್ಯನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುವುದಲ್ಲ, ಈ ಭೂಮಿಯನ್ನೇ ಸ್ವರ್ಗ ಸದೃಶವನ್ನಾಗಿ ಮಾಡುವುದೇ ಧರ್ಮದ ಉದ್ದೇಶ ಎಂದು ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿ ಅವರು ಮಾತನಾಡಿ, ಸರ್ವಜ್ಞ ಹಸಿದು ಬಂದವರಿಗೆ ಅನ್ನ ನೀರು ಕೊಡುವುದೇ ಧರ್ಮ ಎಂದು ಹೇಳಿದ್ದಾರೆ. ಧರ್ಮ ಎಂದರೆ ಇನ್ನೊಬ್ಬರನ್ನು ತುಳಿದು ಬದುಕುವುದಲ್ಲ ತಿಳಿದು ಬದುಕುವುದಾಗಿದೆ ಎಂದರು.
ಮೈಸೂರು ಸಾಂಸ್ಕೃತಿಕ ನಗರ, ಸುಸಂಸ್ಕೃತರ ನಗರ, ಅರಮನೆಗಳ ನಗರ, ಅರಿವಿನ ಮನೆಗಳ ನಗರ, ಸ್ವಚ್ಛ, ಶಿಸ್ತಿನ ನಗರ. ಮೈಸೂರು ದಸರಾ ವೈಭವದಿಂದ ನಡೆಯಲು ಕಾರಣರಾದ ಕಾಣುವ, ಕಾಣದ ಕೈಗಳಿಗೆ ಶರಣು ಶರಣಾರ್ಥಿ. ಕೊಪ್ಪಳ ಜಿಲ್ಲೆಯ ವಿದ್ವಾಂಸರ ಅಭಿಪ್ರಾಯದಂತೆ ಗಂಡುಗಲಿ ಕುಮಾರರಾಮನಿಂದ ದಸರಾ ಆರಂಭವಾಯಿತು. ತುಂಗಾ ಭದ್ರೆಯ ಮಹಾನವಮಿ ದಿಬ್ಬದಿಂದ ದಸರಾ ಮೈಸೂರಿಗೆ ಹಬ್ಬವಾಗಿ ಬಂದಿದೆ. ಒಂದು ಕಾಲಕ್ಕೆ ದೊರೆಗಳ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿ ವಿಶ್ವವಿಖ್ಯಾತವಾಗಿದೆ ಎಂದರು.
ಇಂತಹ ಧರೆಯ ಹಬ್ಬದ ಮೈಸೂರು ದಸರಾ ಉದ್ಘಾಟನೆಗೆ ನನಗೆ ಹೇಳಿದ್ದರು. ಇದನ್ನು ಉದ್ಘಾಟಿಸುವಷ್ಟು ದೊಡ್ಡವನು ನಾನಲ್ಲ, ಬಹುದೊಡ್ಡ ಜ್ಞಾನಿಗಳು, ವಿಜ್ಞಾನಿಗಳು, ಕೃಷಿಕರು, ಯತಿಗಳು, ರಾಜನೀತಿಜ್ಞರು, ರಾಜಕೀಯ ನೇತಾರರು ದಸರಾ ಉದ್ಘಾಟಿಸಿದ್ದಾರೆ, ಅವರು ಹಚ್ಚಿದ ದೀಪ ಆರದಿರಲಿ ಎಂದು ನಾನು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಲು ಬಂದಿದ್ದೇನೆ. ಸನ್ಯಾಸಿಯಾಗಿ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಬಿಟ್ಟು ಏನು ಮಾಡಲು ಸಾಧ್ಯ ಎಂದರು.
ಸನ್ಯಾಸಿಯಾಗಿ ಪ್ರಾರ್ಥಿಸುತ್ತೇನೆ. ರಾಜಕಾರಣಿಯಾಗಿದ್ದರೆ ಅನುದಾನ ಘೋಷಿಸಬಹುದಿತ್ತು. ಮುಗಿಲಿನಿಂದ ಮಳೆ, ಮಣ್ಣಿನಿಂದ ಬೆಳೆ ಬರಬೇಕು, ನಾಡಿನ ಜನರ ಮುಖದಲ್ಲಿ ಕಳೆ ಇರಬೇಕು. ಇದು ಸನ್ಯಾಸಿಗಳ ಪ್ರಾರ್ಥನೆ. 6.90 ಕೋಟಿ ಕನ್ನಡಿಗರ ಪರವಾಗಿ ದೀಪ ಹಚ್ಚಿದೆ, ಬೆಳಕು ತಾಯಿ ಚಾಮುಂಡೇಶ್ವರಿ ಕೊಡುತ್ತಾರೆ. ನಾನು ಉದ್ಘಾಟನೆಗೆ ಬಂದಿಲ್ಲ, ನಾಡಿಗಾಗಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ. ಅಲ್ಲೇ ಕೊಪ್ಪಳದಲ್ಲೇ ಪ್ರಾರ್ಥನೆ ಸಲ್ಲಿಸಬಹುದಿಲ್ಲ ಎನ್ನಬಹುದು. ಮೊಬೈಲ್ ಟವರ್ ನಂತೆ ಒಂದೊಂದು ಕಡೆ ಒಂದು ಟವರ್ ಇರುತ್ತದೆ. ಇಲ್ಲಿ ಟವರ್ ಆಫ್ ಪವರ್ ಚಾಮುಂಡೇಶ್ವರಿ ಬಳಿ ಪ್ರಾರ್ಥಿಸಲು ಬಂದಿದ್ದೇನೆ ಎಂದರು.
ದಸರಾ ಭೂತ, ಭವಿಷ್ಯ, ವರ್ತಮಾನಗಳ ತ್ರಿವೇಣಿ ಸಂಗಮ. ಈ ನೆಲದ ಸಂಸ್ಕೃತಿ ದೊಡ್ಡದು. ಸಹೃದಯರು ಇಲ್ಲಿನವರು. ನಾಡನ್ನು ಜಾತಿ ನೋಡಿ ಕಟ್ಟಬೇಡ, ನೀತಿ ನೋಡಿ ಕಟ್ಟು ಎಂದು ಹೇಳಿದ ನೆಲವಿದು. ಆದಿಕವಿ ಪಂಪನಿಂದ ಕುವೆಂಪುವರೆಗೆ ಮನುಷ್ಯನನ್ನು ಮನುಷ್ಯನಂತೆ ಪ್ರೀತಿಸಬೇಕು ಎಂದಿದ್ದಾರೆ. ಗ್ರಂಥಗಳು, ಕವಿಗಳು, ದಾರ್ಶನಿಕರು ಬೇರೆಯಾದರೂ ಸಾರಿದ ಸಾರ ಒಂದೇ ಎಂದರು.
ಹೂವು ಮತ್ತು ಸುಗಂಧವನ್ನು ಬೇರೆ ಇಡಲು ಸಾಧ್ಯವಿಲ್ಲ. ಸಕ್ಕರೆ ಮತ್ತು ಸಿಹಿಯನ್ನು ಬೇರೆ ಮಾಡಲು ಸಾಧ್ಯವಿಲ್ಲ. ಮೈಸೂರು ಅರಸರನ್ನು ಹೊರಗಿಟ್ಟು ದಸರಾ ನೆನೆಸಿಕೊಳ್ಳಲು ಸಾಧ್ಯವಿಲ್ಲ. ದೀಪ ಹಚ್ಚುವ ಕಾಲದಲ್ಲಿ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದಿಸಿದರು. ಆಗಿನ ಕಾಲದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಗೆ ನೂರಾರು ಎಕರೆ ಜಮೀನು ನೀಡಿದ್ದರು. ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ತೆರೆದಿದ್ದರು. ಮೈಸೂರು ರಾಜರು ಮಾಡಿದ ಕಾರ್ಯಗಳಿಗಾಗಿ ಗಾಂಧಿಯವರು ರಾಜಋಷಿ ಎಂದು ಕರೆದಿದ್ದರು ಎಂದರು.
ಮೈಸೂರಿನ ರಾಜರು ಈ ನೆಲದ ಮಣ್ಣನ್ನು ಆಳಿಲ್ಲ. ನಾಡಿನ ಜನರ ಮನಸ್ಸನ್ನು ಆಳಿದ್ದರು. ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕನ್ನಂಬಾಡಿ ಕಟ್ಟಿದ್ದರು. ಕನ್ನಂಬಾಡಿ ಕಟ್ಟುವಾಗ ಆರ್ಥಿಕ ಸಮಸ್ಯೆ ಎದುರಾದಾಗ ರಾಜ ಮಾತೆ ಕೆಂಪನಂಜಮ್ಮಣ್ಣಿ, ನಾಲ್ವಡಿ ಕೃಷ್ಣರಾಜ ಒಡೆಯರು ಅರಮನೆಯ ಆಭರಣಗಳನ್ನು ಒತ್ತೆ ಇಟ್ಟು, ಮಾರಿ ನಾಡಿನ ಜನರ ಸಲುವಾಗಿ ಕನ್ನಂಬಾಡಿ ಕಟ್ಟಿಸಿದ್ದರು. ಈ ನೆಲವನ್ನ ಆಳಿದ ರಾಜರು ನಮ್ಮನ್ನು ಆಳುವವರಲ್ಲ, ಕೆಳಗೆ ಕುಳಿತವರ ಅಳುವನ್ನು ಕೇಳುವವರು ಎನ್ನುವುದನ್ನು ಮೈಸೂರು ಮಹಾರಾಜರು ತೋರಿಸಿಕೊಟ್ಟಿದ್ದಾರೆ ಎಂದರು.
ಜನಪದ ಸಾಹಿತ್ಯ ಮಹಲಿನಿಂದ ಬಂದಿದ್ದಲ್ಲ ಮಣ್ಣಿನಲ್ಲಿ ಬದುಕುವವರಿಂದ ಬಂದಿದ್ದು. ಜ್ಯೋತಿಯಾಗು ಕಂದ ಜಗಕೆಲ್ಲ ಎಂದು ತಾಯಿ ತುತ್ತಿಡುವಾಗ ಹೇಳುತ್ತಿದ್ದರು. ಹೋಟೆಲ್ ನಲ್ಲಿ ಉಣ್ಣಲು ಹಣ ಬೇಕು, ತಾಯಿಯ ತುತ್ತು ತಿನ್ನಲು ಋಣ ಬೇಕು. ನೆಲದ ಋಣ ತೀರಿಸಲು ನಾವು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಶಿವರಾಜ್ ತಂಗಡಗಿ, ಡಾ.ಯತೀಂದ್ರ ಸಿದ್ಧರಾಮಯ್ಯ, ಬಸವಂತಪ್ಪ, ಪುಟ್ಟರಂಗಶೆಟ್ಟಿ, ಡಾ. ಅಜಯ್ ಸಿಂಗ್, ರಿಜ್ವಾನ್ ಹರ್ಷದ್, ಮಾಜಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಜಿ.ಟಿ. ದೇವೇಗೌಡ ಸೇರಿದಂತೆ ಹಲವರು ಇದ್ದರು.

