ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026 ರೋಚಕ ಹಂತಕ್ಕೆ ಬಂದು ತಲುಪಿದೆ. ಟಾಪ್ 4 ಸ್ಥಾನಗಳನ್ನು ಯಾವ ತಂಡ ಪಡೆದುಕೊಳ್ಳಲಿವೆ ಎಂಬ ಕುತೂಹಲ ಎದ್ದಿದ್ದು, ಪಂದ್ಯಗಳಲ್ಲಿ ರನ್ ಹೊಳೆಯೇ ಹರಿದುಬರುತ್ತಿದೆ.
ಈ ಹಿಂದಿನ ಐಪಿಎಲ್ ಪಂದ್ಯಗಳಲ್ಲಿ ತಂಡ 180ಕ್ಕಿಂತ ಹೆಚ್ಚು ರನ್ ಬಾರಿಸಿದರೆ ಅದನ್ನು ಕಠಿಣ ಗುರಿ ಎಂದು ಪರಿಗಣಿಸಲ್ಪಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. 230 ರನ್ ಬಾರಿಸಿದರೂ ಸಹ ಅದು ಚೇಸ್ ಮಾಡಬಹುದಾದ ಮೊತ್ತ. ಹೀಗೆ ಐಪಿಎಲ್‌ನಲ್ಲಿ ರನ್ ಮಟ್ಟ ಕಳೆದ ಐದಾರು ವರ್ಷಗಳಲ್ಲಿ ಈ ಪರಿ ಹೆಚ್ಚಲು ಕಾರಣವೇನು ಎಂಬ ಪ್ರಶ್ನೆ ಕ್ರಿಕೆಟ್ ಪ್ರಿಯರಲ್ಲಿ ಮನೆ ಮಾಡಿತ್ತು.
ಕೆಲವರು ಇದಕ್ಕೆ ಬ್ಯಾಟ್ಸ್‌ಮನ್‌ಗಳ ಅಬ್ಬರದ ಬ್ಯಾಟಿಂಗ್ ವೈಖರಿ ಇದಕ್ಕೆ ಕಾರಣ ಎಂದರೆ, ಇನ್ನೂ ಕೆಲವರು ಆಟದ ಪರಿ ಬದಲಾಗಿದೆ, ಪಿಚ್ ಕಾರಣ ಎಂದೆಲ್ಲ ಅಭಿಪ್ರಾಯಗಳನ್ನು ಹೊರಹಾಕಿದ್ದರು. ಇದೀಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಆಗಿರುವ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಈ ಕುರಿತು ಮಾತನಾಡಿದ್ದು, ಐಪಿಎಲ್‌ನಲ್ಲಿ ರನ್ ಹೊಳೆ ಹರಿಯಲು ಪ್ರಾಯೋಜಕರೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ.
ಹೌದು, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಮುರಳೀಧರನ್ ನಾವು ಐಪಿಎಲ್ ಆಡುತ್ತಿದ್ದ ಸಮಯದಲ್ಲಿ ಪವರ್‌ಪ್ಲೇನಲ್ಲಿ ತಂಡ ಒಂದು ವಿಕೆಟ್ ಕಳೆದುಕೊಂಡು 50ರಿಂದ 60 ರನ್ ಗಳಿಸಿದರೆ ಅದು ಒಳ್ಳೆಯ ರನ್ ಆಗಿತ್ತು. ಆದರೆ ಈಗ 70ರಿಂದ 80 ರನ್ ಬಾರಿಸಿದರೂ ಸಹ ಅದು ಸಾಧಾರಣ ರನ್ ಎಂಬಂತಾಗಿದೆ. ಬುಮ್ರಾ ರೀತಿಯ ಅನುಭವಿ ಬೌಲರ್‌ಗೆ 23 ವರ್ಷದ ಯುವ ಆಟಗಾರ ಸಲೀಲ್ ಅಬ್ಬರದ ಸಿಕ್ಸರ್ ಬಾರಿಸಿದ್ದನ್ನು ನೋಡಿ. ಈ ಹಿಂದೆ ಬ್ಯಾಟ್ಸ್‌ಮನ್‌ಗಳು ಬುಮ್ರಾ ರೀತಿಯ ಬೌಲರ್ ಮುಂದೆ ಹೇಗೆ ಪಾರಾಗಲಿ ಎಂದು ಯೋಚಿಸುತ್ತಿದ್ದರು, ಆದರೆ ಈಗ ಸಿಕ್ಸರ್ ಬಾರಿಸುತ್ತೇನೆ ಎಂದು ಯೋಚಿಸುತ್ತಾರೆ ಎಂದಿದ್ದಾರೆ.
ಹಾಗೆಯೇ ವೈಭವ್ ಸೂರ್ಯವಂಶಿಯಂತಹ ಚಿಕ್ಕ ಹುಡುಗ ದೊಡ್ಡ ಹೊಡೆತಗಳನ್ನು ಬಾರಿಸಿ ಸಿಕ್ಸರ್ ಬಾರಿಸುತ್ತಾನೆ. ಇದಕ್ಕೆ ಕಾರಣ ಪಿಚ್ ನಿರ್ಮಾಣ ಮಾಡಿರುವ ರೀತಿ. ಫ್ಲಾಟ್ ಪಿಚ್ ಮಾಡಿರುವ ಕಾರಣ ರನ್ ಹೊಳೆ ಹರಿದುಬರುತ್ತಿದೆ. ಒಳ್ಳೆಯ ಪಿಚ್‌ಗಳನ್ನು ಮಾಡಿದರೆ ದೊಡ್ಡ ಹೊಡೆತಗಳನ್ನು ಬಾರಿಸಲಾಗುವುದಿಲ್ಲ, ಸಿಕ್ಸರ್‌ಗಳು ಹರಿದುಬರದಿದ್ದರೆ ಮನರಂಜನೆ ಇರುವುದಿಲ್ಲ, ಪ್ರಾಯೋಜಕರೂ ಸಹ ಇಂತಹ ಪಿಚ್‌ಗಳನ್ನೇ ಬಯಸುತ್ತಾರೆ. ಹೀಗಾಗಿ ಅಬ್ಬರದ ಬ್ಯಾಟಿಂಗ್‌ಗೆ ಸಹಾಯವಾಗುವ ಪಿಚ್‌ಗಳನ್ನು ತಯಾರಿಸಲಾಗುತ್ತಿದ್ದು, ಬೌಲರ್‌ಗಳು ಇದಕ್ಕೆ ಹೊಂದಿಕೊಂಡು ಹೋಗಬೇಕಷ್ಟೇ ಎಂದು ಮುರಳೀಧರ್ ಹೇಳಿದ್ದಾರೆ.

