ಬೃಹನ್ ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ) ಮೈತ್ರಿಕೂಟ ಗೆಲುವು ಸಾಧಿಸಿದೆ. 25 ವರ್ಷಗಳ ನಂತರ ದೇಶದ ಅತ್ಯಂತ ಶ್ರೀಮಂತ ಪಾಲಿಕೆಯ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ ಠಾಕ್ರೆ ಸೋದರ ಸಂಬಂಧಿಗಳು. ಈಗ ಮುಂಬೈ ಮೇಯರ್ ಯಾರು? ಎಂಬುದು ಪ್ರಶ್ನೆ.
ಜನವರಿ 22ರಂದು ಮುಂಬೈ ನಗರದ ಮೇಯರ್ ಮೀಸಲಾತಿ ನಿಗದಿ ಮಾಡಲಾಗಿದೆ. ಬಳಿಕ ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಮತ್ತು ಉಪ ಮೇಯರ್‌ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದೆ.
ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯ ಮೇಯರ್ ಪಟ್ಟ ಸಾಮಾನ್ಯ ವರ್ಗದ ಒಬ್ಬ ಮಹಿಳೆಗೆ ಮೀಸಲಾಗಿದೆ ಎಂದು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಮುಂಬೈನ ಮೇಯರ್ ಚುನಾವಣೆ ಈ ವರ್ಷದ ಅತ್ಯಂತ ಸೂಕ್ಷ್ಮವಾದ ಚುನಾವಣೆ ಎಂದು ಹೇಳಲಾಗುತ್ತಿದೆ.
ಮುಂಬೈ ಹೊರತುಪಡಿಸಿ ಪುಣೆ, ನಾಗ್ಪುರ ಮತ್ತು ನಾಸಿಕ್ ಮಹಾನಗರ ಪಾಲಿಕೆಗಳಲ್ಲಿಯೂ ಮಹಿಳಾ ಮೀಸಲಾತಿ ನಿಗದಿ ಮಾಡಲಾಗಿದೆ. ಈ ಬೆಳವಣಿಗೆ ನಗರ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಬಲಪಡಿಸುವ ಪ್ರಮುಖ ಹೆಜ್ಜೆ ಎಂದು ನೋಡಲಾಗುತ್ತಿದೆ.
ಮೇಯರ್ ಚುನಾವಣೆಗೆ ಈಗ ಮೀಸಲಾತಿಯನ್ನು ಅಂತಿಮಗೊಳಿಸುವುದರೊಂದಿಗೆ, ಚುನಾವಣಾ ವೇಳಾಪಟ್ಟಿ ಪ್ರಕಟವಾಗಲು ದಿನಗಣನೆ ಆರಂಭವಾಗಿದೆ. ಮುಂಬೈನಲ್ಲಿ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳ ಚುನಾವಣೆಗಳು ಜನವರಿ 30 ಅಥವಾ 31ರಂದು ನಡೆಯುವ ಸಾಧ್ಯತೆಯಿದೆ ಎಂದು ಟೈಮ್ಸ್ ವರದಿ ಮಾಡಿದೆ.
ನಿಖರವಾದ ದಿನಾಂಕದ ಬಗ್ಗೆ ಬಿಎಂಸಿ ಕಾರ್ಯದರ್ಶಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಜ್ಯದ ಉಳಿದ 28 ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಮತ್ತು ಉಪ ಮೇಯರ್ ಅವರನ್ನು ಸಹ ಅದೇ ದಿನ ಆಯ್ಕೆ ಮಾಡಲಾಗುತ್ತದೆ. ಈ ಚುನಾವಣೆಗಳ ದಿನಾಂಕ ಮತ್ತು ಸಮಯವನ್ನು ನಿರ್ಧರಿಸುವ ಅಧಿಕಾರವು ಆಯಾ ವಿಭಾಗೀಯ ಆಯುಕ್ತರಿಗೆ ಇರುತ್ತದೆ.
ನಾಮ ಪತ್ರಗಳನ್ನು ಸಲ್ಲಿಸುವುದರೊಂದಿಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಎಲ್ಲಾ 29 ಮಹಾನಗರ ಪಾಲಿಕೆಗಳ ಅಭ್ಯರ್ಥಿಗಳು ಜನವರಿ 27 ಮತ್ತು ಜನವರಿ 28ರ ನಡುವೆ ತಮ್ಮ ನಾಮಪತ್ರಗಳನ್ನು ಕಾರ್ಯದರ್ಶಿಗೆ ಸಲ್ಲಿಸಬೇಕಾಗುತ್ತದೆ. ನಾಮ ಸಲ್ಲಿಕೆ ಅವಧಿ ಮುಗಿದ ನಂತರ, ಅವುಗಳನ್ನು ಪರಿಶೀಲಿಸಲಾಗುತ್ತದೆ.
ಮೇಯರ್ ಮತ್ತು ಉಪ ಮೇಯರ್ ಚುನಾವಣೆಯ ಬಳಿಕ ಹೊಸದಾಗಿ ಆಯ್ಕೆಯಾದ ಕಾರ್ಪೊರೇಟರ್‌ಗಳ ಮೊದಲ ಸಾಮಾನ್ಯ ಸಭೆ ನಡೆಯುತ್ತದೆ. ಇದು ಹೊಸ ನಾಯಕತ್ವದ ಔಪಚಾರಿಕ ಆರಂಭವನ್ನು ಸೂಚಿಸುತ್ತದೆ.
ನಿಗದಿತ ವೇಳಾಪಟ್ಟಿಯ ಪ್ರಕಾರ ಮೇಯರ್ ಚುನಾವಣೆ ಅನುಮತಿ ಕೋರಿ ಕಾರ್ಯದರ್ಶಿಗಳು ವಿಭಾಗೀಯ ಆಯುಕ್ತರಿಗೆ ಪ್ರಸ್ತಾವನೆಯನ್ನು ಕಳುಹಿಸುತ್ತಾರೆ. ವರದಿಯ ಪ್ರಕಾರ ಜನವರಿ 24 ಮತ್ತು 25ರಂದು ವಿಭಾಗೀಯ ಆಯುಕ್ತರು ಸಭೆಯ ದಿನಾಂಕವನ್ನು ಅಂತಿಮಗೊಳಿಸುತ್ತಾರೆ ಮತ್ತು ಚುನಾವಣಾ ಅಧಿಕಾರಿಯನ್ನು ನೇಮಿಸುತ್ತಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಜನವರಿ 27 ಮತ್ತು 28 ರಂದು ನಡೆಯಲಿದ್ದು, ಅಂತಿಮ ಚುನಾವಣೆಯು ಜನವರಿ 30 ಅಥವಾ 31 ರಂದು ನಡೆಯಲಿದೆ. ಮುಂಬೈ ಮಹಾನಗರ ಆಡಳಿತ ನಡೆಸುವ ಮೇಯರ್ ಯಾರು? ಎಂಬುದು ಸದ್ಯದ ಕುತೂಹಲವಾಗಿದೆ.

