ಹಿಂದಿ ವೆಬ್ ಸರಣಿಗಳು ಹಾಗೂ ಭೋಜ್‌ಪುರಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ನಟಿಯೊಬ್ಬಳು ಮಹಾರಾಷ್ಟ್ರದ ಮುಂಬೈನಲ್ಲಿ ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾಳೆ. ಥಾಣೆ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ನಟಿಯನ್ನು ವಶಕ್ಕೆ ಪಡೆದಿದ್ದು, ಈ ವೇಳೆ ಇಬ್ಬರು ನೊಂದ ಮಹಿಳೆಯರನ್ನು ರಕ್ಷಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ವಾಗ್‌ಲೆ ಎಸ್ಟೇಟ್ ವ್ಯಾಪ್ತಿಯ ಪಡ್ವಾಲ್ ನಗರ ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಥಾಣೆ ಅಪರಾಧ ವಿಭಾಗದ ಮಾನವ ಅಕ್ರಮ ಸಾಗಣೆ ತಡೆ ಘಟಕದ ಸಿಬ್ಬಂದಿ ಸೆಪ್ಟೆಂಬರ್ 26 ರಂದು ಕಾರ್ಯಾಚರಣೆ ನಡೆಸಿ ಬಲೆ ಹೆಣೆದಿದ್ದರು.
ಸದರಿ ಭೋಜ್‌ಪುರಿ ನಟಿಯೇ ಈ ಜಾಲದ ಮುಖ್ಯ ರೂವಾರಿಯಾಗಿದ್ದು, ಮಹಿಳೆಯರನ್ನು ಅನೈತಿಕ ಚಟುವಟಿಕೆಗೆ ತಳ್ಳಲು ಯತ್ನಿಸುತ್ತಿದ್ದಾಳೆ ಎನ್ನಲಾದ ಸುಳಿವು ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ದಾಳಿ ನಡೆಸಿದ ಪೊಲೀಸರು, ನಟಿಯನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಅದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ ಸುರಕ್ಷಿತ ಕೇಂದ್ರಕ್ಕೆ ಕಳುಹಿಸಲಾಗಿದೆ.
ಬಂಧಿತ ನಟಿಯು ಹಲವಾರು ಭೋಜ್‌ಪುರಿ ಮತ್ತು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದು, ವಿವಿಧ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾದ 10 ಕ್ಕೂ ಹೆಚ್ಚು ಜನಪ್ರಿಯ ವೆಬ್ ಸರಣಿಗಳಲ್ಲಿಯೂ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ನಟಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೂಕ್ತ ವಿಧಿಗಳು ಹಾಗೂ ಅನೈತಿಕ ವ್ಯಾಪಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾನೂನು ಪ್ರಕ್ರಿಯೆಯ ಕಾರಣಕ್ಕೆ ನಟಿಯ ಹೆಸರನ್ನು ಪೊಲೀಸರು ಅಧಿಕೃತವಾಗಿ ಹೊರಹಾಕಿಲ್ಲ.
ಪ್ರಕರಣದ ಕುರಿತು ಥಾಣೆ ಅಪರಾಧ ವಿಭಾಗದ ಪೊಲೀಸರು ವಿಸ್ತೃತ ತನಿಖೆ ಮುಂದುವರಿಸಿದ್ದಾರೆ. ಈ ಜಾಲದ ಹಿಂದೆ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಹಾಗೂ ರಕ್ಷಿಸಲ್ಪಟ್ಟ ಮಹಿಳೆಯರನ್ನು ಯಾವ ರೀತಿ ಈ ದಂದೆಗೆ ತರಲಾಗಿತ್ತು ಎಂಬ ಅಂಶಗಳ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ನಟಿಯ ಮೇಲಿನ ಆರೋಪಗಳು ನ್ಯಾಯಾಲಯದಲ್ಲಿ ಇನ್ನೂ ಸಾಬೀತಾಗಬೇಕಿದ್ದು, ವಿಚಾರಣೆ ಪ್ರಗತಿಯಲ್ಲಿದೆ.

