ದಾವಣಗೆರೆ: ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಫೆಬ್ರವರಿ 2ರಂದು ವೃದ್ಧೆ ಕೊಲೆ ಮಾಡಿ 8.44 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಅಭಿಷೇಕ್ ಬಂಧಿತ ಆರೋಪಿ. ಎಂಎಸ್ಸಿ ಓದಿದ್ದ ಅಭಿಷೇಕ್ ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಸುಮಾರು 20 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಸಾಲ ನೀಡಿದವರ ಕಾಟ ಜಾಸ್ತಿ ಆಗುತ್ತಿದ್ದಂತೆ ಊರು ಬಿಟ್ಟು ಹೋಗಿದ್ದ. ಎರಡು ತಿಂಗಳು ಅಲ್ಲಿ ಇಲ್ಲಿ ಸುತ್ತಾಡಿದ್ದ ಆರೋಪಿ ಫೆಬ್ರವರಿ 2ರಂದು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದ ಊರ ಹಬ್ಬಕ್ಕೆ ಬಂದಿದ್ದ.
ಈ ವೇಳೆ ವೃದ್ಧೆ ಕಮಲಮ್ಮನ ಒಡವೆ ದೋಚಲು ಸಂಚು ರೂಪಿಸಿದ್ದ. ಊರಿನ ಜನ ಹಬ್ಬದ ಖುಷಿಯಲ್ಲಿದ್ದಾಗ ಸದ್ದಿಲ್ಲದೆ ವೃದ್ಧೆ ಕಮಲಮ್ಮ ಅವರ ಮನೆಗೆ ಪ್ರವೇಶಿಸಿದ್ದ. ಆರೋಪಿ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಒಡವೆಗಳನ್ನು ಒತ್ತೆ ಇಟ್ಟು ಹಣ ಪಡೆದು ಮತ್ತೆ ಆನ್ಲೈನ್ ಗೇಮ್ ಆಡಿದ್ದ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

