ತಿರುವನಂತಪುರಂ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇರಳದ ತಿರುವನಂತಪುರಂನ ಖಾಸಗಿ ಹೋಟೆಲ್ನ ಲಿಫ್ಟ್ನಲ್ಲಿ ಸಿಲುಕಿಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಅವರನ್ನು ಹಾಗೂ ಇತರರನ್ನು ಸುರಕ್ಷಿತವಾಗಿ ರಕ್ಷಿಸಿದರು.
ರೋಟರಿ ಕ್ಲಬ್ ಆಫ್ ತಿರುವನಂತಪುರಂ ಈಸ್ಟ್ನ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲು ಹೋಟೆಲ್ಗೆ ಬಂದಿದ್ದ ತರೂರ್, ಲಿಫ್ಟ್ಗೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ಅದು ತಾಂತ್ರಿಕ ದೋಷದಿಂದ ಮಧ್ಯದಲ್ಲೇ ಸ್ಥಗಿತಗೊಂಡಿತು. ಪರಿಣಾಮ ತರೂರ್ ಸೇರಿದಂತೆ ಒಟ್ಟು 9 ಮಂದಿ ಲಿಫ್ಟ್ನಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಿಲುಕಿಕೊಂಡಿದ್ದರು.
ಸಂಜೆ 7.37 ಗಂಟೆಗೆ ತಿರುವನಂತಪುರಂ ಅಗ್ನಿಶಾಮಕ ಕೇಂದ್ರಕ್ಕೆ ಮಾಹಿತಿ ತಲುಪಿದ ಕೂಡಲೇ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿತು. ಅದಕ್ಕೂ ಮುನ್ನ ಹೋಟೆಲ್ ಸಿಬ್ಬಂದಿ ಲಿಫ್ಟ್ ಬಾಗಿಲನ್ನು ಭಾಗಶಃ ತೆರೆಯಲು ಪ್ರಯತ್ನಿಸಿದ್ದು, ಕಬ್ಬಿಣದ ರಾಡ್ಗಳ ಸಹಾಯದಿಂದ ಒಳಗಿದ್ದವರನ್ನು ಹೊರತೆಗೆದುಕೊಳ್ಳಲು ಯತ್ನಿಸಿದ್ದರೂ ಅದು ಯಶಸ್ವಿಯಾಗಲಿಲ್ಲ.
ನಂತರ ಅಗ್ನಿಶಾಮಕ ಸಿಬ್ಬಂದಿ ಹೈಡ್ರಾಲಿಕ್ ಸ್ಪ್ರೆಡರ್ ಉಪಕರಣದ ಸಹಾಯದಿಂದ ಲಿಫ್ಟ್ ಬಾಗಿಲನ್ನು ಅಗಲಿಸಿ, ಸಂಜೆ 7.51 ಗಂಟೆ ಸುಮಾರಿಗೆ ಶಶಿ ತರೂರ್ ಹಾಗೂ ಉಳಿದವರನ್ನು ಸುರಕ್ಷಿತವಾಗಿ ಹೊರತೆಗೆದರು. ಲಿಫ್ಟ್ ಉದ್ದೇಶಿತ ಮಹಡಿಗೆ ತಲುಪುವ ಮುನ್ನವೇ ನಿಂತಿದ್ದರಿಂದ ಈ ಪರಿಸ್ಥಿತಿ ಉಂಟಾಗಿತ್ತು. ರಕ್ಷಣೆಯ ಬಳಿಕ ನಗುತ್ತಲೇ ಹೊರಬಂದ ಶಶಿ ತರೂರ್, ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದ ತಿಳಿಸಿ, “ನಿಮಗೆಲ್ಲ ಧನ್ಯವಾದಗಳು. ಅತ್ಯುತ್ತಮ ಕೆಲಸ ಮಾಡಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಿಬ್ಬಂದಿ ಅವರ ಆರೋಗ್ಯ ವಿಚಾರಿಸಿದಾಗ, “ಒಳಗಿದ್ದ ಎಲ್ಲರೂ ಸುರಕ್ಷಿತರಾಗಿದ್ದಾರೆ,” ಎಂದು ಉತ್ತರಿಸಿದರು.
ಘಟನೆಯ ಬಳಿಕ ಸಾಮಾಜಿಕ ಜಾಲತಾಣ X ನಲ್ಲಿ ತಮ್ಮ ಅನುಭವ ಹಂಚಿಕೊಂಡ ತರೂರ್, “ಲಿಫ್ಟ್ನಲ್ಲಿ ಅರ್ಧ ಗಂಟೆ ಸಿಲುಕಿದ್ದು ದೊಡ್ಡ ಸಮಸ್ಯೆಯಾಗಿರಲಿಲ್ಲ. ಆದರೆ ಅದರ ಪರಿಣಾಮವಾಗಿ ನನ್ನ ಮುಂದಿನ ಎರಡು ಕಾರ್ಯಕ್ರಮಗಳಿಗೆ ತಡವಾಯಿತು. ಆದರೂ ನಮ್ಮ ಕರೆ ಬಂದ ಕೆಲವೇ ನಿಮಿಷಗಳಲ್ಲಿ ಅತ್ಯಂತ ವೇಗವಾಗಿ, ಸಮರ್ಥವಾಗಿ ಕಾರ್ಯನಿರ್ವಹಿಸಿದ ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ದಳಕ್ಕೆ ಹೃತ್ಪೂರ್ವಕ ಧನ್ಯವಾದಗಳು,” ಎಂದು ಬರೆದುಕೊಂಡಿದ್ದಾರೆ. ನಂತರ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿಯನ್ನು ಶಶಿ ತರೂರ್ ಗೌರವಿಸಿ, ಅವರ ಕ್ಷಿಪ್ರ ಹಾಗೂ ಸಮರ್ಥ ಸೇವೆಗೆ ಅಭಿನಂದನೆ ಸಲ್ಲಿಸಿದರು.

