ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಉಸಿರಾಟದ ಸಮಸ್ಯೆಯಿಂದಾಗಿ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಚೆನ್ನಮ್ಮ ಅವರನ್ನು ಜುಲೈ 15 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಂದಿನಿಂದ ನುರಿತ ವೈದ್ಯರ ತಂಡ ನಿರಂತರ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದೆ.
ಚಿಕಿತ್ಸೆ ಸಂಪೂರ್ಣವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರಲ್ಲಿ ಆತಂಕ ಮನೆ ಮಾಡಿದೆ. ಚೆನ್ನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮಾಅಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಸೇರಿದಂತೆ ದೇವೇಗೌಡರ ಕುಟುಂಬ ಶುಕ್ರವಾರ ಸಂಜೆಯಿಂದಲೂ ಆಸ್ಪತ್ರೆಯಲ್ಲಿಯೇ ಇದ್ದು, ಚನ್ನಮ್ಮ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಪತ್ನಿ ಚೆನ್ನಮ್ಮ ಆರೋಗ್ಯ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿರುವುದನ್ನು ಕಂಡು ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರಿಟ್ಟಿದ್ದಾರೆ. ಮತ್ತೊಂದೆಡೆ ತಾಯಿ ಆರೋಗ್ಯ ಗಂಭೀರವಾಗಿರುವ ಕಾರಣ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಇಂದಿನ ಎಲ್ಲಾ ಸಭೆಗಳು ಹಾಗೂ ಇತರ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ. ತಾಯಿ ಆರೋಗ್ಯದ ಬಗ್ಗೆ ಆತಂಕದಲ್ಲಿರುವ ಕುಮಾರಸ್ವಾಮಿ ಭಾವುಕರಾಗಿದ್ದು, ವೈದ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಯ ಬಳಿಕ ಆಸ್ಪತ್ರೆ ಆಡಳಿತದಿಂದ ಚೆನ್ನಮ್ಮ ಆರೋಗ್ಯದ ಬಗ್ಗೆ ಬುಲೆಟಿನ್ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

