ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರೇ ಗಮನಿಸಿ: ಏಪ್ರಿಲ್ 10 ರಿಂದ ಟೋಲ್ ಪ್ಲಾಜಾಗಳಲ್ಲಿ ನಿಮ್ಮ ಜೇಬಿನಲ್ಲಿರುವ ನಗದು ಹಣ ಕೆಲಸ ಮಾಡುವುದಿಲ್ಲ! ನಗದು ಪಾವತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವ NHAI, ಕೇವಲ ಡಿಜಿಟಲ್ ಪಾವತಿಗೆ ಮಾತ್ರ ಅವಕಾಶ ನೀಡಿದೆ. ಇದರೊಂದಿಗೆ ಟೋಲ್ ದರಗಳಲ್ಲಿಯೂ ಏರಿಕೆಯಾಗಿದ್ದು, ಫಾಸ್ಟಾಗ್ ಬಳಕೆದಾರರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು. ದೇಶಾದ್ಯಂತ ಇರುವ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಏಪ್ರಿಲ್ 10 ರಿಂದ ಕೇವಲ ಡಿಜಿಟಲ್ ಪಾವತಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಇನ್ನು ಮುಂದೆ ನಗದು ಪಾವತಿಯನ್ನು (Cash Payment) ಸ್ವೀಕರಿಸಲಾಗುವುದಿಲ್ಲ.ಏಪ್ರಿಲ್ 10 ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಹಣ ಪಡೆಯುವುದನ್ನು ಅಧಿಕೃತವಾಗಿ ನಿಲ್ಲಿಸಲಾಗುವುದು. ವಾಹನ ಸವಾರರು ಕಡ್ಡಾಯವಾಗಿ ಫಾಸ್ಟಾಗ್ (FASTag) ಅಥವಾ ಯುಪಿಐ (UPI) ಮೂಲಕವೇ ಡಿಜಿಟಲ್ ಪಾವತಿ ಮಾಡಬೇಕಾಗುತ್ತದೆ.
ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಟೋಲಿಂಗ್ ವಿಧಾನಕ್ಕೆ ಬದಲಾಗುವ ಪ್ರಕ್ರಿಯೆಯ ಭಾಗವಾಗಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ತನ್ನ ವ್ಯಾಪ್ತಿಯ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಪ್ಲಾಜಾಗಳಲ್ಲಿ (NHTP) ನಗದು ವಹಿವಾಟನ್ನು ರದ್ದುಗೊಳಿಸಿದೆ. ಡಿಜಿಟಲ್ ಪಾವತಿಯಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಕಾಯುವ ಸಮಯ ಉಳಿತಾಯವಾಗಲಿದ್ದು, ಸಂಚಾರ ಸುಗಮವಾಗಲಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.
ಟೋಲ್ ದರ ಏರಿಕೆ
NHAI ತೆಗೆದುಕೊಂಡಿರುವ ಈ ನಿರ್ಧಾರವು ದೇಶಾದ್ಯಂತ ಸುಮಾರು 1,150 ಟೋಲ್ ಪ್ಲಾಜಾಗಳ ಮೇಲೆ ಪರಿಣಾಮ ಬೀರಲಿದೆ. ಇದರ ಜೊತೆಗೆ ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ದರವನ್ನು ಶೇ. 10 ರಷ್ಟು ಹೆಚ್ಚಿಸಲಾಗಿದೆ. ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ದರವು ಶೇ. 1.5 ರಿಂದ ಶೇ. 3.5 ರಷ್ಟು ಏರಿಕೆಯಾಗಿದೆ.
ಹೊಸ ಟೋಲ್ ದರಗಳು (ಉದಾಹರಣೆ):
- ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ: ಕಾರು/ಎಸ್‌ಯೂವಿ ಟೋಲ್ ದರ 665 ರೂ. ನಿಂದ 675 ರೂ. ಗೆ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳ ದರ 330 ರೂ. ನಿಂದ 335 ರೂ. ಗೆ ಏರಿದೆ.
- ಗೋರಖ್‌ಪುರ ಲಿಂಕ್ ಎಕ್ಸ್‌ಪ್ರೆಸ್‌ವೇ: 4-ಚಕ್ರದ ವಾಹನಗಳಿಗೆ 295 ರೂ. (10 ರೂ. ಏರಿಕೆ) ಹಾಗೂ ದ್ವಿಚಕ್ರ ವಾಹನಗಳಿಗೆ 145 ರೂ. ನಿಗದಿಪಡಿಸಲಾಗಿದೆ.
- ಈ ಹೊಸ ದರಗಳು ಬಸ್, ಟ್ರಕ್ ಮತ್ತು ಇತರ ವಾಣಿಜ್ಯ ವಾಹನಗಳಿಗೂ ಅನ್ವಯವಾಗಲಿವೆ.
ವಾಹನ ಸವಾರರಿಗೆ ಸೂಚನೆ:
ಟೋಲ್ ಪ್ಲಾಜಾಗಳಲ್ಲಿ ಪಾವತಿ ವಿಷಯದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಏಪ್ರಿಲ್ 10 ರೊಳಗೆ ನಿಮ್ಮ ಫಾಸ್ಟಾಗ್ ಅನ್ನು ರೀಚಾರ್ಜ್ ಮಾಡಿಕೊಳ್ಳಲು ಮತ್ತು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಕೊಳ್ಳಲು ಸೂಚಿಸಲಾಗಿದೆ.
ಫಾಸ್ಟಾಗ್ ವಾರ್ಷಿಕ ಪಾಸ್ ದರ ಏರಿಕೆ:
NHAI ಇತ್ತೀಚೆಗಷ್ಟೇ ಫಾಸ್ಟಾಗ್ ವಾರ್ಷಿಕ ಪಾಸ್ ದರಗಳನ್ನು ಹೆಚ್ಚಿಸಿದೆ. 3,000 ರೂ. ಇದ್ದ ಪಾಸ್ ದರವನ್ನು 75 ರೂ. ಹೆಚ್ಚಿಸಿ 3,075 ರೂ. ಗೆ ನಿಗದಿಪಡಿಸಲಾಗಿದೆ. ಈ ಹೊಸ ದರಗಳು 2026-27ರ ಹಣಕಾಸು ವರ್ಷಕ್ಕೆ ಅನ್ವಯವಾಗಲಿದ್ದು, ಏಪ್ರಿಲ್ 1 ರಿಂದಲೇ ಜಾರಿಗೆ ಬಂದಿವೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008 ರ ಪ್ರಕಾರ ಪ್ರತಿ ವರ್ಷ ಟೋಲ್ ದರಗಳನ್ನು ಪರಿಷ್ಕರಿಸಲಾಗುತ್ತದೆ.
ವಾರ್ಷಿಕ ಟೋಲ್ ಪಾಸ್ ಸೌಲಭ್ಯ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಕಾರು, ಜೀಪು, ವ್ಯಾನ್ ಮತ್ತು ವಾಣಿಜ್ಯೇತರ ವಾಹನಗಳಿಗೆ ಈ ಸೌಲಭ್ಯವಿದ್ದು, ಇದರ ಮೂಲಕ ವರ್ಷಕ್ಕೆ ಒಮ್ಮೆ ಹಣ ಪಾವತಿಸಿ ಅಥವಾ 200 ಬಾರಿ ಟೋಲ್ ಪ್ಲಾಜಾಗಳ ಮೂಲಕ ಸಂಚರಿಸಬಹುದು. ಅವಧಿ ಮುಗಿದ ನಂತರ ಇದನ್ನು ಮತ್ತೆ ನವೀಕರಿಸಿಕೊಳ್ಳಬೇಕಾಗುತ್ತದೆ.

