HomeJobsಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದ ಭದ್ರತೆ ಮತ್ತು ಆರ್ಥಿಕತೆ ಬಲಗೊಂಡಿದೆ:ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದ ಭದ್ರತೆ ಮತ್ತು ಆರ್ಥಿಕತೆ ಬಲಗೊಂಡಿದೆ:ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿಯವರು ಜೆನ್ ಝಿ ಬಗ್ಗೆ ಸ್ಪಷ್ಟವಾದ ಸಕಾರಾತ್ಮಕ ನಿಲುವು ಹೊಂದಿದ್ದಾರೆ:ಬಸವರಾಜ ಬೊಮ್ಮಾಯಿ

​ಗದಗ: ಕಳೆದ 12 ವರ್ಷಗಳ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತದ ಭದ್ರತೆ, ಅಖಂಡತೆ ಮತ್ತು ಆರ್ಥಿಕತೆ ಅತ್ಯಂತ ಬಲಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ 80ನೇಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಗದಗ ನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಧ್ವಜಾರೋಹಣ ನೇರವೇರಿಸಿ, ಮಾತನಾಡಿದರು. ​​”ಹಿಂದಿನ ಆಡಳಿತಗಳಲ್ಲಿ ಭಾರತದ ಸುರಕ್ಷತೆಗೆ ಧಕ್ಕೆ ಬರುವುದನ್ನು ನಾವು ನೋಡಿದ್ದೇವೆ. ಆದರೆ ಕಳೆದ 12ವರ್ಷಗಳಲ್ಲಿ ದೇಶದ ಅಖಂಡತೆ, ಏಕತೆ ಹಾಗೂ ಭದ್ರತೆ ಗಟ್ಟಿಯಾಗಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಯಾವುದೇ ಅವಕಾಶ ನೀಡದೆ, ಗಡಿ ಭದ್ರತೆಯನ್ನು ಕಟ್ಟುನಿಟ್ಟಾಗಿ ಕಾಯಲಾಗಿದೆ. ಗಡಿಯಾಚೆಯಿಂದ ಆಕ್ರಮಣ ಬಂದರೂ ಸೂಕ್ತ ಪ್ರತ್ಯುತ್ತರ ನೀಡುವ ದಿಟ್ಟ ನಿಲುವನ್ನು ಪ್ರಧಾನಿ ಮೋದಿ ತಳೆದಿದ್ದಾರೆ,” ಎಂದು ಹೇಳಿದರು.

​ಆರ್ಥಿಕ ಪ್ರಗತಿ ಮತ್ತು ಸಮಾಜದ ಏಳಿಗೆ:

​ಕೇಂದ್ರ ಸರ್ಕಾರದ ದಿಟ್ಟ ಆರ್ಥಿಕ ಕ್ರಮಗಳಿಂದಾಗಿ ಸುಮಾರು 25 ಕೋಟಿ ಜನರು ಬಡತನದಿಂದ ಮೇಲೆ ಬಂದಿದ್ದಾರೆ. ಸುಮಾರು 7 ಕೋಟಿಗೂ ಹೆಚ್ಚು ಯುವಕರಿಗೆ ಉದ್ಯೋಗ ಸಿಕ್ಕಿದೆ. ಮುದ್ರಾ ಯೋಜನೆಯೊಂದರ ಅಡಿಯಲ್ಲೇ 6 ಕೋಟಿಗೂ ಹೆಚ್ಚು ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ಹಣಕಾಸಿನ ನೆರವು ನೀಡಲಾಗಿದೆ. ಕಿಸಾನ್ ಸಮ್ಮಾನ್, ಕೃಷಿ ಸಿಂಚಾಯಿ ಹಾಗೂ ಫಸಲ್ ಬಿಮಾ ಯೋಜನೆ ಯೋಜನೆಗಳಿಂದ ರೈತರಿಗೆ ಆಸರೆ ಸಿಕ್ಕಿದೆ. ಜಲ ಜೀವನ ಮಿಷನ್ ಯೋಜನೆಯ ಮೂಲಕ ಕೊಳವೆ ಬಾವಿಗಳ ಮೇಲಿನ ಅವಲಂಬನೆ ತಪ್ಪಿಸಿ, ಪ್ರತಿಯೊಂದು ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

​’ವಿಕಸಿತ ಭಾರತ 2047’ರ ಗುರಿ:

​”ಪ್ರತಿಯೊಬ್ಬ ಪ್ರಜೆಯಲ್ಲಿ ಆತ್ಮವಿಶ್ವಾಸ ಮತ್ತು ಭರವಸೆ ಮೂಡಿಸಿರುವುದು ಈ ಆಡಳಿತದ ದೊಡ್ಡ ಸಾಧನೆ. ಪ್ರಸ್ತುತ ಭಾರತವು ಜಗತ್ತಿನಲ್ಲಿ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದ್ದು, ಇನ್ನು ಎರಡು ವರ್ಷಗಳಲ್ಲಿ ಜಪಾನ್ ಅನ್ನು ಹಿಂದಿಕ್ಕಿ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. 2047ರ ವೇಳೆಗೆ ಭಾರತವನ್ನು ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿರುವ *’ವಿಕಸಿತ ಭಾರತ’*ವನ್ನಾಗಿ ಮಾಡುವುದು ನಮ್ಮ ಗುರಿಯಾಗಿದ್ದು, ಅದಕ್ಕೆ ‘ಆತ್ಮನಿರ್ಭರ ಭಾರತ’ವೇ ಅಡಿಪಾಯವಾಗಿದೆ,” ಎಂದು ಅವರು ಪ್ರತಿಪಾದಿಸಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಭಾರತದ ಜನಸಂಖ್ಯೆ 33 ಕೋಟಿಯಷ್ಟಿತ್ತು. ಬ್ರಿಟಿಷರು ದೇಶವನ್ನು ಬಿಟ್ಟು ಹೋದಾಗ ಭಾರತವು ತೀವ್ರ ಹಸಿವು, ನಿರುದ್ಯೋಗ ಮತ್ತು ನಕಾರಾತ್ಮಕ ಆರ್ಥಿಕ ಬೆಳವಣಿಗೆಯಿಂದ ಕೂಡಿತ್ತು. 1940 ರಿಂದ 1947 ರವರೆಗಿನ ಏಳು ವರ್ಷಗಳ ಕಾಲ ದೇಶವು ಆರ್ಥಿಕವಾಗಿ ಹಿನ್ನಡೆ ಅನುಭವಿಸಿತ್ತು” ಎಂದು ತಿಳಿಸಿದರು.

​ಬಾರ್ಡೋಲಿ ಹಾಗೂ ಚಂಪಾರಣ್ಯ ಸತ್ಯಾಗ್ರಹಗಳ ಸ್ಮರಣೆ:

“ನಿಜವಾದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ಬಂದದ್ದು ದುಡಿಯುವ ವರ್ಗ ಮತ್ತು ರೈತರು ಧುಮುಕಿದಾಗ. ಗುಜರಾತಿನ ಬಾರ್ಡೋಲಿಯಲ್ಲಿ ನಡೆದ ದೊಡ್ಡ ಪ್ರಮಾಣದ ರೈತರ ಸತ್ಯಾಗ್ರಹ, ಚಂಪಾರಣ್ಯದ ಇಂಡಿಗೋ ಸತ್ಯಾಗ್ರಹ ಹಾಗೂ ಟೀ ತೋಟದ ಕಾರ್ಮಿಕರ ಹೋರಾಟಗಳು ಭಾರತಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದವು” ಎಂದರು.

​ದೇಶ ವಿಭಜನೆಯ ನೋವು:

“ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಬಂದರೂ ಸಹ, ದೇಶದ ವಿಭಜನೆ ಅತ್ಯಂತ ಹಿಂಸಾತ್ಮಕವಾಗಿತ್ತು. ಸಾವಿರಾರು ಜನರು ಪ್ರಾಣ ಕಳೆದುಕೊಂಡರು, ಮನೆ-ಮಠಗಳನ್ನು ಹಾಗೂ ಬದುಕನ್ನು ಕಳೆದುಕೊಂಡರು. ಗರ್ಭಿಣಿಯರು, ಮಕ್ಕಳು ಎನ್ನದೆ ಅನೇಕರು ಹತ್ಯೆಗೀಡಾದರು. ಸ್ವಾತಂತ್ರ್ಯದ ಜೊತೆಗೆ ನಮಗೆ ದೇಶ ವಿಭಜನೆಯ ಕಪ್ಪು ಚುಕ್ಕೆ ಮತ್ತು ನೋವಿನ ಬರೆ ಬ್ರಿಟಿಷರ ಬಳುವಳಿಯಾಗಿ ಸಿಕ್ಕಿತು” ಎಂದು ವಿಷಾದ ವ್ಯಕ್ತಪಡಿಸಿದರು.

​ಕೃಷಿ ಕ್ಷೇತ್ರ ಮತ್ತು ಹಸಿರು ಕ್ರಾಂತಿ:

“ಸ್ವಾತಂತ್ರ್ಯದ ನಂತರ ದೇಶವನ್ನು ಕಟ್ಟುವ ಪ್ರಯತ್ನದಲ್ಲಿ ಧಾರ್ಮಿಕ ಹಾಗೂ ಜಾತಿಯ ಸಂಘರ್ಷಗಳಿಂದಾಗಿ ಪ್ರಗತಿ ಕುಂಠಿತಗೊಂಡಿತ್ತು. ಮೊದಲ ಮೂರು ಪಂಚವಾರ್ಷಿಕ ಯೋಜನೆಗಳಲ್ಲಿ 15 ವರ್ಷಗಳು ಕೃಷಿ ಕ್ಷೇತ್ರಕ್ಕೆ ಸೂಕ್ತ ಆದ್ಯತೆ ನೀಡಲಿಲ್ಲ. ಇದರಿಂದಾಗಿ ಹಸಿವು ಮುಕ್ತ ಭಾರತ ನಿರ್ಮಾಣ ಸಾಧ್ಯವಾಗಲಿಲ್ಲ. ಆದರೆ ತದನಂತರ ಬಂದ ‘ಹಸಿರು ಕ್ರಾಂತಿ’ಯಿಂದಾಗಿ ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು” ಎಂದು ವಿವರಿಸಿದರು.

​ಮೋದಿ ಆಡಳಿತದಲ್ಲಿ ಹಸಿವು ಮುಕ್ತ ಭಾರತ:

“ಇಂದು ಭಾರತದಲ್ಲಿ 130 ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದರೂ, ಪ್ರತಿಯೊಬ್ಬರಿಗೂ ಆಹಾರ ಸಿಗುವಂತೆ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಾಡುತ್ತಿದೆ. ಪ್ರಸ್ತುತ ಹಸಿವು ಮುಕ್ತ ಭಾರತ ನಿರ್ಮಾಣವಾಗಿದೆ. “ಕಳೆದ 12 ವರ್ಷಗಳ ಹಿಂದಿನ ಆಡಳಿತವನ್ನು ನೆನಪಿಸಿಕೊಂಡರೆ, ಭಾರತವು ಆರ್ಥಿಕವಾಗಿ ತಳಮಟ್ಟದಲ್ಲಿದ್ದು ಜಾಗತಿಕವಾಗಿ ಮನ್ನಣೆ ರಹಿತವಾಗಿತ್ತು. ಸ್ವಾಭಿಮಾನಕ್ಕೆ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವಂತಹ ಆಡಳಿತವನ್ನು ನಾವು ನೋಡಿದ್ದೆವು. ಆದರೆ ಪ್ರಸ್ತುತ ದೇಶವು ಪ್ರಗತಿಯತ್ತ ಸಾಗುತ್ತಿದೆ” ಎಂದು ಹೇಳಿದರು.

​ಜೆನ್ ಝಿಗೆ ಮೋದಿ ಮೇಲೆ ನಂಬಿಕೆ:

ಇಂದಿನ ಯುವಜನರು ಉನ್ನತ ಆಕಾಂಕ್ಷೆಗಳನ್ನು ಹೊಂದಿದ್ದಾರೆ ಮೋದಿಯವರಿಂದ ಮಾತ್ರ ಬದಲಾವಣೆ ಸಾಧ್ಯ ಎನ್ನುವುದನ್ನು ಜೆನ್ ಝಿ ಅರಿತಿರುವುದರಿಂದ ಅವರು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಜೆನ್ ಝಿ ಬಗ್ಗೆ ಸ್ಪಷ್ಟವಾದ ಸಕಾರಾತ್ಮಕ ನಿಲುವು ಹೊಂದಿದ್ದಾರೆ.ದೇಶದ ಯುವ ಶಕ್ತಿಯನ್ನು ದೇಶ ಕಟ್ಟಲು ಬಳಕೆ ಮಾಡಬೇಕೆಂದು ಅವರಿಗೆ ಮಾರ್ಗದರ್ಶನವನ್ನು ನೀಡಲಾಗುತ್ತಿದೆ ಎಂದು ಅವರು ಒತ್ತಿಹೇಳಿದ್ದಾರೆ.

​2047 ರ ವೇಳೆಗೆ ಭಾರತವು ಜಾಗತಿಕ ಮಟ್ಟದಲ್ಲಿ ಅಗ್ರ ಶಕ್ತಿಯಾಗಿ ಹೊರಹೊಮ್ಮುವುದನ್ನು ತಡೆಯಲು ಪ್ರಪಂಚದ ಯಾವುದೇ ಶಕ್ತಿಗೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಜೊತೆಗೆ ಭಾರತದ ಭವಿಷ್ಯವು ದೇಶದ ಪ್ರಜೆಗಳ ಸಾಮೂಹಿಕ ಕಠಿಣ ಪರಿಶ್ರಮ ಮತ್ತು ದೇಶಭಕ್ತಿಯನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ.

​ದೇಶವೇ ಮೊದಲು: ಭಾರತೀಯ ಜನತಾ ಪಾರ್ಟಿಯು (ಬಿಜೆಪಿ) “ರಾಷ್ಟ್ರವೇ ಮೊದಲು” ಎಂಬ ತತ್ವದ ಮೇಲೆ ನಿಂತಿದೆ ಹಾಗೂ ಬಲವಾದ ಮತ್ತು ಸ್ವಾವಲಂಬಿ ಭಾರತವನ್ನು (ವಿಕಸಿತ ಭಾರತ) ನಿರ್ಮಿಸಲು ಬದ್ಧವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಬ್ರಿಟಿಷ್ ಪ್ರೊಫೆಸರ್ ಒಬ್ಬರು “ದೇಶಕ್ಕಾಗಿ ನೀನೇನು ಮಾಡುತ್ತೀಯ?” ಎಂದು ಕೇಳಿದಾಗ, ಆ ವಿದ್ಯಾರ್ಥಿ “ನನ್ನ ಪ್ರಾಣವನ್ನೇ ನೀಡುತ್ತೇನೆ” ಎಂದು ಉತ್ತರಿಸುತ್ತಾನೆ. ಆಗ ಆ ಪ್ರೊಫೆಸರ್ ಅದನ್ನು ತಿದ್ದುತ್ತಾ, “ಸ್ವತಂತ್ರ ಭಾರತದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವುದಕ್ಕಿಂತ, ದೇಶಕ್ಕಾಗಿ ಜೀವಿಸಬೇಕು, ಕೆಲಸ ಮಾಡಬೇಕು ಮತ್ತು ದೇಶವನ್ನು ಕಟ್ಟಬೇಕು” ಎಂದು ಹೇಳಿದ್ದನ್ನು ಬೊಮ್ಮಾಯಿಯವರು ಸ್ಮರಿಸಿದ್ದಾರೆ.

​ಭವಿಷ್ಯದ ಸಂಕಲ್ಪ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ಭಾರತದ ಭವ್ಯ ಭವಿಷ್ಯವನ್ನು ನಿರ್ಮಿಸಲು ಸಂಪೂರ್ಣ ಸಮರ್ಪಣಾ ಭಾವದ ಸಂಕಲ್ಪವನ್ನು ಮಾಡಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

​ಸ್ವಾತಂತ್ರ್ಯ ಹೋರಾಟದಲ್ಲಿ ಗದಗ ಜಿಲ್ಲೆಯ ಕೊಡುಗೆ ಅನನ್ಯ:ಬಸವರಾಜ ಬೊಮ್ಮಾಯಿ

​ಗದಗ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗದಗ ಜಿಲ್ಲೆ ಹಾಗೂ ಈ ಭಾಗದ ಹೋರಾಟಗಾರರ ಕೊಡುಗೆ ಅತ್ಯಂತ ಹಿರಿದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

​ಗದಗಿನಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ, ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಮುಂಚಿತವಾಗಿ, 1824ರಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಧೀರ ಹೋರಾಟ ನಡೆಸಿ ಬಲಿದಾನ ಗೈದ ಇತಿಹಾಸ ನಮ್ಮದಾಗಿದೆ ಎಂದು ಸ್ಮರಿಸಿದರು.

​ನರಗುಂದ ಬಾಬಾಸಾಹೇಬರ ಹೋರಾಟ:

ನರಗುಂದದ ಬಾಬಾಸಾಹೇಬರು ಬ್ರಿಟಿಷರ ವಿರುದ್ಧ 8 ದಿನಗಳ ಕಾಲ ದಿಟ್ಟವಾಗಿ ಹೋರಾಡಿ ದೇಶಪ್ರೇಮ ಮೆರೆದಿದ್ದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಅಂದಾನಪ್ಪ ದೊಡ್ಡಮೇಟಿಯವರು ಮಹಾತ್ಮ ಗಾಂಧೀಜಿಯವರಿಂದ ಪ್ರಭಾವಿತರಾಗಿ, 1942ರ ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದರು. ಅದೇ ರೀತಿ ಆಲೂರು ವೆಂಕಟರಾಯರು ಕೂಡ ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

​ನೆೇಕರರ ಕಾಯಕ ಸ್ವಾತಂತ್ರ್ಯ:

ಗದಗ್ ಹಾಗೂ ಬೆಟಗೇರಿಯ ನೇಕಾರರು ಖಾದಿ ನೇಯುವ ಮೂಲಕ ಕೇವಲ ಕಾಯಕವನ್ನಷ್ಟೇ ಮಾಡದೆ, ಸ್ವದೇಶಿ ಜಾಗರಣೆ ಹಾಗೂ ಸ್ವದೇಶಿ ಚಳವಳಿಯನ್ನು ಅತ್ಯಂತ ಪ್ರಬಲವಾಗಿ ಮುನ್ನಡೆಸಿದರು. ಪ್ರತಿ ಹಳ್ಳಿಯಲ್ಲೂ ಸ್ವಾತಂತ್ರ್ಯ ಹೋರಾಟಗಾರರನ್ನು ಹೊಂದಿದ ಹೆಮ್ಮೆ ಗದಗ ಜಿಲ್ಲೆಗೆ ಸಲ್ಲುತ್ತದೆ ಎಂದು ತಿಳಿಸಿದರು.

​ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಪಕ್ಷದ ಹಿರಿಯ ಮುಖಂಡರು, ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular